ರಸ್ತೆ ಇಲ್ಲದೆ ಎಳನೀರು ನಿವಾಸಿಗಳಿಗೆ ತಾಲೂಕು ಕೇಂದ್ರ ಭಾರಿ ದೂರ । ರಸ್ತೆ ನಿರ್ಮಾಣಕ್ಕೆ ಉಸ್ತುವಾರಿ ಸಚಿವ ಗುಂಡೂರಾವ್ ಪತ್ರ । ರಸ್ತೆ ನಿರ್ಮಾಣವಾದರೆ ಪ್ರವಾಸೋದ್ಯಮವೂ ಅಭಿವೃದ್ಧಿ । ಚಿಕ್ಕಮಗಳೂರು-ಬೆಳ್ತಂಗಡಿ ನಡುವೆ ಹತ್ತಿರದ ಸಂಪರ್ಕ
ತಾಲೂಕಿನ ಗಡಿ ಗ್ರಾಮವಾದ ಎಳನೀರು ಎಂಬ ಪ್ರದೇಶದ ಜನ ಕೇವಲ 9 ಕಿ.ಮೀ. ರಸ್ತೆಯ ಕೊರತೆಯಿಂದ ಬೆಳ್ತಂಗಡಿಗೆ ಬರಬೇಕಾದರೆ 120 ಕಿ.ಮೀ. ಸಂಚರಿಸಿ ಬರಬೇಕು. ಆದರೆ ಇಲ್ಲಿ 9 ಕಿ.ಮೀ. ರಸ್ತೆ ಮಾಡಿದರೆ ತಾಲೂಕು ಕೇಂದ್ರ ಹತ್ತಿರವಾಗುತ್ತದೆ. ಈಗ ವಾಹನ ಸಂಚಾರಕ್ಕೆ 10 ಪಟ್ಟು ಹೆಚ್ಚು ಸುತ್ತಾಡಿ ಬರುವುದು ತಪ್ಪುತ್ತದೆ.
ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಅತೀ ಹತ್ತಿರದ ಸಂಪರ್ಕವಾಗಿರುವ ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿದೆ. ಈ 9 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಿದರೆ ಪರಿಸರದ ಜನರ ಸಹಿತ ಉಭಯ ಜಿಲ್ಲೆಗಳ ಮಂದಿಗೆ ಸಮಯ ಹಾಗೂ ಇಂಧನ ಉಳಿತಾಯದ ಜತೆ ಹೆಚ್ಚಿನ ಅನುಕೂಲವಾಗಲಿದೆ.
ಪ್ರಸ್ತುತ ದಿಡುಪೆ-ಎಳನೀರು ರಸ್ತೆಯಲ್ಲಿ ಬೇಸಿಗೆ ಕಾಲದಲ್ಲಿ ಕೇವಲ ಜೀಪು, ಬೈಕುಗಳಷ್ಟೇ ಸಂಚರಿಸಲು ಸಾಧ್ಯ. ಮಳೆ ಆರಂಭವಾದರೆ ಈ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸುವುದಿಲ್ಲ. ಎಳನೀರು ಭಾಗದ ಜನ ತಮ್ಮ ಪಂಚಾಯಿತಿ, ತಾಲೂಕು ಕೇಂದ್ರದ ಕೆಲಸಗಳಿಗೆ 120 ಕಿ.ಮೀ. ದೂರವನ್ನು ಕುದುರೆಮುಖ-ಬಜೆಗೋಳಿ-ಗುರುವಾಯನಕೆರೆ ಮೂಲಕ ಕ್ರಮಿಸಿ ತಲುಪಬೇಕಿದೆ.ಅರಣ್ಯ ಇಲಾಖೆ ಒಪ್ಪಿಗೆ ಇಲ್ಲ:
ಸುಮಾರು ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿ ಬಗ್ಗೆ ಸಂಸೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ವನ್ಯಜೀವಿ ವಿಭಾಗದ ಡಿಎಫ್ ಒ ಸಹಿತ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಸಾಕಷ್ಟು ಚರ್ಚೆಗಳ ಬಳಿಕ ರಸ್ತೆ ಅಭಿವೃದ್ಧಿ ಬಗ್ಗೆ ಭರವಸೆಯು ಸಿಕ್ಕಿತ್ತು. ಆದರೆ ಇದು ಸರ್ಕಾರದ ಮಟ್ಟದಲ್ಲಿ ಮುಂದುವರಿಯದ ಕಾರಣ ಯೋಜನೆ ಇಂದಿನವರೆಗೂ ನನೆಗುದಿಗೆ ಬಿದ್ದಿದೆ. ಹಲವು ಅಭಿವೃದ್ಧಿ:
ದಿಡುಪೆ-ಎಳನೀರು ರಸ್ತೆ ನಿರ್ಮಾಣಗೊಂಡರೆ ಸಂಸೆ ಕಡೆಯ ಜನರಿಗೆ ಧರ್ಮಸ್ಥಳ, ಬೆಳ್ತಂಗಡಿ ಮೊದಲಾದ ಪ್ರದೇಶಗಳು ಹಾಗೂ ಬೆಳ್ತಂಗಡಿ ಭಾಗದ ಜನರಿಗೆ ಕಳಸ, ಶೃಂಗೇರಿ, ಹೊರನಾಡು ಮೊದಲಾದ ಪ್ರದೇಶಗಳಿಗೆ ಪ್ರಯಾಣಿಸಲು ನೂರಾರು ಕಿ.ಮೀ. ಉಳಿತಾಯವಾಗುತ್ತದೆ. ಈ ರಸ್ತೆ ವ್ಯಾಪ್ತಿಯಲ್ಲಿರುವ ಹಲವಾರು ಜಲಪಾತ, ಪ್ರೇಕ್ಷಣೀಯ ಸ್ಥಳಗಳು ಅಭಿವೃದ್ಧಿ ಹೊಂದಿ ಪ್ರವಾಸೋದ್ಯಮ ಇನ್ನಷ್ಟು ಚಿಗುರಿಕೊಳ್ಳಲಿದೆ. ಎರಡು ಜಿಲ್ಲೆಗಳಲ್ಲಿರುವ ಅನೇಕ ಧಾರ್ಮಿಕ ಕೇಂದ್ರಗಳು ಇನ್ನಷ್ಟು ಹತ್ತಿರದ ಸಂಪರ್ಕ ಪಡೆಯಲಿವೆ. -------------------ದಿಡುಪೆ-ಎಳನೀರು ರಸ್ತೆ ಅಭಿವೃದ್ಧಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಕ್ತ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಮನ್ವಯ ಸಾಧಿಸಿ ರಸ್ತೆ ಅಭಿವೃದ್ಧಿಗೆ ಬೇಕಾದ ಅಗತ್ಯ ಕಾರ್ಯ ಹಾಗೂ ಪ್ರಾಧಿಕಾರಗಳಿಂದ ಅನುಮತಿ ಪಡೆಯುವ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ.
ಈ ರಸ್ತೆ ಅಭಿವೃದ್ಧಿಯ ಕನಸು ಇನ್ನೂ ನನಸಾಗುವ ಹಂತ ತಲುಪಿಲ್ಲ. ತಾಲೂಕು ಕೇಂದ್ರ ಪಂಚಾಯಿತಿಗಳಿಗೆ ದ್ರಾವಿಡ ಪ್ರಾಣಾಯಾಮ ಮಾಡಬೇಕಾದ ನಮ್ಮ ಪರಿಸ್ಥಿತಿಗೆ ಈ ರಸ್ತೆ ಅಭಿವೃದ್ಧಿ ಮೂಲಕ ಮುಕ್ತಿ ಸಿಗಬೇಕಿದೆ. ಇದಕ್ಕಾಗಿ ಹಲವು ದಶಕಗಳಿಂದ ಕಾದು ಕುಳಿತಿದ್ದೇವೆ.
ಜಯರಾಮ್, ಸ್ಥಳೀಯ, ಎಳನೀರು.