9 ವಿ.ವಿ. ಮುಚ್ಚಲು ಹೊರಟಿರುವುದು ಅವೈಜ್ಞಾನಿಕ: ಡಾ.ಸುರೇಂದ್ರ ಶೆಟ್ಟಿ

KannadaprabhaNewsNetwork | Published : Mar 11, 2025 12:49 AM

ಸಾರಾಂಶ

ರಾಜ್ಯ ಬಜೆಟಿನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನವನ್ನು ನೀಡದಿರುವುದು ಮತ್ತು ೯ ಹೊಸ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಬಜೆಟಿನಲ್ಲಿ ಯಾವುದೇ ಅನುದಾನವನ್ನು ಘೋಷಿಸದೆ ಮುಚ್ಚಲು ಹೊರಟಿರುವುದು ಅವೈಜ್ಞಾನಿಕ ಮತ್ತು ದುರಂತ ಎಂದು ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಸುರೇಂದ್ರ ಶೆಟ್ಟಿ, ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ರಾಜ್ಯ ಬಜೆಟಿನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನವನ್ನು ನೀಡದಿರುವುದು ಮತ್ತು ೯ ಹೊಸ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಬಜೆಟಿನಲ್ಲಿ ಯಾವುದೇ ಅನುದಾನವನ್ನು ಘೋಷಿಸದೆ ಮುಚ್ಚಲು ಹೊರಟಿರುವುದು ಅವೈಜ್ಞಾನಿಕ ಮತ್ತು ದುರಂತ ಎಂದು ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಸುರೇಂದ್ರ ಶೆಟ್ಟಿ, ಆತಂಕ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಮಂಡಿಸಿರುವ 16ನೇ ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರ ಮುಚ್ಚಲು ಉದ್ದೇಶಿಸಿರುವ ಬಹುಪಾಲು ವಿಶ್ವವಿದ್ಯಾಲಯಗಳು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮತ್ತು ಶೋಷಿತ ವರ್ಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸ್ಥಾಪಿತವಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ಅವರೆಲ್ಲರೂ ಶಿಕ್ಷಣದಿಂದ ವಂಚಿರಾಗಲಿದ್ದಾರೆ. ಅಲ್ಲದೆ ಸಂಶೋಧನಾ ಅಧ್ಯಯನಕ್ಕೆ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಅವಕಾಶದಿಂದಲೂ ವಂಚಿತರಾಗಲಿದ್ದಾರೆ ಎಂದಿದ್ದಾರೆ.

ಅನೇಕ ವರ್ಷಗಳಿಂದ ಶಿಕ್ಷಣ ತಜ್ಞರು, ಶಿಕ್ಷಣ ಪ್ರಿಯರ ಆಗ್ರಹ ಹಾಗು ಅನೇಕ ಅಧ್ಯಯನಗಳ ಫಲಶೃತಿಯಿಂದ ಸ್ಥಾಪಿಸಲಾಗಿದ್ದ ವಿಶ್ವವಿದ್ಯಾಲಯಗಳು ಇವು. ರಾಜ್ಯ ಸರ್ಕಾರ ಏಕಾಏಕಿ ತೆಗೆದುಕೊಂಡಿರುವ ಈ ನಿರ್ಧಾರ ಶೈಕ್ಷಣಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ.

ಜಿಲ್ಲಾವಾರು ಯೂನಿವರ್ಸಿಟಿ ಸ್ಥಾಪನೆಯಿಂದ ಆರ್ಥಿಕ ಒತ್ತಡವಿಲ್ಲದೆ ಆಯಾ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮ್ಮ ಸಂಶೋಧನೆ ಹಾಗು ವಿದ್ಯಾಭ್ಯಾಸವನ್ನು ಮುಂದುವರಿಸಲು ಒಂದು ದೊಡ್ಡ ಅವಕಾಶವನ್ನು ಮಾಡಿಕೊಡಲಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣದ ಮೇಲಿನ ಖರ್ಚು ಎಂಬುದು ಮುಂದಿನ ಮಾನವ ಸಂಪನ್ಮೂಲವನ್ನು ನಿರ್ಮಿಸುವ ಬಂಡವಾಳವಾಗಿರುತ್ತದೆ. ಶಿಕ್ಷಣದ ಮೇಲೆ ಹೂಡಿಕೆ ಮಾಡುವುದರಿಂದ ರಾಜ್ಯವು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿಯೂ ಬಲಗೊಳ್ಳಲಿದೆ. ಸರ್ಕಾರವು ಅನುದಾನ ಘೋಷಿಸದೆ ತೋರುತ್ತಿರುವ ಈ ಧೋರಣೆಯಿಂದ ಹಿಂದಡಿ ಇಡದಿದ್ದರೆ ನಮ್ಮ ರಾಜ್ಯಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದೆ. ಅಲ್ಲದೆ ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣವನ್ನು ಕಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದೆಲ್ಲವನ್ನು ಗಮನಿಸಿ ಸರ್ಕಾರ ಈ ಚಿಂತನೆಯನ್ನು ಕೂಡಲೇ ಕೈಬಿಡಬೇಕೆಂದು ಡಾ. ಸುರೇಂದ್ರ ಶೆಟ್ಟಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article