ಕನ್ನಡಪ್ರಭ ವಾರ್ತೆ ಬೆಂಗಳೂರು
ಮತ್ತೊಂದೆಡೆ, ವಾಣಿಜ್ಯ ಗ್ರಾಹಕರಿಗೆ ₹1.01 ರಿಂದ ₹1.86 ರವರೆಗೆ ವಿದ್ಯುತ್ ದರ ಹೆಚ್ಚಾಗಲಿದ್ದು, ವಾಣಿಜ್ಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್ ತುಸು ಹೆಚ್ಚಾಗಿಯೇ ತಗುಲಲಿದೆ.
ಈ ಹಿಂದೆ ಕೆಇಆರ್‌ಸಿಯು ಕೆಪಿಟಿಸಿಎಲ್ ನೌಕರರ ಪಿಂಚಣಿ ಹಾಗೂ ಗ್ರ್ಯಾಚ್ಯುಯಿಟಿ ಬಾಕಿ ತುಂಬಲು 2026-27ನೇ ಸಾಲಿನ ಏ.1ರಿಂದ ಪ್ರತಿ ಯುನಿಟ್‌ಗೆ 35 ಪೈಸೆ ದರ ಹೆಚ್ಚಳ ಮಾಡಲು ತೀರ್ಮಾನಿಸಿತ್ತು. ಅದರಂತೆ ಈಗಾಗಲೇ ಏಪ್ರಿಲ್ ಬಿಲ್‌ನಲ್ಲಿ ವಿದ್ಯುತ್ ಶುಲ್ಕ 45 ಪೈಸೆ ಹೆಚ್ಚಳ ಆಗಿದೆ.ಇದರ ಜತೆಗೆ ಏ.17 ರಂದು ಕೆಇಆರ್‌ಸಿ ಮತ್ತೊಂದು ಆದೇಶ ಹೊರಡಿಸಿದ್ದು, ಬೆಸ್ಕಾಂ ಸಂಸ್ಥೆಗೆ 2024-25ನೇ ಸಾಲಿನಲ್ಲಿ ಉಂಟಾಗಿರುವ ₹2,068 ಕೋಟಿ ಆದಾಯ ಕೊರತೆ ತುಂಬಿಕೊಳ್ಳಲು 2026-27ನೇ ಸಾಲಿನಲ್ಲಿ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚುವರಿಯಾಗಿ ಸಂಗ್ರಹಿಸಲು ಅವಕಾಶ ನೀಡಿದೆ.
ಈ ಆದೇಶವು 2026 ಮೇ 1 ರಿಂದ 2027ರ ಏಪ್ರಿಲ್ 31ರವರೆಗೆ ಬಳಕೆಯಾಗುವ ವಿದ್ಯುತ್ ಬಿಲ್‌ಗೆ ಅನ್ವಯವಾಗಲಿದ್ದು, ಹೀಗಾಗಿ ಈ ತಿಂಗಳ ವಿದ್ಯುತ್ ಬಳಕೆ ಬೆಲೆ ಹೆಚ್ಚಾಗಲಿದೆ. 35 ಪೈಸೆ ಹಾಗೂ 56 ಪೈಸೆ ಎರಡೂ ಬೆಲೆ ಹೆಚ್ಚಳ ಸೇರಿಸಿದರೆ ಗೃಹ ಬಳಕೆ ಗ್ರಾಹಕರಿಗೆ 91 ಪೈಸೆ ಹೊರೆ ಬೀಳಲಿದೆ.
ಪ್ರಸಕ್ತ ತಿಂಗಳಿಂದ ವಿದ್ಯುತ್ ಬಿಲ್‌ನಲ್ಲಿ ‘ಎಫ್‌ವೈ25 ಟ್ರೂ ಅಪ್ ಚಾರ್ಜಸ್’ ಹೆಸರಿನಲ್ಲಿ ಪ್ರತ್ಯೇಕವಾಗಿ ನಮೂದಿಸಿ ಬಿಲ್ ನೀಡಲಾಗುತ್ತದೆ.
ಹೀಗಾಗಿ ಈ ವರ್ಷ ತಿಂಗಳಿಗೆ ಸರಾಸರಿ 120 ಯುನಿಟ್ ವಿದ್ಯುತ್ ಬಳಕೆ ಮಾಡುವ ವ್ಯಕ್ತಿಗೆ 100 ಯುನಿಟ್‌ಗಳಿಗೆ ಸೀಮಿತವಾಗಿ ತಲಾ 56 ಪೈಸೆ ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ. ಉಳಿದ 20 ಯುನಿಟ್‌ಗಳಿಗೆ ಈ ವರ್ಷ ನಿಗದಿಯಾಗಿರುವ ಶುಲ್ಕ ಮಾತ್ರ ಸಂಗ್ರಹಿಸಲಾಗುವುದು.
ಗೃಹಜ್ಯೋತಿ ಗ್ರಾಹಕರಿಗೆ ಟ್ರೂ ಅಪ್ ಚಾರ್ಜಸ್ ಹಾಗೂ ಪಿಂಚಣಿ, ಗ್ರಾಚ್ಯುಯಿಟಿ ಸಂಬಂಧಿಸಿದ ವಿದ್ಯುತ್ ದರ ಹೆಚ್ಚಳದಿಂದ ಹೆಚ್ಚಿನ ಹೊರೆ ಬೀಳುವುದಿಲ್ಲ. ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆ ಯುನಿಟ್‌ಗಳ ಆಧಾರ ಮೇಲೆ ನೀಡಲಾಗುತ್ತಿದ್ದು, 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. 200 ಯುನಿಟ್‌ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ಸಣ್ಣ ಪ್ರಮಾಣದ ವ್ಯತ್ಯಾಸ ಹೊರತುಪಡಿಸಿ ಹೆಚ್ಚಿನ ಹೊರೆ ಬೀಳುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2026-27ನೇ ಸಾಲಿನ ದರ ಪರಿಷ್ಕರಣೆ ವೇಳೆ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ 10 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಹೆಚ್ಚಳ ಮಾಡಿದೆ.
ಡಬಲ್ ಹೊರೆ:
ಜತೆಗೆ 2025-26ನೇ ಸಾಲಿನ ದರವನ್ನೂ ಪರಿಷ್ಕರಣೆ ಮಾಡಿ ಕೆಇಆರ್‌ಸಿಯು ಪರಿಷ್ಕೃತ ದರಗಳನ್ನು ಪ್ರಕಟಿಸಿದೆ. ಇದು 2025-26ನೇ ಸಾಲಿನ ದರ ಪರಿಷ್ಕರಣೆಯಾಗಿರುವುದರಿಂದ ಏ.1, 2025ರಿಂದಲೇ ಜಾರಿಯಾಗಲಿದೆ. ಹೀಗಾಗಿ ಕಳೆದ ವರ್ಷದ ಬಾಕಿ ಬಿಲ್ ಸಹಿತ ಈ ವರ್ಷ ಸಂಗ್ರಹಿಸಲು ಬೆಸ್ಕಾಂ ಯೋಜನೆ ರೂಪಿಸುತ್ತಿದೆ. ಇದಾದರೆ ವಾಣಿಜ್ಯ ಗ್ರಾಹಕರಿಗೆ ಡಬಲ್ ಹೊರೆ ಬೀಳಲಿದೆ.ಇದರ ಜತೆಗೆ ಟ್ರೂ ಅಪ್ ಚಾರ್ಜಸ್ ಹೆಸರಿನಲ್ಲಿ 56 ಪೈಸೆ ಹಾಗೂ ಪಿ ಆ್ಯಂಡ್ ಜಿ ಸಂಬಂಧಿಸಿದ 35 ಪೈಸೆಯೂ ಸೇರಿ ₹1.01 ರಿಂದ ₹1.86 ಹೆಚ್ಚಳ ಆಗಲಿದೆ.
2025 ಏ.1ರಿಂದ ಬಾಕಿ ಇರುವ ದರ ಹೆಚ್ಚಳವನ್ನೂ ಪ್ರತಿ ತಿಂಗಳ ಬಿಲ್‌ಗೆ ಸೇರ್ಪಡೆ ಮಾಡಿದರೆ ಪ್ರತಿ ಯುನಿಟ್‌ಗೆ ವಿವಿಧ ಗ್ರಾಹಕರಿಗೆ ₹1.11 ರಿಂದ ₹2.81 ವರೆಗೆ ಹೆಚ್ಚಳ ಆಗಬಹುದು ಎಂದು ತಿಳಿದುಬಂದಿದೆ.