ರದ್ದು ಮಾಡಿದ್ದ 9326 ಪಡಿತರ ಚೀಟಿ ಸಕ್ರಿಯ

KannadaprabhaNewsNetwork |  
Published : Nov 27, 2024, 01:01 AM IST
ಹರಪನಹಳ್ಳಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ ಅವರು ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. | Kannada Prabha

ಸಾರಾಂಶ

ಹರಪನಹಳ್ಳಿ ತಾಲೂಕಿನಲ್ಲಿ 2800 ಸೇರಿದಂತೆ ಜಿಲ್ಲಾದ್ಯಂತ 9326 ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದು ಮಾಡಿದ್ದೆವು.

ಹರಪನಹಳ್ಳಿ: ವಿವಿಧ ಕಾರಣಗಳಿಂದ ವಿಜಯನಗರ ಜಿಲ್ಲೆಯಲ್ಲಿ ರದ್ದು ಮಾಡಿದ್ದ 9326 ಬಿಪಿಎಲ್‌ ಪಡಿತರ ಚೀಟಿಗಳನ್ನು ಪುನರ್‌ ಸ್ಥಾಪನೆ ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ ತಿಳಿಸಿದ್ದಾರೆ.ಅವರು ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು.

ಹರಪನಹಳ್ಳಿ ತಾಲೂಕಿನಲ್ಲಿ 2800 ಸೇರಿದಂತೆ ಜಿಲ್ಲಾದ್ಯಂತ 9326 ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದು ಮಾಡಿದ್ದೆವು. ಆದರೆ ಇದೀಗ ಪುನಃ ಅವುಗಳನ್ನು ಚಾಲ್ತಿ ಮಾಡಿದ್ದೇವೆ ಎಂದರು.

ಈಗಾಗಲೇ ಯಥಾಪ್ರಕಾರ ಪಡಿತರ ನೀಡುವಂತೆ ನ್ಯಾಯ ಬೆಲೆ ಅಂಗಡಿಗಳಿಗೆ ಮೆಸೇಜ್‌ ಕಳಿಸಲಾಗಿದೆ ಎಂದು ಅವರು ಹೇಳಿದರು.

₹1.20 ಲಕ್ಷ ಆದಾಯ ಮೀರಿದವರ ಪಡಿತರ ಕಾರ್ಡ್‌ಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಸದ್ಯಕ್ಕೆ ಚಾಲ್ತಿ ಮಾಡಲಾಗಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ 101 ಸರ್ಕಾರಿ ನೌಕರರ ಪಡಿತರ ಚೀಟಿಗಳನ್ನು ಮಾತ್ರ ಕಡ್ಡಾಯವಾಗಿ ರದ್ದು ಮಾಡಿದ್ದೇವೆ. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ವಕ್ಫ್‌ ಜಮೀನಿಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಕೊಟ್ಟೂರಿನಲ್ಲಿ ಮಾತ್ರ 14 ಜನರಿಗೆ ನೋಟಿಸ್‌ ನೀಡಲಾಗಿತ್ತು. ಇದೀಗ ಕೊಟ್ಟ ನೋಟಿಸ್‌ಗಳನ್ನು ಸಹ ವಾಪಸ್ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಬಗರ್ ಹುಕ್ಕುಂ 14 ಸಾವಿರ ಅರ್ಜಿಗಳು:

ಬಗರ್ ಹುಕುಂ ಸಾಗುವಳಿಗೆ ಸಂಬಂಧಪಟ್ಟಂತೆ ಹರಪನಹಳ್ಳಿ ತಾಲೂಕಿನಲ್ಲಿ 14 ಸಾವಿರ ಅರ್ಜಿಗಳು ಬಂದಿವೆ. ಇವುಗಳಲ್ಲಿ ಹಳ್ಳ, ಪರಂಪೋಕು ಅರ್ಜಿಗಳು ಇದ್ದರೆ ತಿರಸ್ಕರಿಸಲಾಗುತ್ತದೆ. ಹೆಚ್ಚುವರಿ ಗೋಮಾಳವಿದ್ದರೆ ಮಾತ್ರ ಹಕ್ಕುಪತ್ರ ನೀಡಲಾಗುವುದು, 100 ಜಾನುವಾರುಗಳಿಗೆ 30 ಎಕರೆ ಜಮೀನು, 4 ಕುರಿ, 4 ಮೇಕೆಗಳಿಗೆ ತಲಾ 1ಎಕರೆ ಜಾಗ ಮೀಸಲಿಟ್ಟು ಜಾನುವಾರು ಮೇಯಲಿಕ್ಕೆ ಜಾಗ ಬಿಡುತ್ತೇವೆ. ನಂತರ ಕಾನೂನು ಪ್ರಕಾರ ಇರುವ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯ ಸಮಿತಿಯಲ್ಲಿ ತೀರ್ಮಾನಿಸಿ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ವಿವಿಧ ಕ್ರಮ:

ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು 23600 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಸರ್ವೆ ಮಾಡಿಸಿದಾಗ 1800 ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಇದ್ದಾರೆ. 4600 ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇಂತಹ ಕಲಿಕೆಯಲ್ಲಿ ಹಿಂದುಳಿದವರನ್ನು ಗುರಿ ಮಾಡಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. 10 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ನೇಮಿಸಿ ಆ ಶಿಕ್ಷಕರು ಬೆಳಿಗ್ಗೆ ಸಂಬಂಧಪಟ್ಟ ವಿದ್ಯಾರ್ಥಿಗೆ ಫೋನ್‌ ಮಾಡಿ ಎಬ್ಬಿಸಬೇಕು. 15 ದಿನಕ್ಕೆ ತಿಂಗಳಿಗೊಮ್ಮೆ ಪರೀಕ್ಷೆ ನಡೆಸಬೇಕು. ಇವೆಲ್ಲವೂ ನಂತರ ಸತತ ಗೈರಾದ ವಿದ್ಯಾರ್ಥಿಗಳಿಗೆ ಅಂತಿಮವಾಗಿ ಹಾಲ್‌ ಟಿಕೆಟ್‌ ನೀಡುವುದಿಲ್ಲ ಎಂದು ಅವರು ಶಿಕ್ಷಣ ಇಲಾಖೆಯ ವಿವಿಧ ಮಟ್ಟದ ಅಧಿಕಾರಿಗಳು ಪ್ರತಿದಿನ ಒಂದೊಂದು ಶಾಲೆಯಲ್ಲಿ ಹಾಜರಿದ್ದು, ಶೈಕ್ಷಣಿಕ ಪ್ರಗತಿ ಗಮನಿಸಬೇಕು. ಈ ರೀತಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ