ಕನ್ನಡಪ್ರಭ ವಾರ್ತೆ ಯಳಂದೂರು
ಭಾನುವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಅಂಬೇಡ್ಕರ್ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಜಾತಿಗಣತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಪರಿಶಿಷ್ಟ ಜಾತಿಯಲ್ಲಿ ಬರುವ ಬಲಗೈ ಆದಿ ಕರ್ನಾಟಕ ಜನಾಂಗದವರು ಕಡ್ಡಾಯವಾಗಿ ತಮ್ಮ ಜಾತಿಯನ್ನು ಹೊಲೆಯ ಎಂತಲೇ ನಮೂದಿಸಲು ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರು ತಾಲೂಕಿನ ಪ್ರತಿ ಗ್ರಾಮಗಳಿಗೂ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್ ಹಾಗೂ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಈ ಬಗ್ಗೆ ಹಲವು ಸಭೆಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.
ಇವರ ಮಾರ್ಗದರ್ಶನದಂತೆ ಸಮಿತಿ ಸದಸ್ಯರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಈಗ ಮೇ ೨೯ರವರೆಗೂ ಈ ಅವಧಿ ವಿಸ್ತರಿಸಲಾಗಿದೆ. ಅಲ್ಲಿ ತನಕ ನಮ್ಮ ತಾಲೂಕು ಹಾಗೂ ಜಿಲ್ಲೆಯಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಲು ಶ್ರಮಪಡಲಾಗುವುದು ಎಂದು ಮಾಹಿತಿ ನೀಡಿದರು.ಜಿಪಂ ಮಾಜಿ ಸದಸ್ಯ ವಡಗೆರೆ ದಾಸ್ ಮಾತನಾಡಿ, ಜಾತಿ ಗಣತಿಯ ಮೂಲಕ ಪರಿಶಿಷ್ಟರಿಗೆ ಒಳಮೀಸಲಾತಿ ನಿಗಧಿ ಮಾಡಲು ರಾಜ್ಯ ಸರ್ಕಾರ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ನಮ್ಮ ತಾಲೂಕಿನಲ್ಲಿ ಒಟ್ಟು ೫೯೫೬ ಪರಿಶಿಷ್ಟ ಕುಟುಂಬಗಳಿವೆ. ಇದರಲ್ಲಿ ಈಗಾಗಲೇ ೫೬೮೩ ಕುಟುಂಬಗಳ ಜಾತಿ ಸಮೀಕ್ಷೆ ಮಾಡಲಾಗಿದೆ. ಇನ್ನುಳಿದ ೨೭೩ ಕುಟುಂಬಗಳು ಬಾಕಿ ಇವೆ. ಇವರಿಗೆ ಕೆಲವರಿಗೆ ತಾಂತ್ರಿಕ ದೋಷದಿಂದ ಪಡಿತರ ಪಟ್ಟಿ, ಆಧಾರ್ ಕಾರ್ಡ್‌ನಲ್ಲಿ ಬೇರೆಬೇರೆ ಜಾತಿ ನಮೂದಾಗಿರುವುದು, ಕೆಲವರು ಪರ ಊರಿನಲ್ಲಿ ಉದ್ಯೋಗ ಅರಸಿ ಹೋಗಿರುವುದು, ಕೆಲವರಿಗೆ ಪರಿಶಿಷ್ಟ ಪಂಗಡ ಎಂದು ನಮೂದಾಗಿದೆ. ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರು ಇದಕ್ಕೆ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂಧಿಯೊಂದಿಗೆ ಚರ್ಚಿಸಿ ಈ ತಾಂತ್ರಿಕ ತೊಂದರೆ ನಿವಾರಣೆಗೆ ಕ್ರಮ ವಹಿಸಿದ್ದಾರೆ. ಅಲ್ಲದೆ ಪರ ಊರಿನಲ್ಲಿರುವ ಈ ಸಮುದಾಯದ ಜನರನ್ನು ಇದಕ್ಕೆ ನೋಂದಣಿ ಮಾಡಿಸಲು ಕ್ರಮ ಮನವೊಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯರಿಯೂರು ಸಿ.ರಾಜಣ್ಣ, ದುಗ್ಗಹಟ್ಟಿ ಮಾದೇಶ್, ಮದ್ದೂರು ಉಮಾಶಂಕರ್, ವೈ.ಕೆ. ಮೋಳೆ ನಂಜುಂಡ, ಯರಿಯೂರು ಎನ್. ನಾಗೇಂದ್ರ, ಗುಂಬಳ್ಳಿ ಮಹಾದೇವ, ಜಯರಾಮ್, ವಜ್ರಮುನಿ, ಉಮೇಶ್ ಸೇರಿದಂತೆ ಅನೇಕರು ಇದ್ದರು.