ಕುಶಾಲನಗರ: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಜಿಲೆಯಲ್ಲಿ ಶೇ. 95ರಷ್ಟು ಗಣತಿ ನಮೂನೆ ಅರ್ಜಿ ವಿತರಣೆ ನಡೆದಿದೆ ಎಂದು ಕೊಡಗು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿರುವ ನಿತಿನ್ ಚಕ್ಕಿ ತಿಳಿಸಿದ್ದಾರೆ. ಕುಶಾಲನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಮತ್ತು ಚುನಾವಣಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಬಿಎಲ್ ಒಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಬಹುತೇಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮನೆ ಮನೆಗೆ ತೆರಳಿ ಗಣತಿ ನಮೂನೆ ಅರ್ಜಿ ವಿತರಿಸಿರುವುದಾಗಿ ತಿಳಿಸಿದರು.
ಈ ಮಾಹಿತಿಗಳನ್ನು ಡಿಜಿಟಲೈಸೇಶನ್ ಮಾಡುವ ಪ್ರಕ್ರಿಯೆ ನಡೆಯಲಿದೆ. ಯಾವುದೇ ನ್ಯೂನತೆ ಇದ್ದರೆ ಬಿಎಲ್ಒಗಳು ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು, ಮನೆ ಮನೆಗೆ ತೆರಳಲು ಅನಾನುಕೂಲವಾಗುತ್ತಿದೆ. ಆದರೂ ಸಂಬಂಧಿಸಿದ ಬಿಎಲ್ ಒಗಳು ತಮ್ಮ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿತ್ಯ ಆನ್ ಲೈನ್ ಮೂಲಕ ಬಿಎಲ್ ಇಗಳಿಗೆ ತರಬೇತಿ ನೀಡಲಾಗುತ್ತಿದೆ. ಅವರ ಕಾರ್ಯವೈಖರಿ ಬಗ್ಗೆ ಗಮನಿಸಲು ಬಿಎಲ್ಒ ಮೇಲ್ವಿಚಾರಕರು ನಿಯೋಜನೆಗೊಂಡಿದ್ದಾರೆ. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 23 ಮಂದಿ ಬಿಎಲ್ ಒಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ಪ್ರತಿಯೊಬ್ಬರೂ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡುವ ಸಂದರ್ಭ ಲೋಪದೋಷ ಬರೆದಂತೆ ಎಚ್ಚರಿಕೆ ವಹಿಸಬೇಕು ಎಂದ ಅವರು, ಗಣತಿ ನಮೂನೆ ಅರ್ಜಿ ಭರ್ತಿ ಮಾಡಿ ಬಿ ಎಲ್ಒಗೆ ಹಸ್ತಾಂತರಿಸುವ ಕಾರ್ಯ ಪ್ರತಿಯೊಬ್ಬ ಮತದಾರನದಾಗಿದೆ. ಸರ್ವ ಪಕ್ಷಗಳ ಪ್ರತಿನಿಧಿಗಳು ಏಜೆಂಟರು ಈ ಕಾರ್ಯದಲ್ಲಿ ಕೈಜೋಡಿಸುವಂತೆ ಅವರು ಕೋರಿದರು. 2002ರ ಪಟ್ಟಿಯಲ್ಲಿ ಮಾಹಿತಿ ಪಡೆಯಲು ಸಾಧ್ಯವಾಗದಿದ್ದರೆ ಆತಂಕ ಪಡುವ ಅಗತ್ಯವಿಲ್ಲ ಗಣತಿ ನಮೂನೆಯಲ್ಲಿ ಇರುವ ಮಾಹಿತಿ ಭರ್ತಿ ಮಾಡಿ ಸಹಿ ಹಾಕಿ ಬಿಎಲ್ ಒಗಳಿಗೆ ಕೊಡುವಂತೆ ಸಲಹೆ ನೀಡಿದರು. ಗಣತಿ ನಮೂನೆ ಭರ್ತಿ ಮಾಡಿ ಬಿ ಎಲ್ ಒಗಳಿಗೆ ಕೊಟ್ಟ ಬಳಿಕವೂ ಕೂಡ ಬದಲಾವಣೆ ಮಾಡುವುದಿದ್ದರೆ ಜು.29ರೊಳಗೆ ಮಾಡಿಸಿಕೊಳ್ಳಬೇಕು. ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದರೆ ತಮ್ಮ ಗಮನಕ್ಕೆ ತರುವಂತೆ ಕೋರಿದರು. ತಹಸೀಲ್ದಾರ್ ಹಾಗೂ ಸಹಾಯಕ ಇಆರ್‌ಒ ಕೃಷ್ಣಮೂರ್ತಿ, ತಾಲೂಕು ಚುನಾವಣಾ ಮೇಲ್ವಿಚಾರಕ ಲೋಹಿತ್, ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್, ಬಿಎಲ್ಒ ಮೇಲ್ವಿಚಾರಕ ರಾಮು, ಸವಿತಾ, ವಿವಿಧ ಪಕ್ಷದ ಪ್ರತಿನಿಧಿಗಳಾದ ವಿ.ಪಿ. ಶಶಿಧರ್, ಬಿ.ಬಿ. ಭಾರತೀಶ್, ಗೌತಮ್ ಗೌಡ, ವಸಂತ್ ಎಚ್.ಟಿ. ವೆಂಕಟೇಶ್ ಮತ್ತಿತರಿದ್ದರು.