ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಹಾನಗರದಲ್ಲಿ ನಡೆಯುತ್ತಿರುವ 24/7 ನಿರಂತರ ನೀರು ಸರಬರಾಜು ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಬೇಕು. ಹೆಚ್ಚಿನ ತಂಡಗಳನ್ನು ನಿಯೋಜಿಸಿ ನಿಗದಿತ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಾಕೀತು ಮಾಡಿದರು,.ನಗರದ ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕ ಕಚೇರಿಯ ಸಭಾಭವನದಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ವಿಶ್ವಬ್ಯಾಂಕ್‌ನ ನೆರವಿನೊಂದಿಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಡಿ (ಕುಸ್ಸೆಂಪ್) ನಗರದಲ್ಲಿ 24/7 ನಿರಂತರ ನೀರು ಸರಬರಾಜು ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಕಾಮಗಾರಿ ವೇಗ ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ನಿಗದಿತ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಸವದತ್ತಿ ಜಾಕವೆಲ್‌ನಿಂದ ಅಮ್ಮಿನಭಾವಿ ಜಲಶುದ್ಧೀಕರಣ ಘಟಕದ ವರೆಗೆ ಅಳವಡಿಸುತ್ತಿರುವ ಪೈಪ್‌ಲೈನ್ ಕಾಮಗಾರಿ ಈ ಮಾಸಾಂತ್ಯದಲ್ಲಿ ಪೂರ್ಣಗೊಳಿಸಬೇಕು. ಅಮ್ಮಿನಭಾವಿ ಜಲಶುದ್ಧೀಕರಣ ಘಟಕದಿಂದ ರಾಯಾಪೂರ ಜಲಸಂಗ್ರಹಗಾರದವರೆಗೆ ಅಳವಡಿಸುತ್ತಿರುವ ಪೈಪ್‌ಲೈನ್ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಜಲಶುದ್ಧೀಕರಣ ಘಟಕ, ಮೇಲ್ಮಟ್ಟದ ಹಾಗೂ ನೆಲಮಟ್ಟದ ಜಲಸಂಗ್ರಹ ಕಾಮಗಾರಿಗಳನ್ನು ಹೆಚ್ಚಿನ ತಂಡ ನಿಯೋಜಿಸಿ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.
ನೀರು ಸರಬರಾಜು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ದುರಸ್ತಿ ಕಾರ್ಯ ಇದ್ದರೆ ಗಮನಕ್ಕೆ ತಂದು ಶೀಘ್ರದಲ್ಲೇ ಕೈಗೆತ್ತಿಕೊಳ್ಳಬೇಕು. ಕಳೆದ ಕೆಲ ದಿನಗಳಿಂದ ಮಹಾನಗರದ ಕೆಲ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತುಂಬಾ ವ್ಯತ್ಯಯವಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.ಈಗಾಗಲೇ ನಳ ಸಂಪರ್ಕ ಅಧಿಕೃತಗೊಳಿಸಿಕೊಳ್ಳಲು ಮಹಾನಗರ ಪಾಲಿಕೆಯು ಪ್ರಕಟಣೆ ಹೊರಡಿಸಿದ್ದು ಹಾಗೂ ಅನಧಿಕೃತ ನಳ ಸಂಪರ್ಕ ಹೊಂದಿದವರು ಡಿ. 15ರೊಳಗೆ ಅಧಿಕೃತ ನಳ ಸಂಪರ್ಕ ಹೊಂದಬೇಕೆಂದು ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಅನಧಿಕೃತ ನಳ ಸಂಪರ್ಕ ಕಡಿತಗೊಳಿಸಲು ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಂದು ವೇಳೆ ಅನಧಿಕೃತ ನಳ ಸಂಪರ್ಕ ಹೊಂದಿದ್ದರೆ ಕಾನೂನು ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ವಿವರಿಸಿದರು.ಸಭೆಯಲ್ಲಿ ಕುಸ್ಸೆಂಪ್ ಯೋಜನಾ ಅನುಷ್ಠಾನ ಘಟಕದ ಕಾರ್ಯನಿರ್ವಾಹಕ ಎಂಜಿನೀಯರ್ ರವಿಕುಮಾರ ಟಿ.ಸಿ., ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ ಸುನೀಲ ಸಾಲಿ, ಕುಸ್ಸೆಂಪ್ ಯೋಜನಾ ಘಟಕದ ಅಧಿಕಾರಿಗಳು, ಸ್ಮೆಕ್ ಯೋಜನಾ ಸಮಾಲೋಚಕರು, ಎಲ್ ಆ್ಯಂಡ್ ಟಿ ಕಂಪನಿಯ ಯೋಜನಾ ವ್ಯವಸ್ಥಾಪಕರು ಹಾಗೂ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.