ಮದ್ದೂರು: ವಿವಾಹ ಸೇರಿದಂತೆ ವಿವಿಧ ಕಾರ್‍ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.18 ರಂದು ಮದ್ದೂರಿಗೆ ಆಗಮಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಶುಕ್ರವಾರ ಹೇಳಿದರು.
ಪಟ್ಟಣದ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಪಕ್ಷದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.ಮೈಸೂರಿನಿಂದ ರಸ್ತೆ ಮೂಲಕ ಮದ್ದೂರಿನ ಶಿವಪುರಕ್ಕೆ ಸಂಜೆ 6.30ಕ್ಕೆ ಆಗಮಿಸುವ ಮುಖ್ಯಮಂತ್ರಿಗಳನ್ನು ಕ್ಷೇತ್ರದ ಶಾಸಕ ಕೆ.ಎಂ. ಉದಯ್, ಪಕ್ಷದ ಮುಖಂಡರು ಹಾಗೂ ಕಾರ್‍ಯಕರ್ತರು ಮಾಲಾರ್ಪಣೆ ಮಾಡಿ ಸ್ವಾಗತಿಸಲಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ರಮೇಶ್ ಬಂಡಿಸಿದ್ದೇಗೌಡ ಹಾಜರಿರಲಿದ್ದಾರೆ ಎಂದು ಹೇಳಿದರು.ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಮ್ಮ ಆತ್ಮೀಯರಾದ ಮನ್ಮುಲ್ ಮಾಜಿ ನಿರ್ದೇಶಕ ಲಿಂಗನದೊಡ್ಡಿ ರಾಮಕೃಷ್ಣ ರ ಪುತ್ರ ಎಲ್.ಆರ್. ಅಶ್ವಿನ್ ಮತ್ತು ಡಿ.ಎನ್.ರೇಖಾ ವಿವಾಹಪೂರ್ವ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಂತರ ಮುಖ್ಯಮಂತ್ರಿಗಳು ಶಾಸಕ ಕೆ.ಎಂ. ಉದಯ್ ಅವರ ಸ್ವಗ್ರಾಮಕ ಕದಲೂರು ಗ್ರಾಮಕ್ಕೆ ಭೇಟಿ ನೀಡಿ ಭೋಜನ ಸ್ವೀಕರಿಸಿದ ನಂತರ ರಾತ್ರಿ 10 ರ ಸುಮಾರಿಗೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಮದ್ದೂರು, ಶಿವಪುರ, ಕದಲೂರು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಾಸಕರ ಹುಟ್ಟೂರು ಕದಲೂರು ಗ್ರಾಮಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿದೆ. ಗ್ರಾಮವನ್ನು ತಳಿರು-ತೋರಣಗಳಿಂದ ಅಲಂಕರಿಸುವ ಕಾರ್‍ಯ ನಡೆಯುತ್ತಿದೆ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಕೆ.ಎಂ. ರವಿ, ಕದಲೂರು ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಶಿವಪ್ಪ, ಯರಗನಹಳ್ಳಿ ಹರೀಶ, ರವಿಕುಮಾರ್ ಇದ್ದರು.