ಕನ್ನಡಪ್ರಭ ವಾರ್ತೆ ಬೆಳಗಾವಿ
ತನ್ನ ಚೊಚ್ಚಲ ಕವನ ಸಂಕಲನ ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನಲೆ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಾವಣ್ಯ ಕೃತಿ ಕುರಿತು ಮಾಹಿತಿ ಹಂಚಿಕೊಂಡರು. ಸಾಮಾನ್ಯವಾಗಿ ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಅಥವಾ ಜಾಕ್ ಅಂಡ್ ಜಿಲ್ ನಂತಹ ಪಾಶ್ಚಾತ್ಯ ಮೂಲದ ಕವಿತೆಗಳನ್ನು ಬೋಧಿಸಲಾಗುತ್ತದೆ. ಆದರೆ, ನಮ್ಮ ದೇಶದ ಮಕ್ಕಳಿಗೆ, ಭಾರತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ನಾಯಕರನ್ನು ಪರಿಚಯಿಸಬೇಕು. ನಮ್ಮತನದ ಶಿಶುಗೀತೆಗಳ ಮೂಲಕ ಮಕ್ಕಳು ನಮ್ಮ ದೇಶದ ಗತ ಇತಿಹಾಸ ಅರಿಯಬೇಕೆಂಬ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಿದ್ದೇನೆ ಎಂದು ಹೇಳಿದರು.
ರಾಣಿ ಚನ್ನಮ್ಮ, ಭಗತ್ ಸಿಂಗ್, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಂತಹ ವೀರರ ಕುರಿತಾದ ಸರಳ ಕವಿತೆಗಳಿವೆ. ಧಾರ್ಮಿಕ ವಿಚಾರವಾಗಿ ಶ್ರೀಕೃಷ್ಣ, ಶ್ರೀರಾಮ ಮತ್ತು ಶಿವನಂತಹ ದೈವೀ ಶಕ್ತಿಗಳ ಕುರಿತಾದ ಸಾಲುಗಳು ಮಕ್ಕಳಲ್ಲಿ ಆಧ್ಯಾತ್ಮಿಕ ಅರಿವು ಮೂಡಿಸುತ್ತವೆ. ಮಕ್ಕಳಿಗೆ ಸಂಬಂಧಗಳ ಮಹತ್ವ ತಿಳಿಸಲು ಮಾತೃದೇವೋ ಭವ, ಪಿತೃದೇವೋ ಭವ ಎಂಬ ಮೌಲ್ಯಕ್ಕೆ ಅನುಗುಣವಾಗಿ ಪೋಷಕರು, ಶಿಕ್ಷಕರು ಮತ್ತು ಹಿರಿಯರ ಮಹತ್ವವನ್ನು ಸಾರುವ ಕವಿತೆಗಳಿವೆ. ಜತೆಗೆ ಈ ಪುಸ್ತಕದಲ್ಲಿ ಬೆಳಗಾವಿಯ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಹುತಾತ್ಮರ ಕುರಿತಾದ ವಿಶೇಷ ಕವಿತೆಗಳನ್ನು ಸೇರಿಸಿದ್ದೇನೆ. ಬೆಳಗಾವಿಯ ಫೇಮಸ್ ಕುಂದಾ ಬಗ್ಗೆಯೂ ಒಂದು ರೇಮ್ಸ್ ಇದೆ ಎಂದು ವಿವರಿಸಿದರು.ನನ್ನ ಸುತ್ತಲಿನ ಪ್ರಪಂಚ, ಶಾಲೆ ಮತ್ತು ನನ್ನ ನಗರವಾದ ಬೆಳಗಾವಿಯ ಬಗ್ಗೆ ನನಗಿರುವ ಆಲೋಚನೆಗಳ ಪ್ರತಿಬಿಂಬವೇ ಈ ಪುಸ್ತಕ. ಸಣ್ಣ ಆಲೋಚನೆಗಳು ಕೂಡ ದೊಡ್ಡ ಬದಲಾವಣೆಯನ್ನು ತರಬಲ್ಲವು ಎಂದು ನಾನು ನಂಬುತ್ತೇನೆ. ಚಿಕ್ಕಂದಿನಿಂದ ನನ್ನ ತಾಯಿ ಇಂತಹ ಕತೆಗಳನ್ನೇ ಹೇಳಿದ್ದರು. ಅದಕ್ಕೆ ಪೂರಕವಾಗಿ ಆಯಾ ಮಹಾನ್ ನಾಯಕರ ಜೀವನ ಚರಿತ್ರೆಯ ಕಿರು ಪುಸ್ತಕಗಳನ್ನು ಓದಿ, ಅರ್ಥೈಸಿಕೊಂಡು ಕವನ ಬರೆದಿದ್ದೇನೆ. ಶೀಘ್ರವೇ ಕೃತಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.