ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಜನರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವುಗಳು ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಆಗಿಲ್ಲ. ಕೆಲವರು ಒಂದು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು 2-3 ಅಂತಸ್ತಿನ ಕಟ್ಟಡ ಕಟ್ಟುತ್ತಿದ್ದಾರೆ. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಅವುಗಳಿಂದ ಆದಾಯ ಬರುತ್ತಿಲ್ಲ ಎಂದರು.
ಅಂತಹ ಮನೆಗಳು ಸ್ಥಳೀಯ ಸಂಸ್ಥೆಗಳಿಂದ ಎಲ್ಲಾ ರೀತಿಯ ಮೂಲಭೂತ ಸವಲತ್ತುಗಳನ್ನು ಪಡೆದುಕೊಳ್ಳುತ್ತಿವೆ. ಆದರೆ, ಅವುಗಳಿಂದ ಸಂಸ್ಥೆಗಳಿಗೆ ತೆರಿಗೆ ಬರುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಎ ಆ್ಯಂಡ್ ಬಿ ಖಾತೆ ಮಾಡಿಕೊಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಸ್ಥಳೀಯ ಸಂಸ್ಥೆಗಳ ಜತೆಗೆ ಜನರಿಗೂ ಅನುಕೂಲವಾಗಲಿದೆ ಎಂದ ಸಚಿವರು, ಸದ್ಯದಲ್ಲೇ ಇದು, ಆದೇಶವಾಗಿ ಪ್ರಕಟಗೊಳ್ಳಲಿದೆ ಎಂದು ಹೇಳಿದರು.ಸ್ಥಳೀಯ ನಗರ ಸಂಸ್ಥೆಗಳಲ್ಲಿ ಯಾವುದೇ ಕಾಮಗಾರಿ ಮಾಡುವ ಸಂದರ್ಭದಲ್ಲಿ ಜೆಸಿಬಿ ಬಳಸಬಾರದೆಂದು ಟೆಂಡರ್‌ನ ಆದೇಶದಲ್ಲಿ ಗುತ್ತಿಗೆದಾರರಿಗೆ ತಿಳಿಸಿ ಕೊಡಲಾಗುತ್ತದೆ. ಆದರೂ ಕೂಡ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮುಗಿಸುವ ಉದ್ದೇಶದಿಂದ ಜೆಸಿಬಿ ಬಳಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ರಸ್ತೆಗಳಿಗೆ ತುಂಬಾ ಹಾನಿಯಾಗುತ್ತಿದೆ. ಅಂತಹ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಚಿಕ್ಕಮಗಳೂರು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ನಗರೋತ್ಥಾನ ಕಾಮಗಾರಿಯ ಟೆಂಡರ್ ಆಗಿದೆ. ಆದರೆ, ಕಾಮಗಾರಿ ಆರಂಭವಾಗಿಲ್ಲ. ಅದ್ದರಿಂದ ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ಅವರಿಗೆ ಕೊಟ್ಟಿರುವ ಟೆಂಡರ್‌ವನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಪೌರಾಡಳಿತ ಇಲಾಖೆಯ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟೆ ಮಾತನಾಡಿ, ನೀರಿನ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ಈ ಜವಬ್ದಾರಿಯನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಲು ತೀರ್ಮಾನಿಸಲಾಗಿದೆ. ಸದ್ಯದಲ್ಲೇ ಅದು ಆದೇಶವಾಗಿ ಹೊರ ಬರಲಿದೆ ಎಂದು ಹೇಳಿದರು.
ಚಿಕ್ಕಮಗಳೂರು ನಗರದಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದು, ರಸ್ತೆಗಳ ನಿರ್ಮಾಣಕ್ಕೆ ₹10 ಕೋಟಿ ವಿಶೇಷ ಅನುದಾನ ನೀಡಬೇಕೆಂದು ಶಾಸಕರು, ಸಚಿವರಿಗೆ ಮನವಿ ಸಲ್ಲಿಸಿದರು.