ಜನಸ್ಪಂದನದಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ

KannadaprabhaNewsNetwork | Published : Jun 26, 2024 12:40 AM

ಸಾರಾಂಶ

ಬೀಳಗಿ ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಬೀಳಗಿ ಮತಕ್ಷೇತ್ರದ ಜನಸ್ಪಂದನ ಕಾರ್ಯಕ್ರಮಕ್ಕೆ ಶಾಸಕ ಜಿ.ಟಿ. ಪಾಟೀಲ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ನೂರಾರು ಜನರು, ರೈತರು ಹಾಗೂ ಮಹಿಳೆಯರು ಹಲವಾರ ಕುಂದುಕೊರತೆಗಳ ಮನವಿ ನೀಡಿದ್ದು, ಶೀಘ್ರ ಅವುಗಳು ಇತ್ಯರ್ಥವಾಗಬೇಕು. ಜನಸ್ಪಂದನ ಕಾರ್ಯಕ್ರಮದಲ್ಲಿ ಕುಂದುಕೊರತೆಗಳ ಕುರಿತು ಅಹವಾಲು ಕೊಟ್ಟ ತಕ್ಷಣವೇ ಪರಿಹರಿಸಿದರೆ ಮಾತ್ರ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಮಂಗಳವಾರ ಜಿಪಂ, ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಬೀಳಗಿ ಮತಕ್ಷೇತ್ರದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಬಾರಿ ಶಾಸಕನಾಗಿದ್ದಾಗ ಜನಸಂಪರ್ಕ ಸಭೆ ಮಾಡಿದ್ದೆ. ಅದು ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಸದ್ಯ ಸರ್ಕಾರ ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮದಿಂದ ಶೇ.೧೦ರಷ್ಟು ಸಮಸ್ಯೆಗಳಿಗಾದರೂ ಪರಿಹಾರ ದೊರಕಿದರೆ ಕಾರ್ಯಕ್ರಮ ಯಶಸ್ವಿಯಾದಂತೆ ಎಂದು ಹೇಳಿದರು.

ವಿಶಾಲವಾದ ತಾಪಂ ಸ‘ಾ‘ವನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರೆ ಒಳ್ಳೆಯದಿತ್ತು. ಇಷ್ಟೊಂದು ಇಕ್ಕಟ್ಟಾದ ಸ್ಥಳದಲ್ಲಿ ಕಾರ್ಯಕ್ರಮ ಮಾಡಿದರೆ ಹೇಗೆ ಎಂದು ಪ್ರಶ್ನಿಸಿ, ಇದೊಂದು ಕಣ್ಣೊರೆಸುವ ಸ‘ೆಯಾಗದೇ, ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾರ್ಯಕ್ರಮವಾಗಬೇಕೆಂದು ಕಿವಿ ಮಾತು ಹೇಳಿದ ಅವರು ಟೇಪ್ ಹಾಕಿ ನಾಡಗೀತೆ ಹಾಡಿಸುವ ಮಟ್ಟಕ್ಕೆ ಅಧಿಕಾರಿಗಳು ಇಳಿಯಬಾರದು,ಪ್ರತಿ ಶಾಲೆಯಲ್ಲಿಯೂ ಮಕ್ಕಳು ನಾಡಗೀತೆ ಹಾಡುತ್ತಾರೆ ಅವರಲ್ಲಿ ಇಬ್ಬರು ಮಕ್ಕಳನ್ನು ಕರೆಯಿಸಿ ನಾಡಗೀತೆ ಹಾಡಿಸುವ ಕೆಲಸ ಮಾಡಬೇಕು ಇನ್ನು ಮುಂದೆ ಟೇಪ್ ಮೂಲಕ ನಾಡಗೀತೆವಾಗಬಾರದು ಎಂದು ತಹಸೀಲ್ದಾರಗೆ ಸೂಚಿಸಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಮಾತನಾಡಿ, ಜನಸ್ಪಂದನ ಕಾರ್ಯಕ್ರಮದಲ್ಲಿ ೧೨೬ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಪ್ರಾಮಾಣಿಕವಾಗಿ ಇತ್ಯರ್ಥಪಡಿಸಬೇಕು. ಪರಿಹಾರ ಕಾಣದ ಅರ್ಜಿಗಳಿಗೆ ಹಿಂಬರಹ ನೀಡಿ ಇತ್ಯರ್ಥ ಪಡಿಸಬೇಕು. ಇದರಲ್ಲಿ ಅಧಿಕಾರಿಕಾರಿಗಳು ಲೋಪವೆಸಗಿದ್ದರೆ, ಅಧಿಕಾರಿಗಳ ತಪ್ಪು ಕಂಡುಬಂದರೆ ಕ್ರಮ ಜರುಗಿಲಾಗುವುದು ಎಂದು ಎಚ್ಚರಿಸಿದರು.

ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಬೀಳಗಿ ಪಟ್ಟಣದಲ್ಲಿ ನಡೆಯುವ ಸಂತೆಯನ್ನು ನಿಗದಿಪಡಿಸಿದ ಸ್ಥಳದಲ್ಲಿ ಮಾಡುವಂತೆ ಪಪಂ ಸದಸ್ಯರು ಒತ್ತಾಯಿಸಿದರು. ಟ್ರಾಫಿಕ್ ಸಮಸ್ಯೆ ಪರಿಹಾರ, ಪಪಂ ಮುಂದೆ ಯಾವುದೇ ವಾಹನ ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಸಿಪಿಐಗೆ ಸೂಚಿಸಿದರು. ಬಾಗಲಕೋಟೆಯಿಂದ ರಾತ್ರಿ ೮.೩೦ ಗಂಟೆಗೆ ಬೀಳಗಿ ಮಾರ್ಗವಾಗಿ ಗಲಗಲಿಗೆ ಬಸ್ ಓಡಿಸುವುದು, ಬೀಳಗಿ ಮಾರ್ಗದಲ್ಲಿ ಸಾಗುವ ಹುಬ್ಬಳ್ಳಿ ಹಾಗೂ ವಿಜಯಪುರ ಬಸ್‌ಗಳು ಬೀಳಗಿ ಬಸ್‌ ನಿಲ್ದಾಣಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಡಿಪೋ ಮ್ಯಾನೇಜರ್‌ಗೆ ಸೂಚಿಸಿ, ಕಂದಾಯ ಮತ್ತು ಜಿಎಲ್‌ಬಿಸಿ ಅಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ರೈತರ ಪಹಣಿಯಲ್ಲಿನ ಲೋಪದೋಷ ಸರಿಪಡಿಸುವಂತೆ ಶಾಸಕರು ತಿಳಿಸಿದರು.

ಬಿಸನಾಳ ಗ್ರಾಮಕ್ಕೆ ೧೫ ದಿನಗಳವರೆಗೆ ವಿದ್ಯುತ್ ಪೂರೈಕೆ ಮಾಡಿಲ್ಲವೆಂದು ರೈತರು ಸಭೆಯ ಗಮನ ಸೆಳೆದಾಗ, ಹೆಸ್ಕಾಂ ಅಧಿಕಾರಿಗಳು ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಸಲು ತೊಂದರೆಯಾಗಿದೆ. ಆದರೆ, ಗ್ರಾಮದ ಮನೆಗಳಿಗೆ ಬೇರೆ ಸ್ಟೇಶನ್ ಮೂಲಕ ವಿದ್ಯುತ್ ಪೂರೈಸಲಾಗಿದೆ ಎಂದು ತಿಳಿಸಿದರು.

ಶಾಸಕರು, ಜಿಲ್ಲಾಧಿಕಾರಿಗಳು ಈ ಕುರಿತು ಸಮಗ್ರ ವರದಿ ನೀಡುವಂತೆ ಹೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಅಧಿಕಾರಿಗಳ ತಪ್ಪು ಕಂಡುಬಂದರೆ ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಿದರು.

ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ, ಜಿಪಂ ಸಿಇಒ ಶಶಿಧರ ಕುರೇರ, ತಹಸೀಲ್ದಾರ್‌ ಸುಹಾಸ ಇಂಗಳೆ, ತಾಪಂ ಇಒ ಅಭಯಕುಮಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Share this article