ಬಳ್ಳಾರಿ: ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘವು ಬಳ್ಳಾರಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಮ್ಮೇಳನವನ್ನು ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿತ್ತು.
ಸಮ್ಮೇಳನಕ್ಕೆ ಚಾಲನೆ ನೀಡಿದ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಎಸ್.ಷಣ್ಮುಗಂ, ಕಾರ್ಮಿಕರ ಹಕ್ಕುಗಳನ್ನು ಸರ್ಕಾರ ದಮನ ಮಾಡಲು ಮುಂದಾಗಿದೆ. ಕಾರ್ಮಿಕ ಇಲಾಖೆಯಲ್ಲಿ ಕೋಟ್ಯಂತರ ರು. ಹಣವಿದ್ದಾಗ್ಯೂ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆ ಮಾಡದೆ, ಪೋಲು ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿಲ್ಲ. ಬರುವ ವಿದ್ಯಾರ್ಥಿ ವೇತನದಲ್ಲಿ ರಾಜ್ಯ ಸರ್ಕಾರ ಶೇ.60ರಷ್ಟು ಕಡಿತಗೊಳಿಸಿದೆ. ಮದುವೆಗೆ ಹಣ, ಅನಾರೋಗ್ಯ-ಅಪಘಾತ, 60 ವರ್ಷ ಗಳ ಬಳಿಕ ದೊರೆಯಬೇಕಾದ ಸೌಲಭ್ಯಗಳು ಸರಿಯಾಗಿ ಸಿಗದೆ, ಕಾರ್ಮಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.ಕಾರ್ಮಿಕರ ಹೆಸರಿನಲ್ಲಿ ಬೋಗಸ್ ಕಾರ್ಡ್ ಗಳನ್ನು ನೀಡಿ ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದಂತೆಯೇ ರಾಜ್ಯದ ಹಾಲಿ ಕಾಂಗ್ರೆಸ್ ಸರ್ಕಾರ ಸಹ ಕಾರ್ಮಿಕ ವಿರೋಧಿ ಧೋರಣೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರಲ್ಲದೆ, ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಬಲಿಷ್ಠ ಹೋರಾಟ ರೂಪಿಸಿದಾಗ ಮಾತ್ರ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ತಿಳಿಸಿದರು.
ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಎ.ದೇವದಾಸ್ ಮಾತನಾಡಿ, ಎಐಯುಟಿಯುಸಿ ಸಂಘಟನೆ ನಿರಂತರ ಹೋರಾಟದ ಫಲವಾಗಿ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದ್ದರೂ ಅವರಿಗೆ ದೊರೆಯಬೇಕಾದ ಸೌಲಭ್ಯಗಳು ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ಕಾರ್ಮಿಕರ ಹಿತ ಕಾಯಬೇಕು. ಹಕ್ಕುಗಳ ರಕ್ಷಣೆಯಾಗಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜು.9ರಂದು ಧಾರವಾಡದಲ್ಲಿ ರಾಜ್ಯ ಸಮ್ಮೇಳನ ಸಂಘಟಿಸಲಾಗಿದ್ದು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಎನ್. ಮಾತನಾಡಿದರು. ಸಂಘದ ಜಿಲ್ಲಾ ಮುಖಂಡ ಜಿ.ಸುರೇಶ್, ಪ್ರಮುಖರಾದ ಸೋಮಶೇಖರ ಗೌಡ, ಎ.ಶಾಂತಾ, ಶರ್ಮಾಸ್, ನೀಲಪ್ಪ, ಜಯರಾಜ್, ಅಂಜಿನಪ್ಪ ಇದ್ದರು.
ಸಮ್ಮೇಳನದ ಕೊನೆಯಲ್ಲಿ ನೂತನ ಜಿಲ್ಲಾ ಸಮಿತಿ ಚುನಾಯಿಸಲಾಯಿತು. ಅಧ್ಯಕ್ಷರಾಗಿ ಆರ್.ಸೋಮಶೇಖರ ಗೌಡ, ಕಾರ್ಯದರ್ಶಿಯಾಗಿ ಜಿ.ಸುರೇಶ್, ಉಪಾಧ್ಯಕ್ಷರಾಗಿ ಶರ್ಮಾಸ್, ಮಾಬುಸಾಬ್, ನೀಲಪ್ಪ, ಶಫಿ ಸೇರಿದಂತೆ 29 ಜನರ ಕಾರ್ಯಕಾರಿ ಸಮಿತಿಯನ್ನು ಚುನಾಯಿಸಲಾಯಿತು.