ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೇವಲ 20 ರು. ಉಳಿತಾಯದ ಮೂಲಕ ಪ್ರತಿ ಸಂಘದ ಒಬ್ಬೊಬ್ಬ ಸದಸ್ಯರು ಯಾವುದೇ ದಾಖಲೆಗಳಿಲ್ಲದೆ 10 ಸಾವಿರದಿಂದ 5 ಲಕ್ಷದವರೆಗೆ ಸಾಲ ಪಡೆಯುತ್ತಿದ್ದಾರೆ. ಪಡೆದ ಸಾಲ ಪ್ರತಿ ವಾರದ ಕಂತಿನ ರೂಪದಲ್ಲಿ ಮರುಪಾವತಿ ಮಾಡುತ್ತಿದ್ದಾರೆ, ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಪುರುಷರು ಸಂಘಗಳಿಂದ 80 ಕೋಟಿ ಸಾಲದ ವಹಿವಾಟು ನಡೆಸುತ್ತಿದ್ದಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಾಲಕೃಷ್ಣ ತಿಳಿಸಿದರು.ತಾಲೂಕಿನ ಅಂಚಿಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ಆಯೋಜಿಸಲಾಗಿದ್ದ ಸಂಘ ಸ್ಥಾಪನೆಯಾಗಿ ಐದು ವರ್ಷ ಪೂರೈಸಿದ ಶ್ರೀಗಂಧ ಪುರುಷರ ಸಂಘದ ವತಿಯಿಂದ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ 2300 ಹೆಚ್ಚು ಸಂಘಗಳು ಕಾರ್ಯನಿರ್ವಹಿಸುತ್ತಿದ್ದು. ತಾಲೂಕಿನ ಪ್ರತಿ ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಂಗವಿಕಲರು, ನಿರ್ಗತಿಕರಿಗೆ ಮಾಸಾಶನ ನೀಡುತ್ತಿರುವ ಸಂಸ್ಥೆ ಇದಾಗಿದೆ. ಅನಕ್ಷರತಾ ಹೆಣ್ಣು ಮಕ್ಕಳು ಇಂದು ಅಕ್ಷರಸ್ಥರಾಗಿ ಸಮವಸ್ತ್ರ ಧರಿಸಿ ಸಭೆಗಳಿಗೆ ಹಾಜರಾಗುತ್ತಾರೆ. ಸುಮಾರು 20 ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳ ಪಾಲಿಗೆ ದಾರಿದೀಪವಾಗಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಎಂದು ತಿಳಿಸಿದರು.
ಶ್ರೀ ಗಂಧ ಸಂಘದ ರವಿಕುಮಾರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಗಂಡು ಮಕ್ಕಳ ಸಂಘಗಳು ಕಡಿಮೆಯಿದ್ದರೂ ಸಾಲದ ಹಣದಲ್ಲಿ ಉತ್ತಮ ಪ್ರಗತಿ ಸಾಧಿಸಿ ಇಂದು ಗ್ರಾಮಕ್ಕೆ ಮಾದರಿಯಾಗಿದ್ದೇವೆ. ನಮ್ಮ ಸಂಘವು ಐದು ವರ್ಷಗಳಿಂದ ಆರಂಭದಲ್ಲಿ 10,000 ಸಾಲ ಪಡೆದ ನಾವು, ಈಗ ಮೂರು ಲಕ್ಷದವರೆಗೂ ಸಾಲ ಪಡೆದು ಮರುಪಾವತಿ ಮಾಡುತ್ತಾ ಉತ್ತಮ ಹಣದ ವಹಿವಾಟು ನಡೆಸುತ್ತಿದ್ದೇವೆ. ಪಡೆದ ಸಾಲದ ಹಣದಲ್ಲಿ ವಾಹನ ಖರೀದಿ, ಮಕ್ಕಳ ವಿದ್ಯಾಭ್ಯಾಸ ಹಾಗೂ ವ್ಯಾಪಾರಕ್ಕೆ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು.ಒಕ್ಕೂಟದ ಮಾಜಿ ಅಧ್ಯಕ್ಷೆ ಪಾರ್ವತಮ್ಮ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಒಟ್ಟಾಗಿ ಬೆಳೆದ ನಮಗೆ, ಹೊರಗಿನ ಪ್ರಪಂಚದ ಅರಿವು ತುಂಬಾ ಕಡಿಮೆ, ಶ್ರೀ ವೀರೇಂದ್ರ ಹೆಗಡೆಯವರ ಕೃಪಾಕಟಾಕ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಮೂಲಕ ಇಂದು ನಾವೆಲ್ಲರೂ ಗ್ರಾಮಗಳಿಗೆ ಮಾದರಿ ಹೆಣ್ಣು ಮಕ್ಕಳಾಗಿ ಬೆಳೆದಿದ್ದೇವೆ. ರಾಜ್ಯದ ಯಾವುದೇ ಸರ್ಕಾರ ಮಾಡದ ಅನುಕೂಲಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಜೀವನ ನಡೆಸುವುದಕ್ಕೆ ಧರ್ಮಸ್ಥಳ ಸಂಸ್ಥೆಯು ನಮಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಭೀಮರಾಜು ಮಾತನಾಡಿ, ರಾಜ್ಯದಲ್ಲಿ ಯಾವುದೇ ಬ್ಯಾಂಕುಗಳು ಸಾಲ ನೀಡಬೇಕಾದರೆ ಅನೇಕ ದಾಖಲೆಗಳನ್ನು ಕೇಳುತ್ತಾರೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಯಾವುದೇ ದಾಖಲೆಗಳಿಲ್ಲದೆ ಗ್ರಾಮೀಣ ಭಾಗದ ಜನತೆಗೆ ಕಡಿಮೆ ಬಡ್ಡಿ ದರದಲ್ಲಿ 10,000 ದಿಂದ 5 ಲಕ್ಷದವರೆಗೆ ಸಾಲ ನೀಡುತ್ತಿದ್ದಾರೆ. ಅದನ್ನು ತೆಗೆದುಕೊಳ್ಳುತ್ತಿರುವ ಸದಸ್ಯರು ಕೂಡ ಅವರಾಗಿಯೇ ಖುದ್ದು ಸಂಸ್ಥೆಗೆ ತೆರಳಿ ಸಾಲ ಮರುಪಾವತಿಸುತ್ತಿದ್ದಾರೆ. ಇದರಿಂದ ಧರ್ಮಸ್ಥಳ ಸಂಸ್ಥೆ ಹಾಗೂ ಬಡ ಜನರ ಮಧ್ಯೆ ಉತ್ತಮ ಬಾಂಧವ್ಯ ಬೆಳೆದು ಇಂದು ಕೋಟ್ಯಂತರ ರು. ವ್ಯವಹಾರ ನಡೆಯುತ್ತಿದೆ. ಈ ಸಂಸ್ಥೆಯ ಸಹಕಾರದಿಂದ ಬಡ ಕುಟುಂಬಗಳು ಸಂತೋಷದಾಯಕ ಜೀವನ ಸಾಗಿಸಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕ ವೆಂಕಟಚಲಪತಿ, ಗ್ರಾಪಂ ಅಧ್ಯಕ್ಷ ಭೀಮರಾಜು, ಒಕ್ಕೂಟದ ಅಧ್ಯಕ್ಷರು ಸುಗುಣ, ಶುದ್ಧ ಗಂಗ ಘಟಕದ ಮೇಲ್ವಿಚಾರಕ ವಿನೋದ್, ಸೇವಾ ಪ್ರತಿನಿಧಿ ವೀಣಾ, ಶ್ರೀಗಂಧ ಸಂಘ, ಶ್ರೀ ವಿನಾಯಕ ಸಂಘ, ಶ್ರೀ ಮಂಜುನಾಥ ಸಂಘದ ಎಲ್ಲ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.