ಲಿಂಗಭೇದ ತೊಲಗಿದರೆ ಸುಂದರ ಸಮಾಜ ನಿರ್ಮಾಣ: ಆಶಾ.ಎಂ. ಪಾಟೀಲ

KannadaprabhaNewsNetwork |  
Published : Mar 18, 2026, 03:00 AM IST
ಜಮಖಂಡಿ ಬಿಎಲ್‌ಡಿಇ ಕಾಲೇಜಿನ ದರ್ಬಾರ್‌ಹಾಲ್‌ನಲ್ಲಿಏರ್ಪಡಿಸಿದ್ದ  ಸಿಂಚನ ಮಾರ್ಕೇಟ್‌ ಮೇಳ, ಮಹಿಳಾ ಉದ್ಯಮಿಗಳ ಸಮಾಗಮ ಕಾರ್ಯಕ್ರಮವನ್ನು ಆಶಾ.ಎಂ. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅನೇಕ ರಂಗಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಮಹಿಳೆ ಮತ್ತು ಪುರುಷ ಎಂಬ ಲಿಂಗಭೇದ ತೊರೆದು ಎಲ್ಲರೂ ಸಮಾನರೆಂಬ ಮನೋಭಾವ ಹೊಂದಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಬಂಜಾರಾ ಕಸೂತಿ ಸಂಘಟನೆ ಸಂಸ್ಥಾಪಕಿ ಆಶಾ.ಎಂ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅನೇಕ ರಂಗಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಮಹಿಳೆ ಮತ್ತು ಪುರುಷ ಎಂಬ ಲಿಂಗ ಬೇಧ ತೊರೆದು ಎಲ್ಲರೂ ಸಮಾನರೆಂಬ ಮನೋಭಾವ ಹೊಂದಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಬಂಜಾರಾ ಕಸೂತಿ ಸಂಘಟನೆ ಸಂಸ್ಥಾಪಕಿ ಆಶಾ.ಎಂ. ಪಾಟೀಲ ಹೇಳಿದರು.

ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಹಾಗೂ ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ವೇದಿಕೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೋಶದ ಆಶ್ರಯದಲ್ಲಿ ನಗರದ ದರ್ಬಾರ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸಿಂಚನ ಮಾರ್ಕೆಟ್ ಮೇಳ-ಮಹಿಳಾ ಉದ್ಯಮಿಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೈವಿಕ ವ್ಯತ್ಯಾ ಹೊರತುಪಡಿಸಿ ಧೈರ್ಯ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ಯಾವುದೇ ಲಿಂಗಭೇದವಿಲ್ಲ. ಪುರುಷ ಮತ್ತು ಮಹಿಳೆಯರ ನಡುವಿನ ಸಂಬಂಧ ಸುಂದರವಾಗಬೇಕಾದರೆ, ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಬೆಂಬಲವಾಗಿ ನಿಲ್ಲಬೇಕು. ಪುರುಷರು ಮಹಿಳೆಯರ ಸಾಧನೆ ಗುರುತಿಸಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕವಿವಿ ಧಾರವಾಡದ ಪ್ರಾಧ್ಯಾಪಕ ಡಾ.ಉತ್ತಮ ಕಿನಂಗೆ ಮಾತನಾಡಿ, ಮಹಿಳೆಯರು ಸಾಧನೆ ಮಾಡಬೇಕಾದರೆ ಸಾಧಕ ಮಹಿಳೆಯರ ಕುರಿತು ತಿಳಿದುಕೊಳ್ಳಬೇಕು. ಅವರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಮಹಿಳೆ ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಹೆಣ್ಣು ಅಬಲೆಯಂದು ಕರೆಯುವುದೇ ಅವಮಾನವಿದ್ದಂತೆ. ಮಹಿಳೆ ಕೇವಲ ಕುಟುಂಬದ ಕಣ್ಣಲ್ಲ, ಜಗತ್ತಿನ ಕಣ್ಣಾಗಿದ್ದಾಳೆ. ಬದಲಾವಣೆ ಹೊಂದುತ್ತಿರುವ ಜಗತ್ತಿಗೆ ಮಹಿಳೆಯ ಕೊಡುಗೆ ಅಪಾರ ಎಂದು ತಿಳಿಸಿದರು.

ಕಾಲೆಜಿನ ಪ್ರಾಚಾರ್ಯ ಡಾ.ಪಿ.ಡಿ. ಪೋಳ ಮಾತನಾಡಿ, ಮಹಿಳೆಯರು ಕಾಲಿಡದ ಕ್ಷೇತ್ರವಿಲ್ಲ. ಭಾರತದಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನವಿದೆ ಎಂದರು.

ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಅರುಣಕುಮಾರ ಶಹಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ವೇಳೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ, ಸಂಸ್ಕೃತಿ ಉಳಿಸಿ’ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡ ಈ ಮಾರ್ಕೆಟ್ ಮೇಳದಲ್ಲಿ ಒಟ್ಟು 62 ಮಳಿಗೆಗಳು ಭಾಗವಹಿಸಿದ್ದವು. ಯುವ ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಮೇತ್ರಿ, ಅರ್ಬನ್ ಬ್ಯಾಂಕ್ ನಿರ್ದೇಶಕಿ ವೈಶಾಲಿ ಗೊಂದಿ, ಆಶಾ ಗುಡಗುಂಟಿ, ಕೀರ್ತಿ ನ್ಯಾಮಗೌಡ, ಅರ್ಚನಾ ಶಹಾ, ಮಾಧುರಿ ಹಮಾಬಲಶಟ್ಟಿ, ನಂದಿನಿ ಬಾಂಗಿ, ಕಲ್ಯಾಣಿ ಗೋಕಲೆ, ಪ್ರಿಯಂಕಾ ಅಪ್ಟೆ, ಶಾರದಾ ಪಾಟೀಲ, ಸುನಂದಾ ಕಲ್ಯಾಣಶೆಟ್ಟಿ. ಅಮೃತಾ ಮೇಟಿ, ರಾಜೇಶ್ವರಿ ಹಿರೇಮಠ, ಉಪಪ್ರಾಚಾರ್ಯರಾದ ಡಾ.ಡಿ.ಎಸ್. ನಿಟ್ಟೂರ, ಪ್ರೊ.ಮಲ್ಲಿಕಾರ್ಜುನ ಬೀರಣ್ಣ, ಡಾ.ರವಿಶಂಕರ, ಪ್ರೊ.ಪಿಸಿ. ಸುರಪುರ, ಡಾ.ಆನಂದ ಉಪ್ಪಾರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ.ದೀಪಾ ತಳವಾರ ಸ್ವಾಗತಿಸಿದರು. ವಿದ್ಯಾರ್ಥಿನಿ ಸಾಕ್ಷಿ ಹಾಗೂ ಆಯಿಶಾ ನಿರೂಪಿಸಿ, ದೀಪಾ ಲಕ್ಕಪಗೋಳ ವಂದಿಸಿದರು.

ಬಂಜಾರಾ ಸಮುದಾಯದ ಕಲೆ ಉಳಿವಿಗಾಗಿ ಬಂಜಾರಾ ಕಸೂತಿ ಸಂಘ ಸ್ಥಾಪಿಸಲಾಗಿದೆ. ತಳ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಬಂಜಾರಾ ಜನಾಂಗದ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮ ಸಂಘಟನೆಯ ಉದ್ದೇಶವಾಗಿದೆ. ತಾಂಡಾದ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಹಾಯ, ಸಹಕಾರ ನೀಡಲಾಗುತ್ತಿದೆ.

- ಆಶಾ.ಎಂ.ಪಾಟೀಲ, ಸಂಸ್ಥಾಪಕರು, ಬಂಜಾರ ಕಸೂತಿ ಸಂಘಟನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಹೊರತರುವ ಮುಹೂರ್ತ, ಜಾತ್ರೆಗೆ ಕ್ಷಣಗಣನೆ
ಮಧ್ಯಪ್ರಾಚ್ಯ ಯುದ್ಧ ಬೆನ್ನಿಗೇ ಕೈಸುಡುತ್ತಿದೆ ಮೊಬೈಲ್‌ ಫೋನ್‌ ದರ!