ದೊಡ್ಡಬಳ್ಳಾಪುರ: ಸಾಮಾನ್ಯವಾಗಿ ಬಗೆಬಗೆಯ ಸೌಂದರ್ಯ ಪ್ರದರ್ಶನ ಸ್ಪರ್ಧೆಗಳು ಆಯೋಜಿಸಲಾಗುತ್ತದೆ. ಯುವತಿಯರ ಸೌಂದರ್ಯ ಪ್ರದರ್ಶನ ಸ್ಪರ್ಧೆ ಸಾಮಾನ್ಯವಾದರೆ, ರೈತರು ಮಗುವಿನಂತೆ ಸಾಕಿದ ರಾಸುಗಳ ಸೌಂದರ್ಯ ಪ್ರದರ್ಶನ ಸ್ಪರ್ಧೆ ನಿಜಕ್ಕೂ ವಿಶೇಷ. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ವೇದಿಕೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತಿಮ್ಮನಹಳ್ಳಿ ಗ್ರಾಮ. ನವ ಕರ್ನಾಟಕ ಯುವಶಕ್ತಿ ವೇದಿಕೆಯ ವತಿಯಿಂದ ವಿಜಯ ದಶಮಿ ಪ್ರಯುಕ್ತ ಹಳ್ಳಿಕಾರ್ ಸೌಂದರ್ಯ ಸ್ಪರ್ಧೆ ಇಲ್ಲಿ ಆಯೋಜಿಸಲಾಗಿತ್ತು.
ನವ ಕರ್ನಾಟಕ ಯುವಶಕ್ತಿ ವೇದಿಕೆ ಮಾರ್ಗದರ್ಶಕ ನಾಗರಾಜು ಅಪ್ಪಯಣ್ಣ ಮಾತನಾಡಿ, ಈಗಿನ ಕಾಲದಲ್ಲಿ ಕೃಷಿ ಯಾಂತ್ರೀಕರಣ ಹೆಚ್ಚಾಗುತ್ತಿರುವುದರಿಂದ ಹಳ್ಳಿಕಾರ್ ತಳಿ ದನಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಹಾಲಿನ ಉತ್ಪಾದನೆಗಾಗಿ ಮಿಶ್ರ ತಳಿಗಳ ಸಾಕಣೆ ಹೆಚ್ಚಾಗುತ್ತಿದೆ. ಆದ್ದರಿಂದ ಭಾರತೀಯ ಸಂಸ್ಕೃತಿಯ ವೈಭವವಾಗಿರುವ ಹಳ್ಳಿಕಾರ್ ತಳಿಯನ್ನು ಸಂರಕ್ಷಿಸಿ ಉತ್ತೇಜಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ವಕೀಲ ಪ್ರತಾಪ್ ಮಾತನಾಡಿ, ನವ ಕರ್ನಾಟಕ ಯುವಶಕ್ತಿ ವೇದಿಕೆ ರೈತರ ಕಲ್ಯಾಣ ಮತ್ತು ಕನ್ನಡ ಭಾಷೆ-ಸಂಸ್ಕೃತಿಯ ಉತ್ತೇಜನಕ್ಕಾಗಿ ಶ್ರಮಿಸುತ್ತಿರುವ ಯುವ ಸಂಘಟನೆ. ಸಮಾಜಮುಖಿ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದರು.ಸ್ಪರ್ಧೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಪಾಲ್ಗೊಂಡು ತಮ್ಮ ಸೌಂದರ್ಯವನ್ನು ಪ್ರದರ್ಶಿಸಿತು.
ಕಾರ್ಯಕ್ರಮಕ್ಕೆ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು, ರಕ್ಷಕ್ ಬುಲೆಟ್, ಸೈಕ್ ನವಾಜ್, ಬಾಲನಟ ಮಹಾನಿಧಿ ಸಾಯಿ ತೇಜ್ ಸೇರಿದಂತೆ ಹಲವು ಚಲನಚಿತ್ರ ಕಲಾವಿದರು ಭಾಗಿಯಾಗಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ಸೆಳೆಯಿತು. ಪುಟಾಣಿ ಮಕ್ಕಳ ಯೋಗಪ್ರದರ್ಶನ ವಿಶೇಷ ಆಕರ್ಷಣೆಯಾಯಿತು.
ಸ್ಪರ್ಧೆಯಲ್ಲಿ ಬೆಂಗಳೂರಿನ ಬೊಮ್ಮಸಂದ್ರದ ಮಂಜುನಾಥ ಅವರ ರಾಸುಗಳು ಚಾಂಪಿಯನ್ ಆಗಿ ಆಯ್ಕೆಯಾಗಿದ್ದು, ಅವರಿಗೆ ಹಿರೋ ದ್ವಿಚಕ್ರ ವಾಹನ ಬಹುಮಾನವಾಗಿ ನೀಡಲಾಯಿತು. ಉಳಿದ ಆರು ವಿಭಾಗಗಳಲ್ಲಿ ಸೈಕಲ್ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಮಾಲೀಕರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು ಎಂದು ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ತಿಳಿಸಿದರು.
ಫೋಟೋ-
--
--