ಅರ್ಹ ಯಾರಿಗೂ ಬಿಪಿಎಲ್‌ ಕಾರ್ಡ್ ರದ್ದಾಗುವುದಿಲ್ಲ: ಶಿವಾನಂದಸ್ವಾಮಿ

KannadaprabhaNewsNetwork |  
Published : Oct 04, 2025, 01:00 AM IST
ಚಿಕ್ಕಮಗಳೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಅರ್ಹ ಯಾರಿಗೂ ಕೂಡ ಬಿಪಿಎಲ್‌ ಕಾರ್ಡ್ ರದ್ದಾಗುವುದಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅರ್ಹ ಯಾರಿಗೂ ಕೂಡ ಬಿಪಿಎಲ್‌ ಕಾರ್ಡ್ ರದ್ದಾಗುವುದಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಭರವಸೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 2,43,035 ಬಿಪಿಎಲ್‌ ಕಾರ್ಡ್‌ಗಳಿದ್ದು, ಈ ಸಂಬಂಧ 8,01,536 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ಪಡೆಯುತ್ತಿದ್ದಾರೆ ಎಂದರು

ಬಿಪಿಎಲ್‌ ಕಾರ್ಡ್‌ನ ಮಾನದಂಡದಂತೆ ವಾರ್ಷಿಕ 1.20 ಲಕ್ಷಕ್ಕೂ ಹೆಚ್ಚು ವರಮಾನವಿರುವ ಕೇವಲ 12,993 ಕಾರ್ಡ್‌ದಾರರಿಗಷ್ಟೆ ನೋಟಿಸ್‌ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಯೋಗಾನಂದ್ ಸಭೆಗೆ ಮಾಹಿತಿ ನೀಡಿದರು.

ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಇವುಗಳ ಪರಿಶೀಲನೆ ನಡೆಯುತ್ತಿದ್ದು, ಅರ್ಹರಿಗೆ ಅನ್ಯಾಯವಾಗುವುದಿಲ್ಲ. ಈವರೆಗೂ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಗೆ 300 ಕೋಟಿ ಹಣ ಮತ್ತು ಅಕ್ಕಿ ಸರ್ಕಾರದಿಂದ ಫಲಾನುಭವಿಗಳಿಗೆ ತಲುಪಿದೆ. ಗೃಹಲಕ್ಷ್ಮಿ ಯೋಜನೆಯಡಿ 2,62,944 ಯಜಮಾನಿಯರಿಗೆ ಈವರೆಗೂ 21 ಕಂತುಗಳ ಮೂಲಕ ತಲಾ 47,000 ರೂ. ನೇರ ನಗದು ವರ್ಗಾವಣೆಯಾಗಿದ್ದು, ಇದರ ಒಟ್ಟು ಮೊತ್ತ 1057 ಕೋಟಿ ರೂ.ಗಳಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್ ವೈ.ಆಲದಾರ್ತಿ ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ 3,55,047 ಮೀಟರ್‌ಗಳಿದ್ದು, ಅವುಗಳ ಸಂಬಂಧ 3,12,050 ಮೀಟರ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು, ಈವರೆಗೆ ಅದರ ಮೊತ್ತ 279 ಕೋಟಿ ರು. ಸರ್ಕಾರ ಭರಿಸಿದೆ ಎಂದು ಮೆಸ್ಕಾಂ ಅಧಿಕಾರಿ ಪ್ರದೀಪ್ ಸಭೆಗೆ ವಿವರ ನೀಡಿದರು.

ಶಕ್ತಿ ಯೋಜನೆಯಡಿ 2023ರ ಜೂನ್‌ನಿಂದ ಇಲ್ಲಿಯವರೆಗೆ ಚಿಕ್ಕಮಗಳೂರು ವಿಭಾಗದ ಸಾರಿಗೆ ಬಸ್‌ಗಳಲ್ಲಿ 4.87 ಕೋಟಿ ಟ್ರಿಪ್‌ಗಳಲ್ಲಿ ಮಹಿಳೆಯರು ಓಡಾಡಿದ್ದು, ಈ ಸಂಬಂಧ ಸರ್ಕಾರ 190 ಕೋಟಿ ರು.ಗಳನ್ನು ಸಾರಿಗೆ ಇಲಾಖೆಗೆ ನೀಡಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಪ್ರದೀಪ್ ಸಭೆಗೆ ತಿಳಿಸಿದರು.

ಯುವನಿಧಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 31,412 ಫಲಾನುಭವಿಗಳು 10 ಕೋಟಿ ರು. ಪಡೆದಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಶಾಂತ್ ಮಾಹಿತಿ ಒದಗಿಸಿದರು.

ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆಯಡಿ ಜಿಲ್ಲೆಗೆ ಸುಮಾರು 2 ಸಾವಿರ ಕೋಟಿ ರು. ಪ್ರಯೋಜನ ದೊರಕಿರುವುದಾಗಿ ಸಭೆಯಲ್ಲಿ ಚರ್ಚೆ ನಡೆಯಿತು. ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡ ಬಳಿಕ ಜಿಲ್ಲೆಯಲ್ಲಿ ಆರ್ಥಿಕ ಸಂಚಲನ ಉಂಟಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಂಕರ ಕೊರವರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್, ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ್, ಎಚ್.ಎಸ್.ಕೃಷ್ಣೇಗೌಡ, ಬಿ.ಜಿ.ಚಂದ್ರಮೌಳಿ, ಹೇಮಾವತಿ, ತಾಲೂಕು ಅಧ್ಯಕ್ಷರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ