ಯಾರಿಗೂ ಬೇಡವಾದ ವೀಳ್ಯದೆಲೆ

KannadaprabhaNewsNetwork |  
Published : Jan 03, 2026, 02:45 AM IST
ಯಾರಿಗೂ ಬೇಡವಾದ ವೀಳ್ಯದೆಲೆ  | Kannada Prabha

ಸಾರಾಂಶ

ಸತತ ಬೆಲೆ ಕುಸಿತದಿಂದ ಹೊನ್ನಾವರ ತಾಲೂಕಿನ ವೀಳ್ಯದೆಲೆ ಆಸಕ್ತಿ ಕಳೆದುಕೊಂಡಿದ್ದಾರೆ. ಹಿಂದೆ ಬಹುಬೇಡಿಕೆ ಹೊಂದಿದ್ದ ಹೊನ್ನಾವರದ ವೀಳ್ಯದೆಲೆ ಈಗ ಯಾರಿಗೂ ಬೇಡವಾಗಿದೆ.

ಪ್ರಸಾದ್ ನಗರೆ

ಹೊನ್ನಾವರ: ಹಿಂದೆ ಬಹುಬೇಡಿಕೆ ಹೊಂದಿದ್ದ ಇಲ್ಲಿಯ ವೀಳ್ಯದೆಲೆ ಈಗ ಯಾರಿಗೂ ಬೇಡವಾಗಿದೆ. ವೀಳ್ಯದೆಲೆ ದರ ಪಾತಾಳಕ್ಕೆ ಕುಸಿದಿದ್ದರಿಂದ ಬೆಳೆಗಾರರು ಆಸಕ್ತಿ ಕಳೆದುಕೊಂಡಿದ್ದಾರೆ.

ತಾಲೂಕಿನಲ್ಲಿ ಅಡಕೆ ಪ್ರಧಾನ ಬೆಳೆ, ಬೆರಳೆಣಿಕೆಯಷ್ಟು ರೈತರ ಬಳಿಯಲ್ಲಿ ಎಕರೆಯ ಜಾಗವಿದ್ದರೆ, ಅತಿ ಹೆಚ್ಚಿನ ರೈತರ ಬಳಿಯಲ್ಲಿ ಇರುವುದು ತುಂಡುಭೂಮಿ. ಹೀಗಾಗಿ ಅಡಕೆ ಒಂದೇ ನೆಚ್ಚಿಕೊಳ್ಳಲು ಆಗದು. ಅದೇ ಕಾರಣಕ್ಕೆ ಅಡಿಕೆ ತೋಟದಲ್ಲಿಯೇ ಉಪಬೆಳೆಯಾಗಿ ವೀಳ್ಯದೆಲೆ ಬೆಳೆಯುತ್ತಾರೆ. ಆದರೆ ಈಗ ವೀಳ್ಯದೆಲೆ ಬೆಳೆಯುವವರ ಪ್ರಮಾಣ ಕಡಿಮೆಯಾಗಿದೆ. ಬೆಳೆದ ವೀಳ್ಯದೆಲೆ ಬಳ್ಳಿಯಿಂದ ಕೊಯ್ಯಲು ಆಗದೆ, ಕೊಯ್ದರೂ ಪ್ರಯೋಜನವಿಲ್ಲ ಎಂಬ ಹಂತಕ್ಕೆ ರೈತರು ತಲುಪಿದ್ದಾರೆ.

ಹೊನ್ನಾವರ ತಾಲೂಕಿನ ವೀಳ್ಯದೆಲೆ ಪಾಕಿಸ್ತಾನಕ್ಕೂ ರಫ್ತಾಗುತ್ತದೆ. ದೇಶಾದ್ಯಂತ ಇಲ್ಲಿನ ಎಲೆಗೆ ಬೇಡಿಕೆಯಿದೆ. ಕೇವಲ ರೈತರಿಗಷ್ಟೆ ಅಲ್ಲದೆ ವೀಳ್ಯದೆಲೆ ವ್ಯಾಪಾರಸ್ಥರಿಗೂ ಅನ್ನವನ್ನು ನೀಡುತ್ತಿದೆ. ಆದರೆ ವೀಳ್ಯದೆಲೆಗೆ ನಿರಂತರವಾಗಿ ಬೆಲೆ ಕುಸಿತ ಆಗಿರುವುದು ರೈತರ ಉತ್ಸಾಹ ಕುಗ್ಗಿಸಿದೆ.

ರಾಣಿಬೆನ್ನೂರಿಗೆ ಪ್ರಧಾನವಾಗಿ ಹೊನ್ನಾವರದ ವೀಳ್ಯದೆಲೆ ಹೋಗುತ್ತದೆ. ಆನಂತರದಲ್ಲಿ ಹಾವೇರಿ, ಸಾಗರ, ಶಿವಮೊಗ್ಗ, ಬೆಂಗಳೂರಿಗೆ ರವಾನೆಯಾಗುತ್ತದೆ. ಹೊನ್ನಾವರದ ರೈಲು ನಿಲ್ದಾಣದಿಂದ ಭೋಪಾಲ್‌ಗೆ ಸಹ ವೀಳ್ಯದೆಲೆ ಸಾಗಣೆ ಆಗುತ್ತದೆ. ಬೆಲೆ ಕುಸಿತ ಆಗಿರುವುದರಿಂದ ರೈತರು ವೀಳ್ಯದೆಲೆ ಕೊಯ್ಲು ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಎಲೆ ತೋಟದಲ್ಲಿಯೇ ಉದುರಿ ಹೋಗುತ್ತಿದೆ.

ಡಿಸೆಂಬರ್ ಮುಗಿದು ಜನವರಿ ತಿಂಗಳು ಆರಂಭವಾದರೂ ವೀಳ್ಯದೆಲೆಗೆ ದರ ಬಂದಿಲ್ಲ. ಒಂದು ಕಟ್ಟು ಎಲೆಗೆ ₹೧೫ ನಡೆಯುತ್ತಿದೆ. ಎಲೆ ದೊಡ್ಡದಿದ್ದು ಗುಣಮಟ್ಟದಿಂದ ಕೂಡಿದೆ ಎಂದಾದಲ್ಲಿ ₹೨೦ ವರೆಗೆ ನಡೆಯುತ್ತಿದೆ. ಚಳಿ ಬೀಳಲು ವೀಳಂಬವಾಗಿದ್ದು ಸಹ ಎಲೆ ದರ ಚೇತರಿಕೆ ಕಾಣದೆ ಇರಲು ಒಂದು ಕಾರಣವಾಗಿದೆ ಎಂದು ವೀಳ್ಯದೆಲೆ ಬೆಳೆಗಾರರು ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ರಾಣಿಬೆನ್ನೂರಿಗೆ ವಾರದಲ್ಲಿ ೫ ದಿನ ಹೋಗುತ್ತಿದ್ದ ವಾಹನ ಇದೀಗ ಒಂದು ದಿನ ಮಾತ್ರ ಹೋಗುತ್ತಿದೆ. ಭೋಪಾಲ್‌ಗೆ ವಾರದಲ್ಲಿ ಒಂದು ದಿನ ಸಾಗಾಟ ಮಾಡಲಾಗುತ್ತಿದೆ.

ವೀಳ್ಯದೆಲೆಯನ್ನು ಹೆಚ್ಚಾಗಿ ತಾಲೂಕಿನ ಹೊಸಾಕುಳಿ, ಮುಗ್ವಾ, ಸಾಲಕೋಡ, ಖರ್ವಾ, ಕಡತೋಕಾ, ಕಡ್ಲೆ ಹೀಗೆ ನಾನಾ ಭಾಗಗಳಲ್ಲಿ ಬೆಳೆಯುತ್ತಾರೆ. ವರ್ಷಕ್ಕೆ ಅಂದಾಜು ಐದೂವರೆ ಲಕ್ಷ ಎಲೆ ಕಟ್ಟುಗಳು ಉತ್ಪಾದನೆಯಾಗುತ್ತದೆ. ಆದರೆ ಇದೀಗ ಎಲೆ ಕೊಯ್ಯುವವರು ಹಾಗೂ ಕೂಲಿಯ ದರ ಹೆಚ್ಚಳ, ಅದನ್ನು ಸಾಗಾಣಿಕೆ ಮಾಡುವವರ ಸಂಖ್ಯೆ ಕಡಿಮೆ ಆಗಿದ್ದರಿಂದ ಎಲೆ ಬೆಳೆಯುವುದೇ ಬೇಜಾರು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಲವು ಸಂದರ್ಭದಲ್ಲಿ ವೀಳ್ಯದೆಲೆಯ ವಹಿವಾಟು ಸ್ಥಗಿತಗೊಳ್ಳುವುದು ಸಹ ಅದನ್ನು ಅವಲಂಬಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ. ರೈತರ ಚಿಕ್ಕಪುಟ್ಟ ಖರ್ಚುಗಳಿಗೆ ನೆರವಾಗುತ್ತಿದ್ದ ವೀಳ್ಯದೆಲೆ ಇದೀಗ ಯಾರಿಗೂ ಬೇಡವಾದ ಹಂತಕ್ಕೆ ಬಂದು ತಲುಪಿದೆ. ಖರೀದಿ ಕಡಿಮೆ: ವೀಳ್ಯದೆಲೆ ಖರೀದಿ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ದೇವತಾ ಕಾರ್ಯಗಳಿಗೆ ವೀಳ್ಯದೆಲೆಯನ್ನು ಖರೀದಿ ಮಾಡುತ್ತಿದ್ದಾರೆ. ಯುವ ಸಮುದಾಯ ಗುಟ್ಕಾ ಕಡೆಗೆ ವಾಲಿರುವುದು ಸಹ ವೀಳ್ಯದೆಲೆ ಮಾರುಕಟ್ಟೆ ಕಡಿಮೆ ಆಗಲು ಕಾರಣವಾಗಿದೆ ಎಂದೆನಿಸುತ್ತದೆ ಎಂದು ವೀಳ್ಯದೆಲೆ ವ್ಯಾಪಾರಿ ಎಲ್.ಆರ್. ಹೆಗಡೆ ಹೇಳಿದರು.

ಹೊನ್ನಾವರ ತಾಲೂಕಿನ ಎಲೆಗೆ ಮಾರುಕಟ್ಟೆ ಕುಸಿತವಾಗಿದೆ. ಹೀಗಾಗಿ ದರ ಪ್ರಪಾತಕ್ಕೆ ಕುಸಿದಿದೆ. ಸವಣೂರಿನ ವೀಳ್ಯದೆಲೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೀಗಾಗಿ ನಮ್ಮ ತಾಲೂಕಿನ ವೀಳ್ಯದೆಲೆ ವಹಿವಾಟು ಕಡಿಮೆ ಆಗಿದೆ ಎಂದು ವೀಳ್ಯದೆಲೆ ವ್ಯಾಪಾರಿ ಗೋವಿಂದ ಭಟ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ