ಹಾನಗಲ್ಲ ನಾಲ್ಕರ ಕ್ರಾಸ್‌ನಲ್ಲಿ ಕ್ಯಾಮೆರಾ ಕಣ್ಗಾವಲು

KannadaprabhaNewsNetwork |  
Published : Jan 03, 2026, 02:45 AM IST
ಚಿತ್ರ: 1ಎಚ್‌ಎನ್‌ಎಲ್2, 2ಎ  | Kannada Prabha

ಸಾರಾಂಶ

ಅತ್ಯಂತ ಜನನಿಬಿಡ ತಾಣವಾಗಿರುವ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್‌ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಲ್ಲಿ ನಡೆಯಬಹುದಾದ ಅಪರಾಧಿ ಕೃತ್ಯಗಳ ಬಗ್ಗೆ ನಿಗಾವಹಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಅತ್ಯಂತ ಜನನಿಬಿಡ ತಾಣವಾಗಿರುವ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್‌ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಲ್ಲಿ ನಡೆಯಬಹುದಾದ ಅಪರಾಧಿ ಕೃತ್ಯಗಳ ಬಗ್ಗೆ ನಿಗಾವಹಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್ ಶಿರಸಿ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್‌ಗಳಿಂದ ಇಳಿಯುವ ಮತ್ತು ಹತ್ತುವ, ಇತರ ಖಾಸಗಿ ವಾಹನಗಳು ಇಲ್ಲಿಂದಲೇ ಮಾರ್ಗ ಬದಲಾಯಿಸುವ ಅತ್ಯಂತ ವಾಹನ ದಟ್ಟಣೆ ಹಾಗೂ ಜನದಟ್ಟಣೆ ಉಳ್ಳ ಸ್ಥಳವಾಗಿದೆ. ಇಲ್ಲಿ ಅಪರಾಧಿ ಕೃತ್ಯಗಳು ನಡೆಯುವ ಬಗ್ಗೆ ಪೊಲೀಸ್‌ ಇಲಾಖೆಗೆ ಮೇಲಿಂದ ಮೇಲೆ ದೂರುಗಳು ಬರುತ್ತಲೇ ಇವೆ. ಇದೆಲ್ಲವನ್ನು ಗಮನಿಸಿದ ಪೊಲೀಸ್‌ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಕಣ್ಗಾವಲಿಗೆ ವ್ಯವಸ್ಥೆ ಮಾಡಿದೆ.

ಪೊಲೀಸ್ ಇಲಾಖೆಯ ಸ್ವಯಂ ಆಸಕ್ತಿಯ ಪರಿಣಾಮವಾಗಿ ನಾಲ್ಕರ್ ಕ್ರಾಸ್‌ನಲ್ಲಿ 5 ಎಂಪಿ ಸಾಮರ್ಥ್ಯದ 4 ಸುಧಾರಿತ ಎಚ್‌ಡಿ ಸಿಸಿ ಕ್ಯಾಮೆರಾ ಅಳವಡಿಕೆಯಾಗಿದೆ. ಹಾನಗಲ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಕ್ಯಾಮೆರಾ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ವೀಕ್ಷಣೆ ಮಾಡಬಹುದು.

ನಾಲ್ಕರ ಕ್ರಾಸ್‌ನಲ್ಲಿ ಹೋಟೆಲ್, ಧಾಬಾ ಮತ್ತಿತರ ಅಂಗಡಿಗಳು ತಲೆ ಎತ್ತಿವೆ. ಹೀಗಾಗಿ ದೂರ ಪ್ರಯಾಣದ ವಾಹನಗಳು ಇಲ್ಲಿ ನಿಲ್ಲುತ್ತವೆ. ಈ ಕ್ರಾಸ್‌ನಲ್ಲಿ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ವಾಹನಕ್ಕಾಗಿ ಕಾಯ್ದು ನಿಲ್ಲುತ್ತಾರೆ. ಈ ಕ್ರಾಸ್ ಸಮೀಪದಲ್ಲಿ ರಾಜ್ಯದ ಪ್ರಸಿದ್ಧ ಭೂತೇಶ್ವರ ದೇವಸ್ಥಾನವೂ ಇದೆ. ನಾಲ್ಕರ್‌ ಕ್ರಾಸ್‌ನಲ್ಲಿ ಅಪರಾಧ ಕೃತ್ಯಗಳೂ ಹೆಚ್ಚುತ್ತಿವೆ. ಈ ಹಿಂದೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ಇದೇ ಸ್ಥಳದಲ್ಲಿ ನಡೆದು, ರಾಜ್ಯಾದ್ಯಂತ ಸುದ್ದಿಯಾಗಿತ್ತು.

ನಾಲ್ಕರ್ ಕ್ರಾಸ್‌ನಲ್ಲಿ ಕಾನೂನು ಸುವ್ಯವಸ್ಥೆ ತರುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅತ್ಯಗತ್ಯವಾಗಿತ್ತು. ಆದರೆ ಇದಕ್ಕೆ ಬೇಕಾದ ಅನುದಾನ ಇಲಾಖೆಯಿಂದ ಲಭ್ಯವಾಗದ ಕಾರಣ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ವ್ಯಾಪಾರಸ್ಥರು ಸೇರಿಕೊಂಡು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ.

ಕಳ್ಳತನ, ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಪುಂಡರ ಪರಸ್ಪರ ಹೊಡೆದಾಟ ಮತ್ತಿತರ ಅಪರಾಧಿಕ ಕೃತ್ಯಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಸಹಾಯಕವಾಗಲಿದೆ. ಈ ಕ್ರಾಸ್‌ನಲ್ಲಿ ಕತ್ತಲು ಹೊತ್ತಿನಲ್ಲಿ ವಿದ್ಯುತ್ ದೀಪಗಳ ಬೆಳಕಿನ ವ್ಯವಸ್ಥೆಗಾಗಿ ಗೆಜ್ಜಿಹಳ್ಳಿ ಗ್ರಾಪಂ ಆಡಳಿತಕ್ಕೆ ಮನವಿ ಮಾಡಿದ್ದೇವೆ ಎಂದು ಹಾನಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಸಂಪತ್‌ಕುಮಾರ ಆನಿಕಿವಿ ಹೇಳಿದ್ದಾರೆ. ಪೊಲೀಸ್‌ ಕಳಕಳಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೀಘ್ರ ನಾಲ್ಕರ್ ಕ್ರಾಸ್‌ನಲ್ಲಿ ಹೈಮಾಸ್ಟ್‌ ವಿದ್ಯುತ್ ದೀಪ ಅಳವಡಿಸಿ, ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಗೆಜ್ಜಿಹಳ್ಳಿ ಪಿಡಿಒ ಬಂಗಾರೆಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ