ಕೊಪ್ಪಳ: ನಗರಸಭೆ ಮುಂದೆ 118ನೇ ದಿನದಲ್ಲಿ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜರುಗಿತು.

ಸತ್ಯಾಗ್ರಹನಿರತರಿಗೆ ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ ಸಿಹಿ ಹಂಚಿ, ಕೊಪ್ಪಳ-ಭಾಗ್ಯನಗರ ಬಂದ್ ಯಶಸ್ವಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಸಿಹಿ ಮುಂದಿನ ಗೆಲುವಿನ ಸಿಹಿಯಾಗಲಿ ಎಂದು ಭಾವುಕರಾಗಿ ಮಾತನಾಡಿದರು.

ವೇದಿಕೆ ಮೂಲಕ ಕೊಪ್ಪಳ, ಭಾಗ್ಯನಗರ, ಬಾಧಿತ ಹಳ್ಳಿಗಳ ಸಾವಿರಾರು ಜನರು ಬಂದ್ ಕರೆಗೆ ಓಗೊಟ್ಟು ಬೀದಿಗಿಳಿದು ಹೋರಾಡಿದವರಿಗೆ, ಸ್ವಯಂಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಹೋರಾಟ ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು.

ಇದೇ ವೇಳೆ ಬಂದ್‌ಗೆ ಆಗಮಿಸಿ ಸಹಕಾರ ನೀಡುವ ಜತೆಗೆ ಬಂದ್ ನಡೆಸಲು ವೇದಿಕೆಗೆ ₹2 ಲಕ್ಷ ದೇಣಿಗೆ ನೀಡಿದ ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರು, ಜಂಟಿ ಕ್ರಿಯಾ ವೇದಿಕೆ ಸಂಚಾಲಕರಲ್ಲೊಬ್ಬರಾದ ಮಂಜುನಾಥ ಜಿ. ಗೊಂಡಬಾಳ ಅವರಿಗೆ ದೂರವಾಣಿ ಕರೆ ಮಾಡಿ, ಹೋರಾಟ ಉತ್ತಮ ದಿಕ್ಕಿನತ್ತ ಸಾಗಿದೆ, ಇನ್ನಷ್ಟು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆಗಳನ್ನು ಮಾಡಿ, ಶಕ್ತಿಯುತವಾಗಿ ಹೋರಾಟ ಮುನ್ನಡೆಸಿ, ತಮಗೆ ಶುಭವಾಗಲಿ ಎಂದು ಹಾರೈಸಿದರು.

ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಬಂದ್ ಯಶಸ್ವಿ ಮಾಡಿದ ಎಲ್ಲರಿಗೂ ಅಭಿನಂದನೆ ಹೇಳಿದರು.


ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ‌. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಎಸ್.ಬಿ. ರಾಜೂರು, ಪ್ರಕಾಶಕ ಡಿ.ಎಂ. ಬಡಿಗೇರ, ಜಿ.ಬಿ. ಪಾಟೀಲ್, ಶಾಂತಯ್ಯ ಅಂಗಡಿ, ಜಿ.ಎಸ್. ಕಡೇಮನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಬಸವರಾಜ ನರೇಗಲ್, ಗಂಗಮ್ಮ ಕೊಡೇಕಲ್, ನಾಗರಾಜ ಕುಷ್ಟಗಿ, ಬಸವರಾಜ ವಿರೂಪಾಕ್ಷಪ್ಪ, ಶಿವಪ್ಪ ಜಲ್ಲಿ, ಸಂಜೀವಮ್ಮ ಮುಂಡರಗಿ, ಎಸ್. ಮಹಾದೇವಪ್ಪ ಮಾವಿನಮಾಡು, ವೈ. ಸತ್ಯನಾರಾಯಣ, ಶರಣು ಗಡ್ಡಿ, ಮಾನವ ಬಂಧುತ್ವ ವೇದಿಕೆಯ ಟಿ. ರತ್ನಾಕರ ಈಶಪ್ಪ ದೊಡ್ಡಮನಿ, ಸುಭಾನ್ ನೀರಲಗಿ, ಬಸವರಾಜಪ್ಪ ಶೆಟ್ಟರ್, ವಿಶಾಲಾಕ್ಷಿ ಬಿ. ಶೆಟ್ಟರ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಹಾಂತೇಶ ಕೊತಬಾಳ, ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ಪೂಜಾರ ಇತರರಿದ್ದರು.