ಗಜೇಂದ್ರಗಡ: ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿಹಿಂಪ, ಬಜರಂಗದಳ ಹಾಗೂ ಕ್ಷತ್ರೀಯ ಮರಾಠಾ ಸಮಾಜದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಮರಾಠ ಸಮಾಜದ ಅಧ್ಯಕ್ಷ ಶೇಖಪ್ಪ ರಾಮಜಿ, ಕ್ಷತೀಯ ಮರಾಠ ಸಮಾಜದ ಅಧ್ಯಕ್ಷ ಬಾಬಣ್ಣ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ರಾಜ್ಯದಲ್ಲಿ ಕೋಮುಗಲಭೆ ಹೆಚ್ಚುತ್ತಿವೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಬಹುಸಂಖ್ಯಾತ ಹಿಂದೂಗಳ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕೊನೆಗಾಲ ಬಂದಿದೆ. ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುತ್ತಿದ್ದಾಗ ದಂಧೆಕೋರರು ವಿನಾಕಾರಣ ಕಲ್ಲು ತೂರಿ ಪೊಲೀಸ್ ಅಧಿಕಾರಿಗಳನ್ನೇ ಗಾಯಗೊಳಿಸಿರುವುದು ಖಂಡನೀಯ ಎಂದರು. ವಿಶ್ವ ಹಿಂದೂ ಪರಿಷತ್ ಧಾರವಾಡ ಸತ್ಸಂಗ ಪ್ರಮುಖ ಶ್ರೀಧರ ಕುಲಕರ್ಣಿ, ಜಿಹಾದಿ ಮನಸ್ಥಿತಿ ಹಾಗೂ ಈ ಘಟನೆ ಹಿಂದಿರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಿ ಘಟನೆ ಪುನರಾವರ್ತನೆ ಆಗದಂತೆ ತಡೆಯಬೇಕು ಎಂದು ಆಗ್ರಹಿಸಿದರು.ವಿಹಿಂಪ, ಬಜರಂಗದಳ ತಾಲೂಕು ಕಾರ್ಯದರ್ಶಿ ಪ್ರಸಾದ ಬಡಿಗೇರ ಮಾತನಾಡಿದರು. ಬಜರಂಗದಳ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಕಾಲಕಾಲೇಶ್ವರ ವೃತ್ತ ತಲುಪಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಪವಾರ, ವಿಹಿಂಪ, ಬಜರಂಗದಳ ತಾಲೂಕಾಧ್ಯಕ್ಷ ರವಿ ಕಲಾಲ, ರವಿ ಶಿಂಗ್ರಿ, ಬಾಬಣ್ಣ ರಾಜೋಳಿ, ಯಮನಪ್ಪ ತಿರಕೋಜಿ, ಮಾರುತಿ ಗಡ್ಡದ, ಲಕ್ಷ್ಮಣ ರಾಮಜಿ, ಕಲ್ಲಪ್ಪ ರಾಮಜಿ, ಮಹಾಂತೇಶ ಗಂಧದ, ಶೇಶು ರಾಯಬಾಗಿ, ಶಿವಾಜಿ ಹಾಳಕೇರಿ, ಕಿರಣ ಕಮ್ಮಾರ, ವಿನಾಯಕ ತಳವಾರ, ಬಾಳು ಬೋಸ್ಲೆ ಸೇರಿದಂತೆ ಇತರರು ಇದ್ದರು.