-------------
ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಭಗೀರಥ ಪೀಠದ ಶ್ರೀ ಪುರುಷೋತ್ತಮ ನಂದಾಪುರಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಎಂಡಿಎ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಅವರ 51ನೇ ಜನ್ಮದಿನೋತ್ಸವದ ಕಾರ್ಯಕ್ರಮ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು.
ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ 51 ಮಠಗಳ ಸ್ವಾಮೀಜಿಗಳ ಪಾದಪೂಜೆಯೊಂದಿಗೆ ಕಾರ್ಯಕ್ರಮ ಆರಂಭಿಸಿ, ಆನಂತರ 51 ಗರ್ಭಿಣಿ ಮಹಿಳೆಯರಿಗೆ ಮಡಿಲು ತುಂಬಿ ಸೀಮಂತ ಶಾಸ್ತ್ರ ಹಾಗೂ 51 ಮುತ್ತೈದೆಯರಿಗೆ ಬಾಗಿನ ನೀಡಿ ಗೌರವಿಸಿದ ಬಳಿಕ 51 ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಭಿನಂದಿಸಲಾಯಿತು. ಇದರ ಜೊತೆಗೆ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳು ನಡೆದವು.ಸಾಮಾನ್ಯವಾಗಿ ಜನ್ಮ ದಿನಾಚರಣೆ ಮತ್ತು ಹುಟ್ಟುಹಬ್ಬದ ಸಂಭ್ರಮಗಳು ರಾಜಕೀಯ ಮುಖಂಡರು, ಸಂಬಂಧಿಗಳ ಸಮ್ಮುಖದಲ್ಲಿ ನಡೆಯುತ್ತವೆ. ಆದರೆ ಎಂಡಿಎ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಅವರ ಜನ್ಮದಿನೋತ್ಸವ ಪಕ್ಷಾತೀತ ಮತ್ತು ಜಾತ್ಯತೀತ ಹಾಗೂ ಹೃದಯ ಸ್ಪರ್ಷಿಯಾಗಿ ನಡೆದು ಎಲ್ಲರಿಗೂ ಮಾದರಿಯಾಯಿತು.ಎಚ್.ಎನ್. ವಿಜಯ್ ಅವರನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಠಾಧೀಶರು, ಜನಪ್ರತಿನಿಧಿಗಳು, ರೈತರು, ಸರ್ಕಾರಿ ನೌಕರರು ಹಾಗೂ ಜನ ಸಾಮನ್ಯರು ಸೇರಿದಂತೆ ಸಮಾಜದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರಮುಖರು ಕೇರಳ ಮತ್ತು ತಮಿಳುನಾಡು ರಾಜ್ಯದ ಉದ್ಯಮಿಗಳೊಂದಿಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಹರಸಿ ಹಾರೈಸಿದರು.
ಬೆಳ್ಳಿ ಕಿರೀಟ ತೊಡಿಸಿದ ಅಭಿಮಾನಿಗಳು
ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಜಿ.ಟಿ. ದೇವೇಗೌಡರ ಪತ್ನಿ ಲಲಿತಾ ದೇವೇಗೌಡ, ಮಕ್ಕಳಾದ ಪೂರ್ಣಿಮಾ, ಯಶೋದಾ ಆನಂದ್, ಎಚ್.ಎನ್. ವಿಜಯ್ ತಾಯಿ ಸೌಭಾಗ್ಯಮ್ಮ ಹಾಗೂ ಪತ್ನಿ ಸವಿತ ಹಾಗೂ ಪುತ್ರ ಸಂದೇಶ್, ಪುತ್ರಿ ಹಾಗೂ ಸಹೋದರ ಎಚ್.ಎನ್. ರವಿ, ನಮಿತ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗವಹಿಸಿ ಹೂಗುಚ್ಚ ನೀಡಿ ಶುಭ ಕೋರಿದರು.
ಅರ್ಜುನ್ ಜನ್ಯ ತಂಡದಿಂದ ರಸಮಂಜರಿ
ಬಲೇ ಬಲೇ ಜೈ ಭಜರಂಗಿ ಎಂದು ಹಾಡುತ್ತಾ ಬಂದ ಅರ್ಜುನ್ ಜನ್ಯ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೇ ಖ್ಯಾತ ನಿರೂಪಕಿ ಅನುಶ್ರೀ ಈ ಕಾರ್ಯಕ್ರಮದ ಆಹ್ವಾನಪತ್ರಿಕೆಯಲ್ಲಿ ನಮ್ಮಿಬ್ಬರ ಪೋಟೋ ಹಾಕಿದ್ದಾರೆ ಆರತಕ್ಷತೆ ರೀತಿ ಎಂದು ಅರ್ಜುನ್ ಜನ್ಯ ಅವರಿಗೆ ಸಾಥ್ ನೀಡಿ ಸಂಗೀತ ಕಾರ್ಯಕ್ರಮಕ್ಕೆ ತಮ್ಮ ಮಾತಿನ ಚಾಟಕಿ ಹಾರಿಸಿದರು.