2024ಕ್ಕೆ ಸಿಹಿಕಹಿಯ ವಿದಾಯ, 2025ಕ್ಕೆ ಭರ್ಜರಿ ಸ್ವಾಗತಕ್ಕೆ ಸಿದ್ಧತೆ

KannadaprabhaNewsNetwork |  
Published : Dec 31, 2024, 01:02 AM IST

ಸಾರಾಂಶ

ದಾವಣಗೆರೆ: ಕಾಲವನ್ನು ತಡೆಯೋರೂ ಯಾರೂ ಇಲ್ಲವೆಂಬಂತೆ ಕೊಡುವ ಜೊತೆಗೆ ಕಿತ್ತುಕೊಂಡು, ದುಃಖದ ಜೊತೆಗೆ ಖುಷಿಯನ್ನೂ ಕೊಟ್ಟ, ನೆನಪುಗಳ ಜೊತೆಗೆ ಮರೆಯುವಂತಹ ಘಟನೆಗಳಿಗೂ ಕಾರಣವಾಗಿದ್ದ 2024ನೇ ಸಾಲು ವಿದಾಯ ಹೇಳುವುದರೊಂದಿಗೆ 2025ನೇ ವರ್ಷಕ್ಕೆ ಜಾಗ ಮಾಡಿಕೊಟ್ಟು, ತಾನು ಹೊರಟು ನಿಂತಿದೆ!

ದಾವಣಗೆರೆ: ಕಾಲವನ್ನು ತಡೆಯೋರೂ ಯಾರೂ ಇಲ್ಲವೆಂಬಂತೆ ಕೊಡುವ ಜೊತೆಗೆ ಕಿತ್ತುಕೊಂಡು, ದುಃಖದ ಜೊತೆಗೆ ಖುಷಿಯನ್ನೂ ಕೊಟ್ಟ, ನೆನಪುಗಳ ಜೊತೆಗೆ ಮರೆಯುವಂತಹ ಘಟನೆಗಳಿಗೂ ಕಾರಣವಾಗಿದ್ದ 2024ನೇ ಸಾಲು ವಿದಾಯ ಹೇಳುವುದರೊಂದಿಗೆ 2025ನೇ ವರ್ಷಕ್ಕೆ ಜಾಗ ಮಾಡಿಕೊಟ್ಟು, ತಾನು ಹೊರಟು ನಿಂತಿದೆ!ಹೌದು, ಬದಲಾವಣೆ ಜಗದ ನಿಯಮ, ಹೊಸ ನೀರು ಬಂದ ಹಳೆ ನೀರು ಹೋಗಲೇಬೇಕಂಬಂತೆ ಇದೀಗ ಹೊಸ ವರ್ಷದ ಆಗಮನಕ್ಕೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ, 2024ನೇ ವರ್ಷ ಹಳೆಯ ಸಿಹಿ-ಕಹಿ ಅನುಭವಗಳ ಮೂಟೆ ಕಟ್ಟಿಕೊಂಡು ಹೊರಟು ನಿಂತಿದೆ. ಹೊಸ ವರ್ಷಕ್ಕೆ ಜನರು ಎದುರು ನೋಡುತ್ತಿದ್ದರೆ, 2024ನೇ ಸಾಲು ತಿರುಗಿ ಮತ್ತೆಂದಿಗೂ ಬರದಂತೆ ಹೊರಡಲು ಸಜ್ಜಾಗಿ ನಿಂತಂತೆ ಭಾಸವಾಗುತ್ತಿದೆ.

ಕಳೆದ 2023ನೇ ಸಾಲಿನಲ್ಲಿ ತೀವ್ರ ಬರದಿಂದ ತತ್ತರಿಸಿದ್ದ ಜಿಲ್ಲೆಗಳ ಪೈಕಿ ದಾವಣಗೆರೆ ಸಹ ಒಂದಾಗಿತ್ತು. ನಗರ, ಪಟ್ಟಣ, ಗ್ರಾಮೀಣ ಪ್ರದೇಶವೆನ್ನದೇ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಆಗಿದ್ದ ದಿನಗಳವು. ಬರದ ಹೊಡೆತಕ್ಕೆ ಸಿಲುಕಿ ನಲುಗಿದ್ದ ಅನ್ನದಾತ ರೈತರಿಗೆ 2024ನೇ ವರ್ಷ ಬರುತ್ತಿದ್ದಂತೆ ಸಮೃದ್ಧ ಮಳೆಯನ್ನೇ ಹೊತ್ತು ತಂದಿತು. ಅಂತರ್ಜಲ ಬರಿದಾಗಿ, ಕೆರೆ ಕಟ್ಟೆ ಖಾಲಿಯಾಗಿದ್ದ ಕಾಲಘಟ್ಟದಲ್ಲೇ ಸಮೃದ್ಧ ಮಳೆ ಜನರಿಗೆ ಸಂಭ್ರಮ ತಂದಿತ್ತಾದರೂ ಅತಿವೃಷ್ಟಿಯಿಂದಾಗಿ ಬರದ ಹೊಡೆತಕ್ಕೆ ನಲುಗಿದ್ದ ರೈತರು ಅತಿವೃಷ್ಟಿಯಿಂದ ತತ್ತರಿಸಿದರು. ವಾಡಿಕೆಗಿಂತ ಅತೀ ಹೆಚ್ಚು ಮಳೆಯಾದ ಜಿಲ್ಲೆಯೂ ಇದಾಗಿತ್ತು.

ಮುಂಗಾರು 2024ರಲ್ಲಿ ದಾಖಲೆ ಮಳೆಗೆ ಕಾರಣವಾಯಿತು. ಬಿತ್ತಿದ್ದ ಬೆಳೆಗಳು ಸಮೃದ್ಧವಾಗಿ ಕೈ ಸೇರಿದವು. ಅಕ್ಟೋಬರ್‌ ತಿಂಗಳಿಡೀ ಧಾರಾಕಾರ ಮಳೆಯಂದಾಗಿ ಕಟಾವಿಗೆ ಬಂದಿದ್ದ ಬತ್ತ, ಮೆಕ್ಕೆಜೋಳ ನೆಲ ಕಚ್ಚಿ, ರೈತರು ಕಂಗಾಲಾದರು. ಬರದ ಹೊಡೆತದಿಂದ ನಲುಗಿದ್ದ ರೈತರು ಮುಂಗಾರು ಬೆಳೆ ಕೈಹಿಡಿದರೂ, ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಸ್ಥಿತಿ ಎದುರಿಸಬೇಕಾಯಿತು. ಇನ್ನೂ 15-20 ದಿನಕ್ಕೆ ಕೊಯ್ಲಿಗೆ ಸಿದ್ಧವಾಗಿದ್ದ ರೈತರು ಭಾರೀ ಮಳೆಯಿಂದಾಗಿ ಬೆಳೆಯನ್ನೇ ಕಳೆದುಕೊಂಡು ಅಸಹಾಯಕಾರಿ ಮತ್ತೆ ಆರ್ಥಿಕ ನಷ್ಟ ಅನುಭವಿಸಬೇಕಾಯಿತು. ಹಿಂಗಾರು ಮಳೆ ವೇಳೆ ಜಿಲ್ಲೆಯ ಇಬ್ಬರು ರೈತರು ಸಾವನ್ನಪ್ಪಿದ್ದರು. ನ್ಯಾಮತಿ ತಾಲೂಕಿನಲ್ಲಿ ಹರಿಯುವ ನೀರಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದರು. ಚನ್ನಗಿರಿ ತಾ.ಸಂತೇಬೆನ್ನೂರಿನಲ್ಲಿ ಮನೆ ಗೋಡೆ ಕುಸಿತು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇಬ್ಬರೂ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ರು ನೀಡಲಾಗಿತ್ತು. ಹೊನ್ನಾಳಿಯಲ್ಲಿ 2 ಜಾನುವಾರು, ಚನ್ನಗಿರಿ, ಜಗಳೂರಿನಲ್ಲಿ ತಲಾ 1ರಂತೆ ಒಟ್ಟು 4 ಜಾನುವಾರು ಸಾವನ್ನಪ್ಪಿದ್ದವು. ಹರಿಹರ, ಚನ್ನಗಿರಿಯಲ್ಲಿ ತಲಾ 8 ರಂತೆ 16 ಕುರಿ ಸಾವನ್ನಪ್ಪಿದ್ದವು. ಕಂದಾಯ ಸಚಿವ ಕೃಷ್ಣ ಭೈರೇಗೌಡ ಬೆಳೆ ಹಾನಿ ಪರಿಶೀಲನೆಗೆ ಬಂದಿದ್ದೂ ಆಯಿತು.

ಸದ್ದು ಮಾಡಿದ ಆದಲ್‌ ಸಾವು:

ಮಟ್ಕಾ ಜೂಜಾಟ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆದಿಲ್ ಖಲೀಂವುಲ್ಲಾ ಎಂಬಾತ ಪೊಲೀಸ್‌ ಠಾಣೆಗೆ ಕರೆ ತಂದಿದ್ದ ಸಂದರ್ಭದಲ್ಲೇ ಸಾವನ್ನಪ್ಪಿದ್ದರಿಂದ ಅದು ಲಾಕಪ್ ಡೆತ್ ಅಂತಾ ಆರೋಪ ಕೇಳಿ ಬಂದಿತ್ತು. ನ್ಯಾಯಾಧೀಶರ ಸಮಕ್ಷಮ ಮರಣೋತ್ತರ ಪರೀಕ್ಷೆ ಸಹ ಆಗಿತ್ತು. ಆದಿಲ್ ಸಾವು ಸಹಜವಲ್ಲ. ಅದೊಂದು ಲಾಕಪ್ ಡೆತ್ ಅಂತಾ ಮೃತನ ಕುಟುಂಬಸ್ಥರು, ಸಂಬಂಧಿಗಳು, ನೆರೆಹೊರೆಯವರು ಠಾಣೆ ಎದುರು ಅಪಾರ ಸಂಖ್ಯೆಯಲ್ಲಿ ಸೇರಿದ್ದ ವೇಳೆ ಕೆಲ ಉದ್ರಿಕ್ತರು ಠಾಣೆ ಮೇಲೆ, ಕಲ್ಲು ತೂರಾಟ ಮಾಡಿ, 5 ವಾಹನಗಳನ್ನು ಜಖಂ ಮಾಡಿ, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಇದರಿಂದ 11 ಪೊಲೀಸರು ಗಾಯಗೊಂಡಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ, ಅಶ್ರುವಾಯು ಸಿಡಿಸಬೇಕಾಯಿತು. ಮೃತನ ಅಂತ್ಯಕ್ರಿಯೆ ವೇಳೆ 600 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ 25 ಆರೋಪಿಗಳನ್ನು ಪೊಲೀಸರು ಸಿಸಿ ಕ್ಯಾಮೆರಾ, ಮೊಬೈಲ್ ದೃಶ್ಯಾವಳಿ ಆಧರಿಸಿ, ಬಂಧಿಸಿದ್ದರು.

ಅಭೂತಪೂರ್ವ ಯಶಸ್ಸು ಪಡೆದ ಪತ್ರಕರ್ತರ ರಾಜ್ಯ ಸಮ್ಮೇಳನ:

ವರ್ಷಪೂರ್ತಿ ಎಲ್ಲರ ಸುದ್ದಿ ಬರೆದು, ಲೋಕಕ್ಕೆ ತಿಳಿಸುವ ಪತ್ರಕರ್ತರ ರಾಜ್ಯ ಸಮ್ಮೇಳನ ಫೆಬ್ರವರಿಯಲ್ಲಿ ಎಲ್ಲರ ನಿರೀಕ್ಷೆಯನ್ನೂ ಮೀರಿ, ಅಭೂತಪೂರ್ವವಾಗಿ ಯಶಸ್ವಿಯಾಯಿತು. ಸಿಎಂ ಸಿದ್ದರಾಮಯ್ಯ ಇದೇ ವೇದಿಕೆಯಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ಸು ಪಾಸ್ ಘೋಷಿಸಿದರು. ಸುಮಾರು 2 ಸಾವಿರಕ್ಕೂ ಅದಿಕ ಪತ್ರಕರ್ತರು ಪಾಲ್ಗೊಂಡು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯ, ಜಿಲ್ಲಾ ಪದಾಧಿಕಾರಿಗಳು, ಸ್ಥಳೀಯ ಪತ್ರಕರ್ತರ ಸಹಕಾರ, ಆತಿಥ್ಯಕ್ಕೆ ಮುಕ್ತಕಂಠದಿಂದ ಶ್ಲಾಘಿಸಿದರು. ದಾವಣಗೆರೆ ಮಾದರಿ ಸಮ್ಮೇಳನ ಎಂಬಷ್ಟರ ಮಟ್ಟಿಗೆ ಈ ಸಮ್ಮೇಳನ ಯಶಸ್ವಿಯಾಗಿದ್ದು ಗಮನಾರ್ಹ. ಬೆಣ್ಣೆದೋಸೆ, ಬಗೆಬಗೆಯ ಭಕ್ಷ್ಯಭೋಜನದ ಆತಿಥ್ಯ ನೀಡಿದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಆತಿಥ್ಯಕ್ಕೂ ಪತ್ರಕರ್ತರು ಮನಸೋತರು.

ದುರ್ಗಾಂಬಿಕಾ ದೇವಿ ಜಾತ್ರೆ:

ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದಾದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮಾ.17ರಿಂದ 20ರವರೆಗೆ ನಡೆಯಿತು. ಸುಮಾರು ಸಾವಿರಾರು ಕೋಣ, ಲಕ್ಷಾಂತರ ಕುರಿ, ಕೋಳಿಗಳ ಬಲಿಯಾದವು. ಸುಮಾರು 15-20 ದಿನಗಳ ಕಾಲ ಜಾತ್ರಾ ಸಂಭ್ರಮವು ಇಡೀ ಊರಿನಲ್ಲಿ ಮನೆ ಮಾಡಿತ್ತು.

ಪ್ರಥಮ ಮಹಿಳಾ ಸಂಸದೆ ಆಯ್ಕೆ:

ಎರಡೂವರೆ ದಶಕದಿಂದ ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಕೊಟ್ಟಿದ್ದಲ್ಲದೇ, ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಸಾಧನೆ ಮಾಡಿದರು.

ಬಿಜೆಪಿ ಕನಸು ಮನಸಿನಲ್ಲೂ ಅಂದುಕೊಂಡಿರದಂತಹ ರಾಜಕೀಯ ತಂತ್ರಗಾರಿಕೆ ಹೆಣೆದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್ ನಾಲ್ಕು ಸಲ ಸತತವಾಗಿ ಗೆದ್ದಿದ್ದ ತಮ್ಮ ಬದ್ಧ ಎದುರಾಳಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರರ ಪತ್ನಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ತಮ್ಮ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಗೆಲ್ಲಿಸುವ ಮೂಲಕ ಸರಣಿ ಸೋಲಿನ ಸೇಡು ತೀರಿಸಿಕೊಂಡರು.

ಈ ಫಲಿತಾಂಶದೊಂದಿಗೆ ಮನೆಯೊಂದು ಮೂರು ಬಾಗಿಲು ಅಂತಾಗಿದ್ದ ಬಿಜೆಪಿ ದಿನದಿನಕ್ಕೂ ಮನೆಯೊಂದು 8-10 ಬಾಗಿಲು ಎನ್ನುವಂತಾಗಿದೆ. ಅತ್ತ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಒಂದೇ ಕಲ್ಲಿಗೆ ಎರಡಲ್ಲ, ಹಲವಾರು ಹಕ್ಕಿಗಳನ್ನು ಹೊಡೆಯುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಸದ್ಯ ಬಲಿಷ್ಠ ಎದುರಾಳಿಗಳೇ ಇಲ್ಲದಂತೆ ಮಾಡಿದ್ದಾರೆ. ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್‌ನಲ್ಲೂ ಒಂದು ಕೋಮಿನವರು ಅಷ್ಟಾಗಿ ಗುರುತಿಸಿಕೊಳ್ಳುತ್ತಿಲ್ಲ. ಇನ್ನು ಕಾಂಗ್ರೆಸ್ಸಿನಲ್ಲೂ ಸಮಸ್ಯೆ ಇಲ್ಲವೆಂದೇನಿಲ್ಲ.

ಇನ್ನು ಬಾವುಟ ಹಿಡಿದ ಕಮ್ಯುನಿಷ್ಟ್ ಪಕ್ಷದಲ್ಲೂ ಹಿರಿಯ ನಾಯಕರ ಅಗಲಿಕೆಯಿಂದಾಗಿ ವರ್ಷಾಂತ್ಯದ ವೇಳೆಗೆ ಹಲವರು ಅನಾಥರಂತಾಗಿರುವುದೂ ಸ್ಪಷ್ಟ. ಹಿರಿಯರ ನಾಯಕತ್ವ ಇಲ್ಲವೆಂಬುದು, ನಿಷ್ಠಾವಂತರಿಗೆ ನೋಟಿಸ್, ಉಚ್ಛಾಟನೆಯಂತಹ ಕ್ರಮ ಕೈಗೊಳ್ಳುತ್ತಿದ್ದಾರೆಂದು ಅಂಗನವಾಡಿ ಫೆಡರೇಷನ್‌ನ ಅನೇಕರು ಹೊರ ಬಿದ್ದಿದ್ದಾರೆ. ಎಚ್ಕೆಆರ್ ಹೆಸರಿನ ಬಣ ಸ್ಥಾಪನೆಗೆ ಪಕ್ಷದಲ್ಲಿರುವವರು ಎಚ್ಕೆ ರಾಮಚಂದ್ರಪ್ಪ ಹೆಸರಿಗೆ ಮಸಿ ಬಳಿಯುವ ಯತ್ನ ಎಂಬುದಾಗಿ ಆರೋಪಿಸಿದ್ದಾರೆ. ಹಾಗೆ ನೋಡಿದರೆ ಜಿಲ್ಲೆಯಲ್ಲಿ ಯಾವುದೇ ಪಕ್ಷ, ಪಕ್ಷದ ನಾಯಕರು, ಕಾರ್ಯಕರ್ತರು ನೆಮ್ಮದಿ ಆಗಿಲ್ಲವಂಬುದಂತೂ ಜನರ ಬಾಯಿಂದಲೇ ಬರುತ್ತಿರುವ ಮಾತುಗಳು.

ಪರಿಶಿಷ್ಟ ಪಂಗಡದವರನ್ನೇ ಸಿಎಂ ಮಾಡಬೇಕೆಂದು ಹರಿಹರದ ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠಕ್ಕೆ ಭೇಟಿ ನೀಡಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಾಕಷ್ಟು ಸಂಚಲನಕ್ಕೆ ಕಾರಣರಾಗಿದ್ದರು. ರಾಜ್ಯಮಟ್ಟದ ಪತ್ರಿಕೆಯ ಉಪ ಸಂಪಾದಕ ಬಸವರಾಜ ಬಾತಿ ಕೆಲಸ ಮುಗಿಸಿಕೊಂಡು, ತಮ್ಮ ಊರಿಗೆ ರಾತ್ರಿ ಮರಳುತ್ತಿದ್ದ ವೇಳೆ ಐವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿ, ಕೈಯಲ್ಲಿದ್ದುದನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಘಟನೆ ನಡೆದ 18 ಗಂಟೆಯಲ್ಲೇ ಅಷ್ಟೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಗಮನಾರ್ಹ ಅಂಶ.

ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಬಿದ್ದಿದ್ದ ಸೂಟ್‌ಕೇಸ್‌ವೊಂದು ಸುಮಾರು ಗಂಟೆ ಕಾಲ ಅಧಿಕಾರಿ, ಸಿಬ್ಬಂದಿಗೆ ಆತಂಕ ಹುಟ್ಟು ಹಾಕಿತ್ತು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದಾಗ ಅದರಲ್ಲಿ ಕೆಲ ಬಟ್ಟೆ ಬಿಟ್ಟರೆ ಬೇರೇನೂ ಇರಲಿಲ್ಲವಂಬುದು ಖಚಿತಗೊಂಡ ನಂತರ ಎಲ್ಲರೂ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು.

ಅಂಜಲಿ ಕೊಲೆ ಆರೋಪಿ ಬಂಧನ

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿ ವಿಶ್ವ ತಪ್ಪಿಸಿಕೊಳ್ಳಲು ವಿಶ್ವ ಮಾನವ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾವಣಗೆರೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.

ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದ ಆರೋಪಿ ವಿಶ್ವ ತುಮಕೂರಿನಿಂದ ಕುಟುಂಬ ಸಮೇತ ರೈಲನ್ನೇರಿದ್ದ ಮಹಿಳೆ ಜೊತೆ ಜಗಳವಾಗಿ, ಆಕೆಯ ಪತಿ ಹಾಗೂ ಪ್ರಯಾಣಿಕರ ಕೈಗೆ ಸಿಕ್ಕಿ ಬಿದ್ದು, ಹಣ್ಣುಗಾಯಿ ನೀರುಗಾಯಿಯಾಗುವಂತೆ ಒದೆ ತಿಂದಿದ್ದ. ಹೊಡೆತ ತಿನ್ನೋದು ತಪ್ಪಿಸಿಕೊಳ್ಳಲು ಹೋಗಿ ಮಾಯಕೊಂಡ ಬಳಿ ರೈಲಿನಿಂದ ಹಾರಿ, ಬಿದ್ದು ಪೆಟ್ಟು ಮಾಡಿಕೊಂಡಿದ್ದ. ಘಟನಾ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಆರೋಪಿ ವಿಶ್ವ ಹಾಗೂ ಗಾಯಾಳು ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಾಗ ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿ ವಿಶ್ವನ ಫೋಟೋ ನೋಡಿದ್ದ ಪೊಲೀಸರು ಅದನ್ನು ಖಚಿತಪಡಿಸಿಕೊಂಡು, ಹುಬ್ಬಳ್ಳಿ ಪೊಲೀಸರಿಗೆ ಕರೆಸಿ, ಆತನನ್ನು ವಶಕ್ಕೆ ಒಪ್ಪಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!