ರೈತರೊಂದಿಗೆ ಶಿವಾಚಾರ್ಯ ಶ್ರೀ ಸಾಮೂಹಿಕ ಭೊಜನ
ರೈತರ ಹಬ್ಬ ಎಳ್ಳು ಅಮವಾಸ್ಯೆ ದಿನವನ್ನು ಅಫಜಲ್ಪುರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ರೈತರು ತಮ್ಮ ಹೊಲಗದ್ದೆಗಳಿಗೆ ವಿಶೇಷ ಭಜ್ಜಿ, ರೊಟ್ಟಿ, ಕಡುಬು, ಹೋಳಿಗೆ ಸೇರಿ ಬಗೆ ಬಗೆಯ ಖಾದ್ಯಗಳನ್ನು ಮಾಡಿಕೊಂಡು ಹೋಗಿ ಭೂದೇವಿಗೆ ಚರಗ ಚೆಲ್ಲಿ ಸಂಭ್ರಮಿಸಿದರು.
ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಚನ್ನಮಲ್ಲೇಶ್ವರ ಮಠದ ಪೀಠಾಧಿಪತಿಗಳಾದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ರೈತರು, ಶಾಲಾ ಮಕ್ಕಳೊಂದಿಗೆ ಎಳ್ಳು ಅಮವಾಸ್ಯೆಯ ಪ್ರಯುಕ್ತ ಹೊಲದಲ್ಲಿ ಚರಗ ಚೆಲ್ಲಿ ಸಾಮೂಹಿಕ ಭೋಜನ ಸವಿದು ಮಾತನಾಡಿ, ನಮ್ಮ ಸಂಪ್ರದಾಯ, ನಮ್ಮ ಹಬ್ಬ ಹರಿದಿನಗಳೆಲ್ಲವೂ ನೆಲಮೂಲಕ್ಕೆ ಸಂಬಂಧಿಸಿದ್ದು ಮತ್ತು ನಮ್ಮ ಬದುಕಿಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿಸಿದರು.ರೈತರ ಹಬ್ಬವೆಂದು ಕರೆಯುವ ಎಳ್ಳು ಅಮವಾಸ್ಯೆ ಕೇವಲ ರೈತರ ಹಬ್ಬವಲ್ಲ. ಇದು ಎಲ್ಲರೂ ಸೇರಿ ಆಚರಿಸಬೇಕಾದ ಸುಗ್ಗಿ ಹಬ್ಬ. ಭೂಮಿ ತಾಯಿಗೆ ಚರಗ ಚೆಲ್ಲಿ ಎಲ್ಲರೂ ಕೂಡಿ ಸಾಮೂಹಿಕ ಭೋಜನ ಮಾಡುವುದೇ ಒಂದು ರೀತಿಯ ಆನಂದ. ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಗಾದೆ ಈ ಹಬ್ಬಕ್ಕೆ ಹೋಲಿಕೆಯಾಗಲಿದೆ ಎಂದ ಅವರು, ಎಳ್ಳು ಅಮವಾಸ್ಯೆಯ ಹಿನ್ನೆಲೆ ನೋಡುತ್ತಾ ಹೋದರೆ ಮಹಾ ಭಾರತಕ್ಕೂ ಈ ಹಬ್ಬಕ್ಕೂ ನಂಟು ಕಂಡು ಬರುತ್ತದೆ ಎಂದರು.
ಇವೆಲ್ಲವೂ ಈಗಿನ ಯುವ ಪೀಳಿಗೆಗೆ ತಿಳಿಯಬೇಕಾದರೆ ನಾವುಗಳು ಪ್ರತಿ ಹಬ್ಬ ಹರಿದಿನಗಳಲ್ಲಿ ಮನೆ ಮಂದಿ ಸೇರಿ ಒಟ್ಟಾಗಿ ಹಬ್ಬ ಆಚರಿಸುವುದರ ಜೊತೆಗೆ ಅದರ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಘೋಷಯ್ಯ ಸ್ವಾಮಿ ಸೂರ್ಯಕಾಂತ ಮಾಡ್ಯಾಳ, ಶಿವಶರಣ ಹಡಪದ, ವಿನೋದ ಹಿರೇಮಠ ಸೇರಿದಂತೆ ರೈತರು, ಮಕ್ಕಳು ಇದ್ದರು.