ಕನ್ನಡಪ್ರಭ ವಾರ್ತೆ ವಿಜಯಪುರ ಅಂಧತ್ವವನ್ನು ಮೆಟ್ಟಿನಿಂತು ಸಂಗೀತದ ಮೂಲಕ ಸಮಾಜಕ್ಕೆ ಬೆಳಕಾದವರು ಪಂಡಿತ್ ಪಂಚಾಕ್ಷರ ಗವಾಯಿಗಳು. ಅದನ್ನೇ ಧನಾತ್ಮಕವಾಗಿ ಸ್ವೀಕರಿಸಿ ಬದುಕಿನಲ್ಲಿ ಸಾಧಿಸಿದವರು ಬಹಳ ಜನರಿದ್ದಾರೆ. ಅಂಧರಿಗಾಗಿಯೇ ಲಿಪಿ ಸಿದ್ದಪಡಿಸಿದ ಲೂಯಿಸ್ ಬ್ರೆಲ್ ಅಂಧರಿಗೆ ಬೆಳಕಾದವರು. ಅಂಧರಿಗೆ ಅವಕಾಶ ಸಿಕ್ಕರೆ ಬೇಕಾದದ್ದನ್ನು ಸಾಧಿಸುವ ಶಕ್ತಿ ಇದೆ ಎಂಬುದಕ್ಕೆ ಪುಟ್ಟರಾಜ ಗವಾಯಿಗಳೇ ಸಾಕ್ಷಿ ಎಂದು ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಶ್ರೀ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಅಂಧತ್ವವನ್ನು ಮೆಟ್ಟಿನಿಂತು ಸಂಗೀತದ ಮೂಲಕ ಸಮಾಜಕ್ಕೆ ಬೆಳಕಾದವರು ಪಂಡಿತ್ ಪಂಚಾಕ್ಷರ ಗವಾಯಿಗಳು. ಅದನ್ನೇ ಧನಾತ್ಮಕವಾಗಿ ಸ್ವೀಕರಿಸಿ ಬದುಕಿನಲ್ಲಿ ಸಾಧಿಸಿದವರು ಬಹಳ ಜನರಿದ್ದಾರೆ. ಅಂಧರಿಗಾಗಿಯೇ ಲಿಪಿ ಸಿದ್ದಪಡಿಸಿದ ಲೂಯಿಸ್ ಬ್ರೆಲ್ ಅಂಧರಿಗೆ ಬೆಳಕಾದವರು. ಅಂಧರಿಗೆ ಅವಕಾಶ ಸಿಕ್ಕರೆ ಬೇಕಾದದ್ದನ್ನು ಸಾಧಿಸುವ ಶಕ್ತಿ ಇದೆ ಎಂಬುದಕ್ಕೆ ಪುಟ್ಟರಾಜ ಗವಾಯಿಗಳೇ ಸಾಕ್ಷಿ ಎಂದು ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಶ್ರೀ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು, ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಅಂಧರ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ ವಿಜಯಪುರದಲ್ಲಿ ಹಮ್ಮಿಕೊಂಡಿರುವುದು ಇತಿಹಾಸದಲ್ಲಿ ಬರೆದಿಡುವ, ಸಾಮಾನ್ಯರಿಗಿಂತ ವಿಶಿಷ್ಟ ಸಾಹಿತ್ಯ ರಚಿಸಿದ ಅಂಧರ ಸಾಹಿತ್ಯ ಪ್ರತಿಭೆ ಅನಾವರಣಗೊಂಡಿರುವುದು ಶ್ಲಾಘನೀಯ ಎಂದರು.ಜ್ಞಾನಯೋಗಾಶ್ರಮದ ಪ. ಪೂ ಬಸವಲಿಂಗ ಸ್ವಾಮಿಗಳು ಮಾತನಾಡಿ, ಅಂಧರ ಸಾಹಿತ್ಯವನ್ನು ಪ್ರಕಟಿಸುವ ಕೆಲಸ ಸಂಘ-ಸಂಸ್ಥೆಗಳು ಮಾಡಬೇಕು. ದೃಷ್ಟಿ ಇಲ್ಲದಿದ್ದರೂ ಒಳಗಿನ ಕಣ್ಣಿನ ಮೂಲಕ ಸಾಮಾಜಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಬಿತ್ತುವ ಸಾಹಿತ್ಯ ರಚಿಸಿದ ಅಂಧರಿಗೆ ಈ ಸಮ್ಮೇಳನದಲ್ಲಿ ವಿಶೇಷ ಗೋಷ್ಠಿ ಏರ್ಪಡಿಸಬೇಕು ಎಂದು ಹೇಳಿದರು.ಸರ್ವಾಧ್ಯಕ್ಷತೆ ವಹಿಸಿದ್ದ ಧಾರವಾಡ ಮನಗುಂಡಿಯ ಗುರು ಬಸವ ಮಹಾಮನೆಯ ಬಸವಾನಂದ ಶ್ರೀಗಳು ಮಾತನಾಡಿ ಲೂಯಿಸ್ ಬ್ರೆಲ್‌ಗಿಂತ ಮುಂಚೆಯೇ ಭಾರತದಲ್ಲಿ ಸೂರದಾಸರು ಸಾಹಿತ್ಯ ರಚಿಸಿದರು. ಅಂಧರಲ್ಲಿಯ ವಿಶೇಷ ಶಕ್ತಿಯನ್ನು ಕವನಗಳ ಮೂಲಕ ಸಮಾಜಕ್ಕೆ ಬಿತ್ತರಿಸುತ್ತಿರುವ ಈ ಸಮ್ಮೇಳನ ಇತಿಹಾಸದಲ್ಲೇ ಅಜರಾಮರ ವಾಗಲಿದೆ ಎಂದರು.ಗೋಷ್ಠಿಯೊಂದರಲ್ಲಿ ಸಾಹಿತ್ಯ ಸಂಗೀತ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಗಳ ಕೊಡುಗೆ ಕುರಿತು ಡಾ.ನಾಗಶೆಟ್ಟಿ ಗಾರಂಪಳ್ಳಿ. 2ನೇ ಗೋಷ್ಠಿ ಯಲ್ಲಿ ಹೊಸಗನ್ನಡ ಸಾಹಿತ್ಯ ಲೋಕಕ್ಕೆ ಅಂಧ ಬರಹಗಾರರ ಕೊಡುಗೆ ಕುರಿತು ಡಾ.ವಡ್ಡಗೆರೆ ನಾಗರಾಜಯ್ಯ, ಪ್ರೊ.ದೊಡ್ಡೇಗೌಡರು ವೆಂಕಣ್ಣ, ಗೋಷ್ಠಿ 3ರರಲ್ಲಿ ಬ್ರೈಲ್ ಪ್ರಸ್ತುತ ಸವಾಲುಗಳು ಮತ್ತು ಆಧುನಿಕ ಆವಿಷ್ಕಾರಗಳ ಕುರಿತು ರಾಜೇಶ್ ಕಿಣಿ ಉಪನ್ಯಾಸ ನೀಡಿದರು.ಈ ಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 20 ಕವಿಗಳು ಸ್ವರಚಿತ ಕವನ ವಾಚಿಸಿದರು. ನಾಡಿನ ಹಿರಿಯ ಗಾಯಕ ಫಕೀರೇಶ್ ಕಣವಿ, ಕೆ.ಎಂ.ನಿತ್ಯಾನಂದ, ಕಲಾವಿದ ನರಸಿಂಹಲು, ಸ್ವಯಂ ಸೇವಕಿ ಶಾರದಾ, ವೈದ್ಯ ಸುನಿಲ್ ಗೋಖಲೆ, ಅಂಧ ಮಕ್ಕಳ ಶಾಲೆಯ ಸಂಸ್ಥಾಪಕ ಎಂ.ಬಿ.ಉದುಪುಡಿ ಅವರನ್ನು ಸನ್ಮಾನಿಸಲಾಯಿತು. ಸಂಗೀತ ವಿದ್ವಾಂಸ ಡಾ.ಸಿದ್ದರಾಮಯ್ಯ ಪೊಲೀಸ್ ಪಾಟೀಲ್ ಹಾಗೂ ಕೃತಿಕಾ ಜಂಗಿನ್ಮಟ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಅಧ್ಯಕ್ಷತೆ ಹಿರಿಯ ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ ವಹಿಸಿದ್ದರು. ಬಿ.ಎಚ್. ಹಿರೇಮಠ, ಆನಂದ್ ಮುಳ್ಸಾವಳಗಿ,ಡಾ.ಪಿ.ವಿ.ನಾಗರಾಜ್, ಡಾ.ಕೃಷ್ಣ ಹೊಂಬಾಳ, ನಾಗಯ್ಯ ಹಿರೇಮಠ, ಪಂಚಾಕ್ಷರಿ ಶಿರೋಳಮಠ, ವಿಜಯ್ ಕುಮಾರ್ ಕೊತ್ವಾಲ್, ಬಿ.ಎಸ್. ಬಿರಾದಾರ್, ಡಾ. ವಿಜಯಕುಮಾರ್ ಪೂಜಾರಿ, ಮಲ್ಲಿಕಾರ್ಜುನ ಹಿರೇಮಠ ಹಾಗೂ ನಾಡಿನ ಅಂಧ ಸಾಹಿತಿಗಳು, ಕವಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.