ರಂಗಶಂಕರಕ್ಕೆ 20 ವರ್ಷ ನಿಮಿತ್ತ ಜನವರಿ 3 ರಿಂದ 8ರ ವರೆಗೆ ನಾಟಕೋತ್ಸವ: ಅಬ್ರಹಾಂ ಡಿ.ಸಿಲ್ವ

KannadaprabhaNewsNetwork | Published : Dec 31, 2024 1:02 AM

ಸಾರಾಂಶ

ರಂಗಶಂಕರಕ್ಕೆ 20 ವರ್ಷ ತುಂಬಿದ ಅಂಗವಾಗಿ ನಗರದಲ್ಲಿ ಜ.2 ರಿಂದ ಜ.8ರ ವರೆಗೆ ನಾಟಕೋತ್ಸವ, ರಂಗ ಕಲಿಕಾ ಕಾರ್ಯಾಗಾರ, ಛಾಯಾ ಚಿತ್ರ ಪ್ರದರ್ಶನ ಹಾಗೂ ಶಾಂತಲಾ ಕಲಾವಿದರ ಸಂತೋಷ ಕೂಟ ನಡೆಯಲಿದೆ ಎಂದು ಶಾಂತಲಾ ಕಲಾವಿದರ ಟ್ರಸ್ಟ್ ಅಧ್ಯಕ್ಷ ಅಬ್ರಹಾಂ ಡಿ.ಸಿಲ್ವ ತಿಳಿಸಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಟಿ ಆರಂಧತಿನಾಗ್ ಉದ್ಘಾಟನೆ । ರಂಗ ಕಲಿಕಾ ಕಾರ್‍ಯಾಗಾರ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಶಾಂತಲಾ ಕಲಾವಿದರ ಸಂಘದ ಸುವರ್ಣ ಮಹೋತ್ಸವ ಹಾಗೂ ಬೆಂಗಳೂರಿನ ರಂಗಶಂಕರಕ್ಕೆ 20 ವರ್ಷ ತುಂಬಿದ ಅಂಗವಾಗಿ ನಗರದಲ್ಲಿ ಜ.2 ರಿಂದ ಜ.8ರ ವರೆಗೆ ನಾಟಕೋತ್ಸವ, ರಂಗ ಕಲಿಕಾ ಕಾರ್ಯಾಗಾರ, ಛಾಯಾ ಚಿತ್ರ ಪ್ರದರ್ಶನ ಹಾಗೂ ಶಾಂತಲಾ ಕಲಾವಿದರ ಸಂತೋಷ ಕೂಟ ನಡೆಯಲಿದೆ ಎಂದು ಶಾಂತಲಾ ಕಲಾವಿದರ ಟ್ರಸ್ಟ್ ಅಧ್ಯಕ್ಷ ಅಬ್ರಹಾಂ ಡಿ.ಸಿಲ್ವ ತಿಳಿಸಿದರು.

ನಗರದ ಜಿಲ್ಲಾ ಕಾಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜ. 3ರಂದು ಶುಕ್ರವಾರ ಸಂಜೆ 5. 30 ಗಂಟೆಗೆ ನಗರದ ಡಾ.ರಾಜ್‌ಕುಮಾರ್ ರಂಗಮಂದಿರದ ಹೊರಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ರಂಗಭೂಮಿ ಹಾಗೂ ಹಿರಿಯ ಚಲನಚಿತ್ರ ನಟಿ ಅರುಂಧತಿ ನಾಗ್ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ಭಾಗವಹಿಸಲಿದ್ದಾರೆ. ರಂಗ ಶಂಕರ ಶಿಬಿರ ಜ.3ರಿಂದ 8ರವರೆಗೆ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ 25 ಮಂದಿಗೆ, ನಡೆಯಲಿದೆ. ಶಿಬಿರದ ನಿರ್ದೇಶಕರಾಗಿ ಖ್ಯಾತ ರಂಗಕರ್ಮಿ ಕೆ.ಪಿ.ಲಕ್ಷ್ಮಣ, ಸಂಪನ್ಮೂಲ ವ್ಯಕ್ತಿಗಳಾಗಿ ಮ.ಸರಸ್ವತಿ, ಕೃಷ್ಣಮೂರ್ತಿ ಹನೂರು, ಪಿಚ್ಚಳ್ಳಿ ಶ್ರೀನಿವಾಸ್, ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಎಂ.ಎಸ್.ಆಶಾದೇವಿ ಭಾಗವಹಿಸಲಿದ್ದಾರೆ ಎಂದರು.

ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, ಡಾ.ರಾಜ್‌ಕುಮಾರ್ ರಂಗಮಂದಿರದ ಪ್ರವೇಶ ದ್ವಾರದಲ್ಲಿ ನಾಟಕಗಳ ಛಾಯಾಚಿತ್ರ ಪ್ರದರ್ಶನ, ಜ. 5ರಂದು ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಶಾಂತಲಾ ಕಲಾವಿದರ ಸಂತೋಷ ಕೂಟ ನಡೆಯಲಿದ್ದು ಜನಶತ್ರು ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ವಿ. ಚಿತ್ರಾ ಮಾತನಾಡಿ, ಪ್ರತಿದಿನ ನಾಟಕ ಆರಂಭವಾಗುವ ಮುನ್ನ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನವಿದೆ. ವಿದ್ವಾನ್ ರಂಗರಾಜ್ ಮತ್ತು ತಂಡದಿಂದ ನಾದಸ್ವರ, ಡ್ರಾಮಾ ಮಾಸ್ಟರ್ ಮಹದೇವಪ್ಪ ಮತ್ತು ತಂಡದಿಂದ ಮೂಡಲಪಾಯ ಯಕ್ಷಗಾನದ ಹಾಡುಗಳು, ನೀಲಗಾರ ಶ್ರಿದೊಡ್ಡಗವಿಬಸಪ್ಪ ಮತ್ತು ತಂಡದಿಂದ ಜನಪದ ಕಾವ್ಯ ಗಾಯನ, ಬೀಸು ಕಂಸಾಳೆ ಚನ್ನಿಗ ಮತ್ತು ತಂಡದಿಂದ ಗೊರವರ ಕುಣಿತ, ಉಸ್ತಾದ್ ಡಾ.ಮೊಹಸಿನ್ ಖಾನ್ ಮತ್ತು ತಂಡದಿಂದ ಸಿತಾರ್ ಮಾಧುರ್ಯ ಪ್ರದರ್ಶವಿರುತ್ತದೆ ಎಂದು ಮಾಹಿತಿ ನೀಡಿದರು.

ಜ.3 ರಂದು ಶಾಂತಲಾ ಕಲಾವಿದರಿಂದ ಬಿ.ಎಸ್.ವಿನಯ್ ರಚಿಸಿದ, ಚಿತ್ರಾ ವೆಂಕಟರಾಜು ನಿರ್ದೇಶನದ ಅಶ್ವಘೋಷ ನಾಟಕ, ಜ.4 ರಂದು ಬೆಂಗಳೂರು ಥಿಯೇಟರ್ ಅನ್ಸಂಬಲ್ ತಂಡದಿಂದ ಸುಡುಗಾಡು ಸಂಘ ನಾಟಕ, ಜ.5 ರಂದು ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಇವರಿಂದ ಬೆತ್ತಲಾಟ ನಾಟಕ, ಜ.6 ರಂದು ಖಾಲಿರಂಗದಿಂದ ಡೋರ್ ನಂ.8 ನಾಟಕ, ಜ.7ರಂದು ರಂಗಾರಂಭ, ಗಳಿಗೇನಹಳ್ಳಿ ತುಮಕೂರು ಇವರಿಂದ ಬಹುಮುಖಿ ನಾಟಕ, ಜ.8ರಂದು ಜಂಗಮ ಕಲೆಕ್ಟಿವ್, ಬೆಂಗಳೂರು ಇವರಿಂದ ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕಗಳು ನಡೆಯಲಿವೆ ಎಂದರು. ಸಂಘದ ಚೇತನ್, ಅರೀಪ್, ಪ್ರಕಾಶ್. ಪದ್ಮಾಕ್ಷಿ ಇದ್ದರು.

ಪ್ರತಿದಿನ ನಾಟಕ ಆರಂಭವಾದ ನಂತರ ನಾಟಕ ಮುಗಿಯುವವರೆಗೆ ರಂಗಮಂದಿರದೊಳಗೆ ಪ್ರವೇಶವಿರುವುದಿಲ್ಲ, ಒಂದು ನಾಟಕಕ್ಕೆ 50 ರು., ಸೀಸನ್ ಟಿಕೆಟ್ 200 ರು. ಟಿಕೆಟ್ ದರವಿದ್ದು ಎಲ್ಲರೂ ಸಹಕರಿಸುವಂತೆ ಕೆ.ವೆಂಕಟರಾಜು ಮನವಿ ಮಾಡಿದರು.

Share this article