ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧ: ರಾಧಾಕೃಷ್ಣ ದೊಡ್ಮನಿ

KannadaprabhaNewsNetwork | Published : May 4, 2024 12:30 AM

ಸಾರಾಂಶ

ನವ ಕಲಬುರಗಿ ನಿರ್ಮಾಣಕ್ಕೆ ಕಾಂಗ್ರೆಸ್‌ ಸಂಕಲ್ಪ. ಅಭಿವೃದ್ಧಿ ವಿಷಯಗಳಿಗೆ ಅಕ್ಷರ ರೂಪ ನೀಡಿರುವ ಕಲಬುರಗಿ ನೆಕ್ಸ್ಟ್‌‌‌ಪ್ರಣಾಳಿಕೆಯನ್ನು ಕಾಂಗ್ರೆಸ್‌ ನಾಯಕರು, ಸಚಿವರು, ಶಾಸಕರೆಲ್ಲರೂ ಸೇರಿ ಶುಕ್ರವಾರ ಇಲ್ಲಿ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಗ್ರಾಮಗಳಿಂದಲೇ ಅಭಿವೃದ್ಧಿ ಆರಂಭವಾಗಬೇಕು ಎನ್ನುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನೀಲಿನಕ್ಷೆ ಹಾಕಿಕೊಳ್ಳಲಾಗಿದ್ದು, ಎಲ್ಲ ವಿಭಾಗಗಳಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಖರ್ಗೆ ಅಳಿಯ, ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಹೇಳಿದರು.

ಕಲಬುರಗಿ ನವ ನಿರ್ಮಾಣದ ಸಂಕಲ್ಪದೊಂದಿಗೆ ಕಣದಲ್ಲಿರುವ ರಾಧಾಕೃಷ್ಣ ದೊಡ್ಮನಿ ತಮ್ಮ ಅಭಿವೃದ್ಧಿ ವಿಷಯಗಳಿಗೆ ಅಕ್ಷರ ರೂಪ ನೀಡಿರುವ ಕಲಬುರಗಿ ನೆಕ್ಸ್ಟ್‌‌‌ಪ್ರಣಾಳಿಕೆಯನ್ನು ಕಾಂಗ್ರೆಸ್‌ ನಾಯಕರು, ಸಚಿವರು, ಶಾಸಕರೆಲ್ಲರೂ ಸೇರಿ ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಗ್ರಾಮೀಣ ಹಾಗೂ ನಗರಾಭಿವೃದ್ಧಿ, ಆಟೋಟ ಸೇರಿದಂತೆ ಸಣ್ಣ- ಸಣ್ಣ ರಂಗಗಳಲ್ಲಿ ಪ್ರಾಯೋಗಿಕವಾಗಿ ಅಭಿವೃದ್ಧಿಗೆ ಮುಂದಾಗಲು ಇಂತಹ ಪ್ರಯತ್ನ ಮಾಡೋಣವೆಂದು ಅವರು ಹೇಳಿದ್ದಾರೆ.

ಕಲಬುರಗಿ ನೆಕ್ಸ್ಟ್‌‌ ನವ ಕಲಬುರಗಿಯ ಹೊಸ ಸಂಕಲ್ಪದ ನನ್ನ ಕನಸಿನ ಸಣ್ಣ ಹೆಜ್ಜೆಗಳು, ಇವು ಸಾಧಿಸಿದಾಗ ಸಾರ್ಥಕ ಸಾಧನೆಗಳು ಆಗಬೇಕು ಎಂಬ ಸದುದ್ದೇಶದೊಂದಿಗೆ ನಾವು ನವೀನ ಪ್ರಯತ್ನಕ್ಕೆ ಕೈ ಹಾಕಿದ್ದಾಗಿ ರಾಧಾಕೃಷ್ಣ ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕಲಬುರಗಿ ನೆಕ್ಸ್ಟ್‌‌ ಪರಿಕಲ್ಪನೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಹುತೇಕ ಎಲ್ಲ ಇಲಾಖೆ/ ವಲಯಗಳ ಅಭಿವೃದ್ಧಿಗೆ ಕಲಬುರಗಿ ನೆಕ್ಸ್ಟ್‌ನಲ್ಲಿ ಒತ್ತು ನೀಡಲಾಗಿದ್ದು, ಸುಂದರ ಹಾಗೂ ಸಮೃದ್ಧಿ ಕಲಬುರಗಿ ನಿರ್ಮಾಣದ ಗುರಿ ಹೊಂದಲಾಗಿದೆ.

ಕಲಬುರಗಿ ಪ್ರಗತಿಗೆ ಕೆಕೆಆರ್‌ಡಿಬಿ ಬೆಂಬಲ: ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ, ಈ ಸಲದ ಬಜೆಟ್‌ನಲ್ಲಿ ರು.5000 ಘೋಷಣೆಯಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಅವಿಷ್ಕಾರಕ್ಕೆ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ 9 ತಾಲೂಕುಗಳಲ್ಲಿ ಮಿನಿವಿಧಾನಸೌದ ನಿರ್ಮಾಣ ಮಾಡಲಾಗಿದೆ. ಇನ್ನೂ ಹತ್ತು ಮಿನಿವಿಧಾನಸೌಧಗಳ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಕಲಬುರಗಿ ನೆಕ್ಸ್ಟ್‌‌‌ ಎಂಬ ಪ್ರಗತಿ ನೀಲ ನಕಾಶೆ ಅನುಷ್ಠಾನದಲ್ಲಿ ಕೆಕೆಆರ್‌ಡಿಬಿ ಸಹಯೋಗ ಸದಾ ಇರುತ್ತದೆ ಎಂದು ಭರವಸೆ ನೀಡಿದರು. ಕೈ ಹಿಡಿದ ಬಂಜಾರಾ ಮುಖಂಡ ವಿಠ್ಠಲ ಜಾಧವ್‌

ಇದೇ ಸಂದರ್ಭದಲ್ಲಿ ಬಂಜಾರ ಸಮಾಜದಲ್ಲಿ ವಿಠ್ಠಲ್ ಜಾಧವ್ ಬಿಜೆಪಿ ತೊರದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಸುದ್ದಿಗಾರರೊಂದಿಗೆ ಮಾತನಾಡುತ್ತ ಜಧವ ಜೊತೆ ಬಿಜೆಪಿಯಲ್ಲಿ 10 ವರ್ಷವಿದ್ದೆ. ಡಾ. ಜಾಧವ್‌ ಅವರು ತಮ್ಮನ್ನು ಬಿಟ್ಟರೆ ಮತ್ತೊಂದು ಪವರ್‌ ಸೆಂಟರ್‌ ಬೇಡ ಎಂದು ಹೇಳುತ್ತಾರೆ. ಇದು ನನಗೆ ಪಸಂದ್‌ ಇಲ್ಲ. ಬಂಜಾರಾ ಪ್ರಗತಿಗೆ ಅವರು ಮನಸ್ಸಿಲ್ಲ. ಹೀಗಾಗಿ ಬಜಾರಾ ಸಮುದಾಯದ ಮುಖಂಡನಾಗಿ ನಾನು ಕಾಂಗ್ರೆಸ್‌ ಪ್ರಗತಿ ಅಭಿಲಾಶೆ, ಖರ್ಗೆಯವರ, ಅವರ ಪರಿವಾರದ ಸದಸ್ಯರ ಪ್ರಗತಿ ಪರ್ವದ ಚಿಂತನೆಗೆ ಮನಸೋತು ಕಾಂಗ್ರೆಸ್‌ ಸೇರುತ್ತಿರೋದಾಗಿ ಹೇಳಿದರು.

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು, ಶಾಸಕರಾದ ಅಲ್ಲಂಪ್ರಭು ಪಾಟೀಲ್‌, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಭಾಪತಿ ಆರ್.ವಿ. ಸುದರ್ಶನ್, ಬಿಎಲ್‌ ಶಂಕರ್‌, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಸೇರಿದಂತೆ ಹಲವರಿದ್ದರು.

Share this article