ಸಾಮಾಜಿಕ ಬಂಧಗಳ ಮೀರಿ ಮನುಷ್ಯರಾಗಿಸುವ ಪುಸ್ತಕ

KannadaprabhaNewsNetwork |  
Published : Nov 18, 2025, 12:15 AM IST
ಪೋಟೊ: 17ಎಸ್‌ಎಂಜಿಕೆಪಿ02ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸೋಮವಾರ ಕನ್ನಡ ಪುಸ್ತಕ ಪ್ರಾಧಿಕಾರ, ಕಾಲೇಜಿನ ಕನ್ನಡ ವಿಭಾಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿಗಳ ವಿಚಾರ ಸಂಕಿರಣ ಮತ್ತು ಪ್ರಬಂಧ ಮಂಡನೆ ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಹಮತ್ ತರೀಕೆರೆ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕಾಲ, ದೇಶ, ಧರ್ಮಗಳನ್ನು ದಾಟಿ ಆತ್ಮ ಸಂಗಾತಿಯನ್ನಾಗಿಸುವ ಶಕ್ತಿ ಪುಸ್ತಕಗಳಿಗೆ ಇದೆ. ಇದು ಆನಂದವನ್ನು, ಕಲೆಯನ್ನು ಮತ್ತು ಕೆಲವು ಸಾಮಾಜಿಕ ಬಂಧನಗಳನ್ನು ಬಿಡಿಸಿ, ಮನುಷ್ಯರನ್ನಾಗಿಸುತ್ತದೆ ಎಂದು ಸಂಸ್ಕೃತಿ ಚಿಂತಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಹಮತ್ ತರೀಕೆರೆ ಹೇಳಿದರು.

ಶಿವಮೊಗ್ಗ: ಕಾಲ, ದೇಶ, ಧರ್ಮಗಳನ್ನು ದಾಟಿ ಆತ್ಮ ಸಂಗಾತಿಯನ್ನಾಗಿಸುವ ಶಕ್ತಿ ಪುಸ್ತಕಗಳಿಗೆ ಇದೆ. ಇದು ಆನಂದವನ್ನು, ಕಲೆಯನ್ನು ಮತ್ತು ಕೆಲವು ಸಾಮಾಜಿಕ ಬಂಧನಗಳನ್ನು ಬಿಡಿಸಿ, ಮನುಷ್ಯರನ್ನಾಗಿಸುತ್ತದೆ ಎಂದು ಸಂಸ್ಕೃತಿ ಚಿಂತಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಹಮತ್ ತರೀಕೆರೆ ಹೇಳಿದರು.

ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸೋಮವಾರ ಕನ್ನಡ ಪುಸ್ತಕ ಪ್ರಾಧಿಕಾರ, ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ‘ನನ್ನ ಮೆಚ್ಚಿನ ಪುಸ್ತಕ’ ಕುರಿತ ವಿಚಾರ ಸಂಕಿರಣ ಮತ್ತು ಪ್ರಬಂಧ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರತರುವ ಜವಾಬ್ದಾರಿಯನ್ನು ಅಧ್ಯಾಪಕರು ನಿಷ್ಠೆಯಿಂದ ನಿಭಾಯಿಸಿದಾಗ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗಳು ಮೂಡಲು ಸಹಕಾರಿಯಾಗುತ್ತದೆ ಎಂದರು.

ಪುಸ್ತಕ ಪ್ರವಾಸ ಮನಸ್ಸಿನ ಆಲೋಚನಾ ಕ್ರಮವನ್ನು ವಿಸ್ತರಿಸುವುದರ ಜೊತೆಗೆ ಭೌದ್ಧಿಕ ವಿಕಾಸವನ್ನು ಬೆಳೆಸುತ್ತದೆ. ಪುಸ್ತಕಯಾತ್ರೆ ಎಂಬುದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅಧ್ಯಾಪಕರಿಗೂ ಬೇಕಾಗುತ್ತದೆ. ಅಧ್ಯಾಪಕರ ಕಿವಿಗಳು ಕಿವುಡಾಗಬಾರದು. ಬಾಯಿ ಮೇಲಾಗಬಾರದು ಅಧ್ಯಾಪಕರು ಕೇಳಿಸಿಕೊಳ್ಳುವ ಕಾಲವಿದು. ಆರೋಗ್ಯಕರ ಓದಿನ ವಾತಾವರಣವನ್ನು ರೂಪಿಸಬೇಕು. ಪುಸ್ತಕಗಳ ಓದು ವ್ಯಕ್ತಿತ್ವವನ್ನು ರೂಪುಗೊಳಿಸುತ್ತದೆ. ಬುದ್ಧಿ-ಭಾವ, ಪ್ರಜ್ಞೆ, ಕರುಣೆ ಸಂಗಮವಾಗುತ್ತದೆ. ಓದು ನಮ್ಮ ಜ್ಞಾನದ ರೆಕ್ಕೆಗಳನ್ನು ತೆರೆದುಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಪುಸ್ತಕಗಳಲ್ಲೂ ವಿಷವಿರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ನಾವು ನೋಡುವ, ಓದುವ ಅಕ್ಷರಗಳೆಲ್ಲವೂ ಸುಂದರವಾಗಿ, ಭಾವನಾತ್ಮಕವಾಗಿ ಇರುವುದಿಲ್ಲ. ಸಂಬಂಧಗಳನ್ನೇ ಮುರಿಯುವ ಮನಸ್ಸುಗಳನ್ನ ನೋಯಿಸುವ ಅಕ್ಷರಗಳೇ ಇಂದು ನಮಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ವಾಟ್ಸಾಪ್ ಜಗತ್ತನ್ನು ನೋಡಿದರೆ ನಮಗೆ ಇದರ ಅರಿವಾಗುತ್ತದೆ. ಅವು ದ್ವೇಷವನ್ನೇ ಹೊರಚಾಚುತ್ತಿರುತ್ತವೆ. ಕಲೆ ಕೆಡುಕನ್ನೂ ಕೂಡ ಮಾಡಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆಯಿಂದ ತಮ್ಮ ಓದನ್ನು ಮುಂದುವರಿಸಬೇಕಾಗಿದೆ. ಪುಸ್ತಕಯಾತ್ರೆ ನಿಮಗೆ ಹೊಸ ಚಿಂತನೆಗಳನ್ನು ಸೃಷ್ಟಿಸಲಿ, ಕಾರುಣ್ಯ ನೀಡಲಿ, ಮನುಷ್ಯತ್ವವನ್ನು ಕಲಿಸಲಿ, ವಿಶ್ವಮಾನವರನ್ನಾಗಿ ಮಾಡಲಿ ಎಂದರು.

ಪ್ರಾಚಾರ‍್ಯ ಡಾ.ಅವಿನಾಶ್ ಟಿ. ಮಾತನಾಡಿ, ಜ್ಞಾನಕ್ಕೆ ಯಾವ ಗಡಿ, ಮಿತಿಯೂ ಇರಬಾರದು. ಕಲಿಕೆ ನಿರಂತರವಾದುದು. ಮನಸ್ಸನ್ನು ಮುಚ್ಚಿಕೊಳ್ಳದೇ ಮುಕ್ತತೆಗೆ ತೆರೆಯುವಂತಿರಬೇಕು ಸಂವೇದನವನ್ನು ಸೃಷ್ಟಿಸಬೇಕು. ಓದು ನಮ್ಮ ದೃಷ್ಟಿಕೋನವನ್ನು ಬದಲಿಸುತ್ತದೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯಕವಾಗುತ್ತದೆ. ಮನಸ್ಸನ್ನು ತಿಳಿಗೊಳಿಸುತ್ತದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಪ್ರಕಾಶ್ ಮರಗನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಡಾ.ದೊಡ್ಡನಾಯ್ಕ ಎಚ್., ಕನ್ನಡ ಉಪನ್ಯಾಸಕ ಡಾ.ಲವ ಜಿ.ಆರ್., ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ವಿ.ಗಿರಿಧರ್ ಸೇರಿದಂತೆ ಹಲವರಿದ್ದರು.

ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಲೇಖಕರ ಕೃತಿಗಳ ಕುರಿತಂತೆ ಪ್ರಬಂಧ ಮಂಡಿಸಿದರು.

PREV

Recommended Stories

ಮಕ್ಕಳ ಪ್ರತಿಭೆಗೆ ಚಿತ್ರಕಲಾ ಸ್ಪರ್ಧೆ ವೇದಿಕೆ
ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದಕ್ಕೆ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದೆ: ಎಚ್‌.ಎನ್.ಅಶೋಕ್