ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯ, ಸ್ವರ್ಣ ರಶ್ಮಿ ಟ್ರಸ್ಟ್ ಮತ್ತು ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ವತಿಯಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣಕ್ಕೆ ಬೌದ್ಧಿಕ ವಲಯ, ಪ್ರಗತಿಪರ ಚಿಂತಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಭಾರತದಲ್ಲಿ ಬಹಳ ಪ್ರಚಾರ ಪಡೆದಿರುವ ಭಗವದ್ಗೀತೆಯಂತಹ ಒಂದು ಸಾಮಾಜಿಕ-ತಾತ್ವಿಕ ಪಠ್ಯದ ಕುರಿತ ಕಾರ್ಯಕ್ರಮವನ್ನು ಕುರಿತು ಸಾಹಿತಿಗಳು, ಸಿಂಡಿಕೇಟ್ ಸದಸ್ಯರು, ಲೇಖಕರು ಮತ್ತು ವಿವಿಯ ವಿದ್ಯಾರ್ಥಿಗಳು ಖಂಡಿಸಿದ್ದಾರೆ.ಕುವೆಂಪು ವಿವಿ ಕುಲಪತಿಗಳಾದ ಶರತ್ ಅನಂತಮೂರ್ತಿ ಅವರು ತಮ್ಮ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣ ಅಯೋಜಿಸಿರುವುದನ್ನು ಸಮರ್ಥಿಸಿಕೊಂಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ವಿಚಾರ ಸಂಕಿರಣದ ಔಚಿತ್ಯವೇನು?:ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ ಶ್ರೀಪಾಲ್ ಅವರು ಈ ವಿಚಾರ ಸಂಕಿರಣದ ಔಚಿತ್ಯವನ್ನು ಪ್ರಶ್ನಿಸಿ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ.
ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವ, ಸಂಘ ಪರಿವಾರದ ಬೇರೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದಾರೆ. ಇದೀಗ ಭಗವದ್ಗೀತೆಯ ಹೆಸರಲ್ಲಿ ಬರುತ್ತಿದ್ದಾರೆ. ಇವರೆಲ್ಲರೂ ಗಾಂಧಿ, ಬುದ್ದ, ಬಸವಣ್ಣ, ಅಂಬೇಡ್ಕರ್ ನಿಲುವುಗಳನ್ನು ವಿರೋಧಿಸುವ ಸಂಸ್ಥೆಯ ಸದಸ್ಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಇಡೀ ದೇಶದ ವಿಶ್ವವಿದ್ಯಾಲಯಗಳನ್ನು ಒಂದೇ ಸಿದ್ಧಾಂತದ ಅಡಿಯಲ್ಲಿ ತಂದು, ವಿದ್ಯಾರ್ಥಿಗಳಿಗೆ ಸಂವಿಧಾನಕ್ಕಿಂತ ಹೆಚ್ಚಾಗಿ ಮನುಸ್ಮೃತಿಯನ್ನು ತಲೆಗೆ ತುಂಬಬೇಕು ಎಂಬ ಸಂಘ ಪರಿವಾರದ ತೀರ್ಮಾನದಂತೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ಬರುತ್ತಿದ್ದವರು ಈಗ ಭಗವದ್ಗೀತೆ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ದೂರಿದ್ದಾರೆ.
ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಹೆಸರಿನ ವಿಶ್ವವಿದ್ಯಾಲಯದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿರುವ ಕಾರ್ಯಕ್ರಮಗಳು ನಡೆಯುವುದನ್ನು ಖಂಡಿಸುತ್ತೇವೆ. ನ.18ರಂದು ಹಮ್ಮಿಕೊಂಡಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಎಂಬ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ವಿವಿಯ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೂ ಶ್ರೀಪಾಲ್ ಪತ್ರ ಬರೆದಿದ್ದಾರೆ.ಕುವೆಂಪು ವಿವಿಯ ಈ ವಿಚಾರ ಸಂಕಿರಣಕ್ಕೆ ಸಾಮಾಜಿಕ ಜಾಲತಾಣದಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಹರ್ಷಕುಮಾರ್ ಕುಗ್ವೆ ಅವರ ಬಹಿರಂಗ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕುಲಪತಿ ಶರತ್ ಅನಂತಮೂರ್ತಿ ವಿಚಾರ ಸಂಕಿರಣವನ್ನು ಸಮರ್ಥಿಸಿಕೊಂಡಿದ್ದಾರೆ. ಕುಲಪತಿಗಳಿಗೆ ಲೇಖಕ ಬಹಿರಂಗ ಪತ್ರ
ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣ ಆಯೋಜನೆ ಸಂಬಂಧ ಲೇಖಕ ಹರ್ಷಕುಮಾರ್ ಕುಗ್ವೆ ಕುವೆಂಪು ವಿವಿ ಕುಲಪತಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಂತಹ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ತತ್ವಗಳ ನೆಲೆಯಲ್ಲಿ ಭಗವದ್ಗೀತೆ, ಮನುಸ್ಮೃತಿ, ವೇದ ಸಾಹಿತ್ಯ, ಪ್ರಾಚೀನ ಜ್ಞಾನ ಪರಂಪರೆ ಇತ್ಯಾದಿಗಳನ್ನು ಚರ್ಚಿಸಬೇಕೆ ಅಥವಾ ಈಗಾಗಲೇ ದೇಶವನ್ನು ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಹೇಗೆ ಒಡೆಯಬೇಕು ಎಂದು ನೀಲನಕ್ಷೆ ಇಟ್ಟುಕೊಂಡು ಹೊರಟಿರುವ ಐಡಿಯಾಲಜಿಗಳ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆ? ಈ ಕುರಿತು ನಿಮ್ಮ ವಿವೇಚನೆ ಏನು ಎಂದು ಪ್ರಶ್ನಿಸಿದ್ದಾರೆ.ಭಗವದ್ಗೀತೆಯಾಗಲೀ, ಮನಸ್ಮೃತಿಯಾಗಲೀ ಯೂನಿವರ್ಸಿಟಿಯಲ್ಲಿ ಚರ್ಚೆಯಾಗಬಾರದು ಎಂದೇನಿಲ್ಲ. ಆದರೆ ಮುಕ್ತ ಚರ್ಚೆ ಎಂದರೆ ಅಲ್ಲಿ ಒಂದೇ ಐಡಿಯಾಲಜಿಯವರನ್ನು ಕರೆಸಿ ಭಾಷಣ ಕೊಡುವುದಲ್ಲ. ನಿಮಗೆ ಅಷ್ಟು ಆಸಕ್ತಿ ಇದ್ದರೆ ಭಗವದ್ಗೀತೆಯ ಕುರಿತು ಹಲವು ನೆಲೆಗಳಲ್ಲಿ ಚರ್ಚೆ ಇಟ್ಟುಕೊಳ್ಳಬಹುದಿತ್ತು. ಬಹಳ ಮುಖ್ಯವಾಗಿ ಅಂಬೇಡ್ಕರ್ ಚರ್ಚಿಸಿರುವ ನೆಲೆಯನ್ನು, ಗಾಂಧೀಜಿ ಚರ್ಚಿಸಿರುವ ನೆಲೆಯನ್ನು ಕೂಡ ಸೇರಿಸಿಕೊಳ್ಳಬಹುದಿತ್ತು. ಆದರೆ, ಈ ವಿಚಾರ ಸಂಕಿರಣ ಮುಕ್ತ ಚಿಂತನೆಯ ಉದ್ದೇಶವಿರದೇ ಮನುವಾದಿ, ವರ್ಣಾಶ್ರಮ ಚಿಂತನೆಯನ್ನು ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ದಕ್ಕಿಸಿಕೊಳ್ಳುವ ಒಂದೇ ಉದ್ದೇಶವಿರುವುದು ಸ್ಪಷ್ಟ. ಈ ಕಾರ್ಯಕ್ರಮವನ್ನು ರದ್ದುಪಡಿಸಿ ಕಾರ್ಯಕ್ರಮದ ರೂಪುರೇಷೆಯನ್ನು ಡೆಮಕ್ರಟಿಕ್ ಆಗಿ ನಡೆಸಿ, ಯೂನಿವರ್ಸಿಟಿಯ ಬೇರೆ ಬೇರೆ ವಿಭಾಗಗಳನ್ನೂ ಒಳಗೊಂಡು ಹೊಸ ರೀತಿಯಲ್ಲಿ ನಿಜವಾದ ಮುಕ್ತ ಚರ್ಚೆಯನ್ನು ಮತ್ತೊಂದು ದಿನ ಆಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.