ಕನ್ನಡಪ್ರಭ ವಾರ್ತೆ ಕನಕಗಿರಿ
ಬಣ್ಣದಾಟವಾಡುತ್ತಿದ್ದ ಬಾಲಕನೊಬ್ಬ ಸಂಪಿನಲ್ಲಿ ಸ್ನಾನ ಮಾಡಲು ಹೋಗಿ ಮೃತಪಟ್ಟ ಘಟನೆ ಪಟ್ಟಣದ 5ನೇ ವಾರ್ಡಿನಲ್ಲಿ ಬುಧವಾರ ನಡೆದಿದೆ.ಪಟ್ಟಣದಲ್ಲಿ ಬಣ್ಣದಾಟ ಬಂದರೆ ಸಾಕು ಒಂದಿಲ್ಲ ಒಂದು ಅನಾಹುತವಾಗುತ್ತಲೇ ಇವೆ. ಕಳೆದೆರೆಡು ವರ್ಷಗಳ ಹಿಂದೆ ಇಬ್ಬರು ಯುವಕರು ಕಾಲು ಜಾರಿ ನೀರುಪಾಲಾಗಿದ್ದರು. ಈ ವರ್ಷ ಮತ್ತೊರ್ವ 9 ವರ್ಷದ ಸೃಜನ್ ಬಡಿಗೇರ ಎನ್ನುವ ಬಾಲಕ ಮೃತನಾಗಿದ್ದಾನೆ. ಬಣ್ಣದೋಕುಳಿಯಲ್ಲಿ ಒಂದಿಲ್ಲ ಒಂದು ಆಘಾತಕಾರಿ ಘಟನೆ ನಡೆಯುತ್ತಿರುವುದು ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿದೆ.
ಇತ್ತ ಬಾಲಕ ಸೃಜನ್ ಸಾವಿನ ಬೆನ್ನಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯೂ ನಡೆಸಲಾಗಿರುವ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.ಬಿಸಿಲಿನ ತಾಪ ಹೆಚ್ಚಾಗಿ ಎರಡು ಆಕಳು ಬಲಿ:ಕುಷ್ಟಗಿ ತಾಲೂಕಿನ ಗುಡಿಕಲಕೇರಿ ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ಎರಡು ಆಕಳು ಮೃತಪಟ್ಟಿವೆ. ಈ ಎರಡು ಆಕಳುಗಳು ಪರಸಪ್ಪ ತೋಪಲಕಟ್ಟಿ ಎಂಬ ರೈತರಿಗೆ ಸೇರಿದವುಗಳಾಗಿವೆ.ಇಡೀ ಕುಟುಂಬವೇ ಈ ಎರಡು ಆಕಳು ನೀಡುವ ಹಾಲಿನಿಂದಲೇ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದ್ದು, ಆಕಳು ಕಳೆದುಕೊಂಡ ಕುಟುಂಬಸ್ಥರು ಆಕ್ರಂದನ ಹೇಳತೀರದಾಗಿದೆ. ಸರ್ಕಾರವು ಈ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪಶು ವೈದ್ಯಕೀಯ ಪರೀಕ್ಷಕಿ ಚೈತ್ರಾ ಅಂಗಡಿ ಮರಣೋತ್ತರ ಪರೀಕ್ಷೆ ಮಾಡಿದರು. ಈ ಕುರಿತು ತಾಲೂಕು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಆನಂದ ಮಾಹಿತಿ ನೀಡಿ ಆಕಳು ಒಂದಕ್ಕೆ 10 ಹತ್ತು ಸಾವಿರ ಪರಿಹಾರ ಧನ ನೀಡಲಾಗುತ್ತದೆ ಎಂದರು.
ಪತ್ನಿ ಕೊಂದ ಪತಿ ನೇಣಿಗೆ ಶರಣು:ಪತ್ನಿ ಕೊಂದು, ಪತಿ ನೇಣಿಗೆ ಶರಣಾಗಿರುವ ಘಟನೆ ಕೊಪ್ಪಳ ತಾಲೂಕಿನ ಬುಡಶೆಡ್ನಾಳ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಲಕ್ಷ್ಮವ್ವ ವಾಲಿಕಾರ(36) ಕೊಲೆಯಾದ ಮಹಿಳೆ. ನಿಂಗಪ್ಪ ವಾಲಿಕಾರ(40) ನೇಣಿಗೆ ಶರಣಾದ ವ್ಯಕ್ತಿ.ಕುಡಿದು ನಿತ್ಯವೂ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ನಿಂಗಪ್ಪ ವಾಲಿಕಾರ, ಕುಡಿದ ಅಮಲಿನಲ್ಲಿ ಪತ್ನಿ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದು, ಅಲ್ಲದೆ ನಂತರ ಹೊಲದಲ್ಲಿ ತಾನು ಸಹ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀವ್ರ ಗಾಯಗೊಂಡಿದ್ದ ಲಕ್ಷ್ಮವ್ವಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.ಈ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.