ಕಬ್ಬು ಹೊರುತ್ತಿದ್ದ ಹುಡುಗ ಕೆಎಎಸ್‌ ಅಧಿಕಾರಿ

KannadaprabhaNewsNetwork |  
Published : Oct 04, 2026, 01:45 AM IST
3ಎಚ್ಎಸ್ಎನ್8 : ಪುರುಷೋತ್ತಮ್‌. | Kannada Prabha

ಸಾರಾಂಶ

ನಲ್ಲೂರು ಗ್ರಾಮದ ಡಾ. ಎನ್. ಆರ್. ಪುರುಷೋತ್ತಮ ಅವರ ಬದುಕಿನ ಪಯಣ ಇದು. ಬಡತನ, ದುಡಿಮೆ ಮತ್ತು ಹೋರಾಟದ ನಡುವೆಯೂ ಶಿಕ್ಷಣವನ್ನು ಕೈಬಿಡದೆ, ನಿರಂತರ ಪರಿಶ್ರಮದ ಮೂಲಕ ಆಡಳಿತ ಸೇವೆಯ ಉನ್ನತ ಜವಾಬ್ದಾರಿಗೆ ಏರಿದ ಅವರ ಬದುಕು ಗ್ರಾಮೀಣ ಯುವ ಜನರಿಗೆ ಸ್ಫೂರ್ತಿಯ ಕಥೆಯಾಗಿದೆ. ಇಂದು ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಮೂಲಭೂತ ಸೌಕರ್ಯ ವಿಭಾಗದ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಪುರುಷೋತ್ತಮ ಅವರು, ಸಮುದಾಯದ ಹಿತಕ್ಕಾಗಿ ದುಡಿಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಜೀತದಾಳಾಗಿ ದುಡಿದ ತಂದೆ, ತಾಯಿ-ತಂದೆ ಹಾಗೂ ತಮ್ಮಂದಿರೊಂದಿಗೆ ಕೂಲಿ ಕಾರ್ಮಿಕನಾಗಿ ಕಬ್ಬು ಹೊತ್ತ ಬೆವರಿನ ಹಾದಿ ರಜಾ ದಿನಗಳಲ್ಲಿ ತಂದೆಯ ಕೆಲಸವನ್ನು ತಾನೇ ಹೊತ್ತುಕೊಂಡ ಮಗ. ಮನೆಮನೆಗೆ ಅಂಚೆ ಪತ್ರ ತಲುಪಿಸಿದ ಅಂಚೆಯಣ್ಣನಿಂದ ಆರಂಭವಾದ ಸರ್ಕಾರಿ ಸೇವೆ, ನಂತರ ಶಿಕ್ಷಕ ವೃತ್ತಿ, ಅಲ್ಲಿಂದ ಕೆಎಎಸ್ ಅಧಿಕಾರಿ, ಇಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ.ತಾಲೂಕಿನ ನಲ್ಲೂರು ಗ್ರಾಮದ ಡಾ. ಎನ್. ಆರ್. ಪುರುಷೋತ್ತಮ ಅವರ ಬದುಕಿನ ಪಯಣ ಇದು. ಬಡತನ, ದುಡಿಮೆ ಮತ್ತು ಹೋರಾಟದ ನಡುವೆಯೂ ಶಿಕ್ಷಣವನ್ನು ಕೈಬಿಡದೆ, ನಿರಂತರ ಪರಿಶ್ರಮದ ಮೂಲಕ ಆಡಳಿತ ಸೇವೆಯ ಉನ್ನತ ಜವಾಬ್ದಾರಿಗೆ ಏರಿದ ಅವರ ಬದುಕು ಗ್ರಾಮೀಣ ಯುವ ಜನರಿಗೆ ಸ್ಫೂರ್ತಿಯ ಕಥೆಯಾಗಿದೆ. ಇಂದು ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಮೂಲಭೂತ ಸೌಕರ್ಯ ವಿಭಾಗದ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಪುರುಷೋತ್ತಮ ಅವರು, ಸಮುದಾಯದ ಹಿತಕ್ಕಾಗಿ ದುಡಿಯುತ್ತಿದ್ದಾರೆ.ಗ್ರಾಮೀಣ ಅಂಚೆ ಸೇವಕರಿಂದ ಸರ್ಕಾರಿ ಅಧಿಕಾರಿಯವರೆಗೆ:

ಪದವಿ ಮುಗಿಸಿದ ಬಳಿಕ ಗ್ರಾಮೀಣ ಅಂಚೆ ಸೇವಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ನಂತರ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಮುಂದುವರಿದ ವಿದ್ಯಾಭ್ಯಾಸದ ಮೂಲಕ ಕನ್ನಡ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್. ಹಾಗೂ ಕೆ-ಸೆಟ್ (ಕನ್ನಡ) ಅರ್ಹತೆ ಪಡೆದರು.೨೦೦೮ರಲ್ಲಿ ಕೆಎಎಸ್ ಅಧಿಕಾರಿ:

೨೦೦೮ರಲ್ಲಿ ಗೆಜೆಟೆಡ್ ಪ್ರೊಬೆಷನರಿ (ಕೆಎಎಸ್) ಆಗಿ ಆಯ್ಕೆಯಾಗಿದ್ದು, ಅವರ ವೃತ್ತಿ ಜೀವನದ ಮಹತ್ವದ ತಿರುವಾಯಿತು.ಸೇವೆಗೆ ಹಲವು ಪ್ರಶಸ್ತಿಗಳು:

೨೦೧೭ರಲ್ಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಆಡಳಿತಾತ್ಮಕ ಸೇವೆಯ ಅನುಭವಕ್ಕಾಗಿ ರಾಷ್ಟ್ರೀಯ ಯುವ ಪ್ರಶಸ್ತಿ ಪಡೆದರು. ೨೦೨೨ರಲ್ಲಿ ಧಾರವಾಡದಲ್ಲಿ ಅತ್ಯುತ್ತಮ ಸರ್ಕಾರಿ ಸೇವಾ ಪ್ರಶಸ್ತಿಗೂ ಭಾಜನರಾದರು.ಜ್ಞಾನಾರ್ಜನೆಯ ಹಸಿವು ನಿಲ್ಲಲಿಲ್ಲ:

ಆಡಳಿತ ಸೇವೆಯ ನಡುವೆಯೂ ಅಧ್ಯಯನ ಮುಂದುವರಿಸಿದ ಅವರು, ಜಾನಪದ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ೨೦೨೧ರಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.ಕುಟುಂಬ ಹಾಗೂ ಮಾರ್ಗದರ್ಶನ:

ಪತ್ನಿ ಅರ್ಪಿತಾ ಪುರುಷೋತ್ತಮ ಹಾಗೂ ಮಕ್ಕಳಾದ ಶತಾಕ್ಷಿ ಪಿ. ನಲ್ಲೂರು ಮತ್ತು ಸನ್ಮಿತ್ರ ಪಿ. ನಲ್ಲೂರು ಅವರ ಕುಟುಂಬ ಜೀವನದ ಪ್ರಮುಖ ಆಧಾರವಾಗಿದ್ದಾರೆ. ಅವರ ಸಹೋದರ ಎನ್. ಆರ್. ಜಯರಾಮ್ ಅವರು ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮಿಷನರ್‌ ಆಗಿದ್ದು, ಕಿರಿಯ ಸಹೋದರ ಎನ್. ಆರ್‌. ಸಂತೋಷ ಅವರು ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದಾರೆ.ಪುರುಷೋತ್ತಮ ಅವರ ಮಾರ್ಗದರ್ಶನದಲ್ಲಿ ಹಲವರು ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಪಡೆದಿದ್ದಾರೆ. ಅವರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮಿಷನರ್‌ ಚನ್ನಕೇಶವ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿಲೀಪ್‌ ಕುಮಾರ್‌ ಪ್ರಮುಖರು. ಹುಟ್ಟಿದ ಪರಿಸ್ಥಿತಿ ನಮ್ಮ ಗಮ್ಯವನ್ನು ನಿರ್ಧರಿಸುವುದಿಲ್ಲ; ಕಲಿಯುವ ಹಂಬಲ, ದುಡಿಯುವ ಮನಸ್ಸು ಮತ್ತು ಗುರಿ ಸಾಧಿಸುವ ಛಲ ನಮ್ಮ ದಾರಿಯನ್ನು ಬದಲಿಸಬಲ್ಲದು ಎಂಬ ಸಂದೇಶವನ್ನು ಡಾ. ಎನ್. ಆರ್. ಪುರುಷೋತ್ತಮ ಅವರ ಜೀವನ ಪಯಣ ಸಾರುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಎಕರೆಗೆ ₹25000 ಪರಿಹಾರ ನೀಡಲಿ
ಯುವ ಸಮೂಹಕ್ಕೆ ಉತ್ತಮ ಸಂದೇಶಗಳು ಅಗತ್ಯ