ಲಂಚ ಮುಕ್ತ ಜಿಲ್ಲೆ ನನ್ನ ಗುರಿ, ಭ್ರಷ್ಟಚಾರ ಸಹಿಸಲ್ಲ: ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

KannadaprabhaNewsNetwork |  
Published : Oct 07, 2025, 01:02 AM IST
ಸಿಕೆಬಿ-3 ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ನಡೆದ 2025-26 ನೇ ಸಾಲಿನ ತ್ರೈ-ಮಾಸಿಕ ಕೆ ಡಿ ಪಿ ಸಭೆಯಲ್ಲಿ ಸಚಿವ ಡಾ. ಎಂ.ಸಿ.ಸುಧಾಕರ್ ಮಾತನಾಡಿದರು | Kannada Prabha

ಸಾರಾಂಶ

ಅಕ್ಟೋಬರ್ 27ಕ್ಕೆ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣದ ಕಾಮಗಾರಿಗೆ ಶಿಡ್ಲಘಟ್ಟ ತಾಲೂಕಿನಲ್ಲಿ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಲು ಆಗಮಿಸುತ್ತಾರೆ. ಈ ಕಾಮಗಾರಿಯ ಜೊತೆಗೆ ವಿವಿಧ ಕಾಮಗಾರಿಗಳಿಗೂ ಚಾಲನೆ ನೀಡಲು ಮಾಹಿತಿಯನ್ನು ನೀಡುವ ಜೊತೆಗೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

‘ಲಂಚ ಸ್ವೀಕಾರ ಮಾಡುವುದಿಲ್ಲ’ ಎಂಬ ಫಲಕಗಳನ್ನು ಜಿಲ್ಲೆಯ ಎಲ್ಲಾ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಅಳವಡಿಸುವಂತೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ 2025- 26ನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ 22 ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸುವ ವೇಳೆ ಮಾತನಾಡಿ, ಚಿಂತಾಮಣಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ನೋಂದಣಾಧಿಕಾರಿಗಳು ತಮ್ಮ ಕಚೇರಿಯಲ್ಲಿ ‘ಈ ಕಚೇರಿಯಲ್ಲಿ ಲಂಚ ಸ್ವೀಕಾರ ಮಾಡುವುದಿಲ್ಲ’ ಎಂದು ಫಲಕವನ್ನು ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿದ್ದರು. ಆದರೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯು ಆ ಫಲಕವನ್ನು ತೆರವುಗೊಳಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಆದ್ದರಿಂದ ಜಿಲ್ಲೆಯ ಎಲ್ಲಾ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಈ ರೀತಿಯ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಯಾವುದೇ ಅಧಿಕಾರಿ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ, ಅನಗತ್ಯ ವಿಳಂಬ ಮಾಡಿ ಸರ್ಕಾರಿ ಕೆಲಸ ಮಾಡಿಕೊಡಲು ತೊಂದರೆ ಕೊಟ್ಟರೆ ಸಾರ್ವಜನಿಕರು ಸಂಪರ್ಕಿಸಲು ಒಂದು ದೂರವಾಣಿ ಸಂಖ್ಯೆಯನ್ನು ಫಲಕದಲ್ಲಿ ನಮೂದಿಸಲು ಕ್ರಮ ವಹಿಸಿ ಎಂದು ಜಿಲ್ಲಾ ನೋಂದಣಾಧಿಕಾರಿಗೆ ಸೂಚನೆ ನೀಡಿದರು,

ಈ ಕುರಿತು ಜಿಲ್ಲಾಧಿಕಾರಿಗಳು ನಿಗಾ ವಹಿಸಬೇಕು. ಜಿಲ್ಲೆಯ ಯಾವುದೇ ಇಲಾಖೆಗಳ, ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಭ್ರಷ್ಟಾಚಾರ ಮುಕ್ತ ಜಿಲ್ಲೆ ನನ್ನ ಕನಸು ಮತ್ತು ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.

ಈ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 8ರಷ್ಟು ಮಳೆ ಪ್ರಮಾಣ ಹೆಚ್ಚಾಗಿದ್ದರೂ ಸಹ ಜಿಲ್ಲೆಯ ಬಹುತೇಕ ಕೆರೆಗಳಿಗೆ ನೀರು ಬಂದಿಲ್ಲ. ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳ ಕೆರೆಗಳನ್ನು ಹೊರತುಪಡಿಸಿದರೆ ಇತರೆ ತಾಲೂಕುಗಳ ಬಹುತೇಕ ಕೆರೆಗಳಲ್ಲಿ ಶೇ 30ರಷ್ಟು ನೀರು ಸಂಗ್ರಹವಾಗಿಲ್ಲ. ಆದ್ದರಿಂದ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು. ಕೃಷಿ ಬೆಳೆಗಳ ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ಶೇ. 90ರಷ್ಟು ಆಗಿದ್ದು, ಜಿಲ್ಲಾಡಳಿತ ರೈತರಿಗೆ ರಸಗೊಬ್ಬರ ಸಮಸ್ಯೆ ಎದುರಾಗದಂತೆ ಪೂರೈಕೆ ಮಾಡಿದೆ. ಮುಂದಿನ ದಿನಗಳಲ್ಲೂ ಸಹ ರಸಗೊಬ್ಬರ ಪೂರೈಕೆಯಲ್ಲಿ ವತ್ಯಯವಾಗದಂತೆ ಕ್ರಮವಹಿಸಲು ಸೂಚನೆ ನೀಡಿದರು.

ಅಕ್ಟೋಬರ್ 27ಕ್ಕೆ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣದ ಕಾಮಗಾರಿಗೆ ಶಿಡ್ಲಘಟ್ಟ ತಾಲೂಕಿನಲ್ಲಿ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಲು ಆಗಮಿಸುತ್ತಾರೆ. ಈ ಕಾಮಗಾರಿಯ ಜೊತೆಗೆ ವಿವಿಧ ಕಾಮಗಾರಿಗಳಿಗೂ ಚಾಲನೆ ನೀಡಲು ಮಾಹಿತಿಯನ್ನು ನೀಡುವ ಜೊತೆಗೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ರೇಷ್ಮೆ ಗೂಡನ್ನು ಗುಣಮಟ್ಟ ಆಧರಿಸಿ ಗ್ರೇಡಿಂಗ್ ಮಾಡಿ ರೈತರಿಂದ ಖರೀದಿಸುವ ವ್ಯವಸ್ಥೆ ಶಿಡ್ಲಘಟ್ಟ ಮಾರುಕಟ್ಟೆಯಲ್ಲಿ ಒಂದೆರಡು ತಿಂಗಳುಗಳಲ್ಲಿ ಆರಂಭವಾಗಬೇಕು. ರೀಲರ್ಸ್ ಗಳೊಂದಿಗೆ ಸಭೆ ನಡೆಸಿ ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹರಿಸಬೇಕು, ಒಟ್ಟಾರೆ ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕೈಗೊಳ್ಳಲು ರೇಷ್ಮೆ ಇಲಾಖೆ ಉಪ ನಿರ್ದೇಶಕರು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ಮಾಡಿ:

ಶಿಡ್ಲಘಟ್ಟ ತಾಲೂಕಿನಲ್ಲಿ ಒಂದೇ ಕುಟುಂಬದ ಸದಸ್ಯರು 60 ಎಕರೆಗೂ ಹೆಚ್ಚು ಜಾಗದಲ್ಲಿ ಅಕ್ರಮ ಗಣಿಗಾರಿಕೆ ಮಾಡಿಕೊಂಡು ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ ದೂರು ಬಂದಿದೆ. ಈ ಕುರಿತು ತನಿಖೆ ಮಾಡಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು.

ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ಬಿ. ಎನ್. ರವಿ ಕುಮಾರ್, ಎಂಎಲ್ ಸಿ ಎಂ. ಎಲ್. ಅನಿಲ್ ಕುಮಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗ್ಡೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್, ಜಿಲ್ಲಾಧಿಕಾರಿ ಪಿ .ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಉಪ ಅರಣ್ಯ ಸುರಕ್ಷಣಾಧಿಕಾರಿ ಗಿರೀಶ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ