ಹದಗೆಟ್ಟ ವ್ಯವಸ್ಥೆ; ಹತೋಟಿ ಇರದ ಔರಾದ್ ಪಪಂ!

KannadaprabhaNewsNetwork |  
Published : Aug 08, 2025, 01:00 AM IST
ಚಿತ್ರ 7ಬಿಡಿಆರ್59 | Kannada Prabha

ಸಾರಾಂಶ

ರಸ್ತೆ ತುಂಬೆಲ್ಲಾ ತ್ಯಾಜ್ಯ, ಚರಂಡಿ ನೀರು ರಸ್ತೆ ತುಂಬೆಲ್ಲಾ ಆವರಿಸಿಕೊಂಡು ಮೂಗು ಮುಚ್ಚುವ ದುರ್ನಾತ ವಾಸನೆ, ಸತತ ಮಳೆಯಿಂದಾಗಿ ತುಂಬಿಕೊಂಡ ಚರಂಡಿಗಳಿಂದಾಗಿ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಜನಜೀವನದ ಅಸ್ತವ್ಯಸ್ತಗೊಳಿಸುತ್ತಿರುವ ಘಟನೆ ನಿರಂತರವಾಗಿ ಪಟ್ಟಣದಲ್ಲಿ ನಡೆಯುತ್ತಿದೆ.

ಅನೀಲಕುಮಾರ ದೇಶ್‌ಮುಖ್‌

ಕನ್ನಡಪ್ರಭ ವಾರ್ತೆ, ಔರಾದ್

ರಸ್ತೆ ತುಂಬೆಲ್ಲಾ ತ್ಯಾಜ್ಯ, ಚರಂಡಿ ನೀರು ರಸ್ತೆ ತುಂಬೆಲ್ಲಾ ಆವರಿಸಿಕೊಂಡು ಮೂಗು ಮುಚ್ಚುವ ದುರ್ನಾತ ವಾಸನೆ, ಸತತ ಮಳೆಯಿಂದಾಗಿ ತುಂಬಿಕೊಂಡ ಚರಂಡಿಗಳಿಂದಾಗಿ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಜನಜೀವನದ ಅಸ್ತವ್ಯಸ್ತಗೊಳಿಸುತ್ತಿರುವ ಘಟನೆ ನಿರಂತರವಾಗಿ ಪಟ್ಟಣದಲ್ಲಿ ನಡೆಯುತ್ತಿದೆ.

ಸಿಬ್ಬಂದಿಗಳ ಕೊರತೆಯಿಂದ ಪಟ್ಟಣದ ಸ್ವಚ್ಛತೆ ನಿರ್ವಹಣೆ ಮಾಡಲಾಗದೆ ಕಳೇದ ಎರಡು ತಿಂಗಳಿಂದ ಪಟ್ಟಣ ಪಂಚಾಯತಿ ಆಡಳಿತ ವ್ಯವಸ್ಥೆ ಹತೋಟಿ ಕಳೆದುಕೊಂಡು ಜನ ಸಾಮಾನ್ಯರನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ. ಸಾರ್ವಜನಿಕ ಮೂಲ ಸೌಲಭ್ಯಗಳ ಅನುಕೂಲಕ್ಕೆ ಸ್ಥಾಪಿತವಾದ ಪೌರಾಡಳಿತ ಇಲಾಖೆಯ ಪಟ್ಟಣ ಪಂಚಾಯಿತಿ ಕಚೇರಿ ನಾಮ ಕೇ ವಾಸ್ತೆ ಎಂಬಂತಾಗಿ ಜನರ ಪಾಲಿಗೆ ಅಪ್ರಯೋಜಕವಾಗಿ ಮಾರ್ಪಟ್ಟಿದೆ. ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ವಾಹನಗಳಿಗೆ ಚಾಲಕರಿಲ್ಲ, ಜನರು ರಸ್ತೆಗೆ ತ್ಯಾಜ್ಯ ತಂದು ಒಗೆಯುತ್ತಿದ್ದಾರೆ. ವಿಲೇವಾರಿ ಮಾಡುವ ಹೊರ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ವರ್ಷದಿಂದ ಸಂಬಳ ಸಿಗ್ತಿಲ್ಲ, ಹೀಗಾಗಿ ಅವರು ಕೆಲಸ ಮಾಡ್ತಿಲ್ಲ. ಇದಕ್ಕೆ ಅಂತ ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಗಳ ಹುದ್ದೆಗಳು ಖಾಲಿಯಾಗಿವೆ.

ಇರುವ ಒಬ್ಬ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಎನಾದ್ರು ಮಾಡಿ ಸ್ವಚ್ಛತಾ ಕಾರ್ಯ ಮಾಡಿದ್ರೆ ಅದರ ಅನುದಾನದ ವೆಚ್ಚ ಪಾವತಿ ಮಾಡಲು ಮುಖ್ಯ ಲೆಕ್ಕಾಧಿಕಾರಿ ಹುದ್ದೆ ಖಾಲಿಯಾಗಿರುವುದೇ ಈ ಎಲ್ಲಾ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

ಅನುದಾನ ಇದ್ದರೂ ಗಗನ ಕುಸುಮ:

ಸರ್ಕಾರದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಹರಿದು ಬಂದ್ರು ಅದನ್ನು ಅನುಷ್ಠಾನ ಮಾಡುವ ಹಂತದಲ್ಲಿ ಲೇಕ್ಕಾಧಿಕಾರಿಯೆ ಇಲ್ಲದಿರುವುದರಿಂದ ಪಟ್ಟಣದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗದಂತ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ 11 ಅಧಿಕಾರಿಗಳ ಹುದ್ದೆಗಳು ಸೇರಿಂದತೆ ಒಟ್ಟು 34 ಹುದ್ದೆಗಳು ಖಾಲಿಯಾಗಿವೆ. ಅಂದಾಜು 30 ಕ್ಕೂ ಅಧಿಕ ಸ್ವಚ್ಚತಾ ಕರ್ಮಿಗಳು ಹೊರ ಗುತ್ತಿಗೆಯಲ್ಲಿ ಕೆಲಸ ಮಾಡ್ತಿದ್ದಾರೆ ಅವರಿಗೆ ಸಕಾಲಕ್ಕೆ ಸಂಬಳ ನೀಡಲಾಗ್ತಿಲ್ಲ. ಕರ ವಸೂಲಿಗಾರ ಇಲ್ಲದಕ್ಕೆ ಪಂಚಾಯತಿಗೆ ಬರುವ ಆದಾಯ ಕೂಡ ನಿಂತಿರುವುದು ನಿಜಕ್ಕೂ ಇದೊಂದು ಅಸಮರ್ಥ ಪಂಚಾಯತಿಯಂತಿದೆ ಎಂಬುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

----

ಸಿಬ್ಬಂದಿಗಳ ಕೊರತೆ ಕುರಿತು ನಗರಾಭಿವೃದ್ಧಿ ಯೋಜನಾಧಿಕಾರಿಗಳ ಗಮನಕ್ಕೆ ತರಲಾಗಿದೆ ಒಂದೆರಡು ದಿನದಲ್ಲಿ ನಮ್ಮ ಪಂಚಾಯತಿಗೆ ಅಗತ್ಯ ಸಿಬ್ಬಂದಿಗಳ ನೇಮಕ ಮಾಡ ಬಹುದು. ಪ್ರಮುಖವಾಗಿ ಲೆಕ್ಕಾಧಿಕಾರಿಯೊಬ್ಬರನ್ನಾದರೂ ನೀಡಿದರೆ ಎಲ್ಲಾ ಕೆಲಸಗಳು ಹೇಗಾದ್ರು ಮಾಡಿಕೊಳ್ಳಬಹುದು. ಈ ನಿಟ್ಟನಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದೇನೆ.

- ಸ್ವಾಮಿದಾಸ್, ಮುಖ್ಯಾಧಿಕಾರಿ ಪ.ಪಂ ಔರಾದ್

--

ಜನ ನಮಗೆ ರಸ್ತೆ ಮೇಲೆ ಕಂಡ್ರೆ ಬಾಯಿಗೆ ಬಂದಂಗೆ ಮಾತಾಡ್ತಾ ಇದಾರೆ. ನಾವು ಪ್ರತಿನಿಧಿ ಅಂತ ಹೇಳಿಕೊಳ್ಳೊಕೂ ನಮಗೆ ನಾಚಿಕೆಯಾಗ್ತಾ ಇದೆ. ವಾರ್ಡ್‌ನಲ್ಲಿ ಗಬ್ಬು ನಾರುವ ವಾಸನೆಯ ದರ್ನಾತ ಸ್ಥಿತಿಯಂತೆ ಉಂಟಾದ ಸಮಸ್ಯೆಗಳನ್ನು ನಿವಾರಣೆ ಮಾಡಲಾಗದೆ ಅಸಹಾಯಕರಂತೆ ನಿಲ್ಲುವಂಥ ಸ್ಥಿತಿ ನಮ್ಮದಾಗಿದೆ.

- ದಯಾನಂದ ಘೂಳೆ ಸದಸ್ಯರು ಪ.ಪಂ ಔರಾದ್‌

------

ಸಿಬ್ಬಂದಿಗಳ ಕೊರತೆ ಒಂದೆಡೆಯಾದ್ರೆ ಪಂಚಾಯತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕೆಲಸ ಮಾಡುವ 30 ಜನ ಪೌರಕಾರ್ಮಿಕರಿಗೆ ಒಂದು ವರ್ಷದಿಂದ ನಯಾ ಪೈಸಾ ನೀಡಿಲ್ಲ. ಆ ಕುಟುಂಬಗಳು ಬದುಕುವುದಾದರೂ ಹೇಗೆ? ಸುಮ್ಮನೆ ಕೆಲಸ ಮಾಡು ಅಂದ್ರೆ ಯಾರು ಮಾಡ್ತಾರೆ. ಅವರ ಸೇವೆ ಖಾಯಂ ಮಾಡಿದ್ರೆ ಈ ಎಲ್ಲಾ ಸಮಸ್ಯೆಗಳಿಗೆ ಒಂದಿಷ್ಟು ಬ್ರೇಕ್ ಬೀಳಬಹುದು.

- ರಾಮ ನರೋಟೆ, ಸ್ಥಳೀಯ ಮುಖಂಡ

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು