ರೋಣದಲ್ಲಿ ಕರಿ ಹರಿದ ಕಂದು ಬಣ್ಣದ ಹೋರಿ

KannadaprabhaNewsNetwork |  
Published : Jun 30, 2026, 02:30 AM IST
29 ರೋಣ 4. ರೋಣ ಪಟ್ಟಣದಲ್ಲಿ ಕಾರ ಹುಣ್ಣಿಮೆ ಅಂಗವಾಗಿ  ಕರಿ ಹರಿಯ ಸ್ಪರ್ಧೆ ಜರುಗಿತು.  | Kannada Prabha

ಸಾರಾಂಶ

ಕರಿ ಹರಿಯುವ ಸ್ಪರ್ಧೆಯಲ್ಲಿ ಪಟ್ಟಣದ 10ಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿದ್ದವು. ಹೋರಿಗಳನ್ನು ಓಡಿಸುವ ಸ್ಪರ್ಧೆ ಕಣ್ಮನ ಸೆಳೆಯಿತು.

ರೋಣ: ಕಾರ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಪೋತದಾರ ರಾಜ ಅಜ್ಜನ ಕಟ್ಟೆಯ ಬಳಿ ಮುಖ್ಯ ರಸ್ತೆಯ ಅಗಸಿ ಬಾಗಿಲಿನಲ್ಲಿ ಸೋಮವಾರ ಸಾಯಂಕಾಲ ಏರ್ಪಡಿಸಿದ್ದ ಕರಿ ಹರಿಯುವ ಸ್ಪರ್ಧೆಯಲ್ಲಿ ರೈತ ವೀರಪ್ಪ ಪಲ್ಲೇದ ಎಂಬುವರ ಕಂದು ಬಣ್ಣದ ಹೋರಿ ಜಯಶಾಲಿಯಾಯಿತು.

ಇದರಿಂದಾಗಿ ಈ ಬಾರಿ ಮುಂಗಾರು ಹಂಗಾಮಿನ ಕಂದು ಬಣ್ಣದ ಪ್ರಮುಖ ಬೆಳೆಗಳಾದ ಹೆಸರು, ಶೇಂಗಾ, ತೊಗರಿ, ಅಲಸಂದೆ, ಕಡಲೆ ಸೇರಿದಂತೆ ಮುಂತಾದ ಬೆಳೆಗಳ ಫಸಲು ಹುಲುಸಾಗಿ ಬರುತ್ತವೆ ಎಂಬ ನಂಬಿಕೆ ರೈತರದ್ದಾಗಿದೆ.

ಕರಿ ಹರಿಯುವ ಸ್ಪರ್ದೆಯಲ್ಲಿ ಪಟ್ಟಣದ 10ಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿದ್ದವು. ಹೋರಿಗಳನ್ನು ಓಡಿಸುವ ಸ್ಪರ್ಧೆ ಕಣ್ಮನ ಸೆಳೆಯಿತು

ಪಟ್ಟಣದ ಗೌಡ್ರ ಓಣಿ, ಗಾಣಿಗೇರ ಓಣಿ, ಕಂಬಿಯವರ ಓಣಿ, ತುಂಬದವರ ಓಣಿ, ಕುರಬಗಲ್ಲಿ ಓಣಿ, ಶಿವಾನಂದ ನಗರ, ತಳವಾರ ಓಣಿ, ಶ್ರೀನಗರ, ಶಿವಪೇಟಿ, ಲಿಂಗನಗೌಡ್ರ ಓಣಿ, ಹಕಾರಿಯವರ ಓಣಿ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಿಂದ ಯುವಕರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಕರಿ ಹರಿಯುವ ಸ್ಪರ್ಧೆಯನ್ನು ಸಂಭ್ರಮಿಸಿದರು.

ಕಾರ ಹುಣ್ಣಿಮೆ: ಕರಿ ಹರಿದ ಬಿಳಿ ಎತ್ತು

ನರೇಗಲ್ಲ: ಗ್ರಾಮಸ್ಥರಲ್ಲಿ ರೋಮಾಂಚನ ಮೂಡಿಸಿದ್ದ ಕಾರಹುಣ್ಣಿಮೆಯ ಅತ್ಯಂತ ಸಾಹಸಮಯ ಕರಿ ಹರಿಯುವ ಸ್ಪರ್ಧೆ ಭರ್ಜರಿಯಾಗಿ ಜರುಗಿದ್ದು, ಕರಿಯನ್ನು ಶಿವಪುತ್ರಪ್ಪ ಒಳಕೋಟಿ ಅವರ ಎತ್ತು ಕರಿ ಹರಿದು ವೀರಾವೇಶ ಪ್ರದರ್ಶಿಸಿದ್ದು ಪಟ್ಟಣದ ಜನತೆಯ ಗಮನ ಸೆಳೆದಿದೆ.

ಮುಂಗಾರು ಮಳೆಯ ಮುನ್ನುಡಿಯಾಗಿ ನಡೆದ ಈ ಸಾಂಪ್ರದಾಯಿಕ ಸ್ಪರ್ಧೆಯಲ್ಲಿ ವಿಜೇತ ಎತ್ತನ್ನು ಕಣ್ತುಂಬಿಕೊಳ್ಳಲು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಜಮಾಯಿಸಿದ್ದರು.

ಸ್ಪರ್ಧೆ ಆರಂಭವಾಗುತ್ತಿದ್ದಂತೆ ಪ್ರತಿಯೊಂದು ಎತ್ತುಗಳು ಕರಿಯನ್ನು ಹರಿಯಲು ತೀವ್ರ ಪೈಪೋಟಿ ನಡೆಸಿದವು. ಈ ವೇಳೆ ಗ್ರಾಮದ ಹಿರಿಯ ರೈತ ಶಿವಪುತ್ರಪ್ಪ ಒಳಕೋಟಿ ಎತ್ತು, ಗಾಳಿಯ ವೇಗದಲ್ಲಿ ಧಾವಿಸಿ ಬಂದು ಭೋರ್ಗರೆಯುತ್ತಾ ಕರಿಯನ್ನು ಹರಿಯುವಲ್ಲಿ ಯಶಸ್ವಿಯಾಯಿತು.

ವಿಜೇತ ಎತ್ತಿಗೆ ರಾಜಮರ್ಯಾದೆ:ಕರಿ ಹರಿದು ಸಾಹಸ ಮೆರೆದ ಎತ್ತಿಗೆ ಪಟ್ಟಣದ ಓಂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಶೋಕ ಬೇವಿನಕಟ್ಟಿ ಹೂಮಾಲೆ ಹಾಕಿ ಕಾಲಿಗೆರಗಿ ನಮಸ್ಕರಿಸಿ ಎತ್ತಿನ ಮಾಲೀಕನಿಗೆ ಪ್ರತಿವಷದಂತೆ ಈ ವರ್ಷವೂ ಸನ್ಮಾನಿಸಿ ₹5001 ನಗದು ಬಹುಮಾನ ನೀಡಿದರು. ಇದೇ ಸಂದರ್ಭದಲ್ಲಿ ಶೇಖರಗೌಡ ಪಾಟೀಲ ₹1001 ನಗದು ಬಹುಮಾನ ನೀಡಿದರು. ಎತ್ತಿನ ಹಣೆಗೆ ತಿಲಕವಿಟ್ಟು, ಹೂವಿನ ಹಾರ ಹಾಕಿ, ಆರತಿ ಎತ್ತಿ ಗೌರವಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಎತ್ತಿನ ಭವ್ಯ ಮೆರವಣಿಗೆ ನಡೆಸಿ, ಹೋಳಿಗೆ- ಕಡಬಿನ ನೈವೇದ್ಯವನ್ನು ಉಣಿಸಿ ಸತ್ಕರಿಸಲಾಯಿತು.

ಈ ವೇಳೆ ಪಟ್ಟಣದ ಮುಖಂಡರಾದ ಬಾಳಪ್ಪ ಸೋಮಗೊಂಡ, ಸೋಮು ಲಕ್ಕನಗೌಡ್ರ, ಬಸವರಾಜ ಮಾಳವಾಡ, ಶರಣಪ್ಪ ಹಂಜಿ, ಶರಣಪ್ಪ ಶೀಕನಿ, ವೀರಣ್ಣ ಗುಜಮಾಗಡಿ, ಶರಣಪ್ಪ ಕಲಾಲಬಂಡಿ, ಬಸವರಾಜ ಕಲಾಲಬಂಡಿ, ರಮೇಶ ಹತ್ತಿಕಟಗಿ, ಸಂಜೀವಕುಮಾರ ಕುಲಕರ್ಣಿ, ಶರಣಪ್ಪ ಧರ್ಮಾಯತ, ಮುತ್ತಣ್ಣ ಗೆದಗೇರಿ, ಫಕೀರಗೌಡ ಪಾಯಪ್ಪಗೌಡ್ರ, ಪರಪ್ಪ ಬೆಡಗಲ್ಲ, ವಿರುಪಾಪ್ಷ ಪಿಡಗೊಂಡ, ನೀಲಪ್ಪ ತೊಂಡಿಹಾಳ, ಅಶೋಕ ಧರಣೆಪ್ಪಗೌಡ್ರ, ಶಶಿಧರ ಓದಸೂಮಠ, ಅಶೊಕ ಮಧರಣೆಪ್ಪಗೌಡ್ರ, ಫಕೀರಸಾಬ ರೇವಡಿಗಾರ, ಸದ್ದಾಂ ನಶೇಖಾನ, ಶೇಖಪ್ಪ ಜುಟ್ಲ ಸೇರಿದಂತೆ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿಯತ್ತ ದೃಷ್ಟಿ ನೆಟ್ಟರೆ ಯಶಸ್ಸು ದೂರವಿಲ್ಲ: ಡಾ.ಭೀಮೇಶ ಯರಡೋಣಿ
ಶಿಕ್ಷಣದಿಂದ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ: ನ್ಯಾ. ತೇಜಸ್ವಿನಿ ಸೊಗಲದ