14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಉಲ್ಲಂಘನೆ ಮಾತ್ರವಲ್ಲ ಅದೊಂದು ಅತ್ಯಂತ ವಿಷಾದದ ಸಂಗತಿಯೂ ಹೌದು.
ಕನ್ನಡಪ್ರಭ ವಾರ್ತೆ ದಾಂಡೇಲಿ
14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಉಲ್ಲಂಘನೆ ಮಾತ್ರವಲ್ಲ ಅದೊಂದು ಅತ್ಯಂತ ವಿಷಾದದ ಸಂಗತಿಯೂ ಹೌದು. ರಾಷ್ಟ್ರದ ಭವ್ಯ ಪ್ರಜೆಗಳಾಗಬೇಕಾದ ಮಕ್ಕಳನ್ನು ಕಾರ್ಮಿಕರನ್ನಾಗಿ ಪರಿವರ್ತಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಬಾಲ ಕಾರ್ಮಿಕ ಪದ್ಧತಿಯು ಕೇವಲ ಕಾನೂನು ಉಲ್ಲಂಘನೆ ಮಾತ್ರವಲ್ಲ ಬದಲಾಗಿ ಅದೊಂದು ಮಕ್ಕಳ ಹಕ್ಕುಗಳ ಹರಣ. ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ದಾಂಡೇಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ನ್ಯಾ.ತೇಜಸ್ವಿನಿ ಸೊಗಲದ ಕರೆ ನೀಡಿದರು.ದಾಂಡೇಲಿಯ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ನಗರಸಭೆ, ಶಿಕ್ಷಣ ಇಲಾಖೆ ಮತ್ತು ಸ.ಪ.ಪೂ ಮಹಾವಿದ್ಯಾಲಯ ಹಳೆ ದಾಂಡೇಲಿ ಇವರ ಸಂಯುಕ್ತ ಆಶ್ರಯದಡಿ ಸ.ಪ.ಪೂ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣ ಒಂದೇ ಪ್ರಮುಖ ಅಸ್ತ್ರವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಿಯಾದರೂ 14 ವರ್ಷದೊಳಗಿನ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುವುದು ಕಂಡು ಬಂದಲ್ಲಿ ತಕ್ಷಣವೇ ಶಿಕ್ಷಣ ಇಲಾಖೆಗೆ ಇಲ್ಲವೇ ಕಾರ್ಮಿಕ ಇಲಾಖೆಗೆ ಮಾಹಿತಿಯನ್ನು ನೀಡಿ ಅಂತಹ ಮಕ್ಕಳನ್ನು ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಸಮಾಜವು ಸಂಬಂಧ ಪಟ್ಟ ಇಲಾಖೆಗಳ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಶಿಕ್ಷಣದಿಂದ ಮಾತ್ರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದ್ದು, ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಬುಡಸಮೇತ ಕಿತ್ತೊಗೆಯಲು ಕಂಕಣಬದ್ಧರಾಗಬೇಕೆಂದರು.
ಪಿಎಸ್ಐ ಕಿರಣ್ ಪಾಟೀಲ್ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದರ ಜೊತೆಗೆ ಅವರ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯ ಮೇಲೆಯೂ ತೀವ್ರ ಪರಿಣಾಮ ಬೀರುತ್ತದೆ. ನಮ್ಮ ಸಂವಿಧಾನವು ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿದೆ ಎಂದರು.ಸಹಾಯಕ ಸರಕಾರಿ ಅಭಿಯೋಜಕ ರಮೇಶ ಎಂ.ಬಂಕಾಪುರ, ಹಿರಿಯ ನ್ಯಾಯವಾದಿ ಎಂ.ಸಿ.ಹೆಗಡೆ, ಕಾರ್ಮಿಕ ನಿರೀಕ್ಷಕ ಚೇತನಕುಮಾರ್ ಎಸ್.ಹುಕುಮನವರ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ನಾಗರೇಖಾ ಗಾಂವಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಸಿಕಂದರ್ ಮತ್ತು ಆಶಾ ದೇಶಭಂಡಾರಿ, ಸಿ.ಆರ್.ಪಿಗಳಾದ ಲಲಿತಾ, ಬೀಬಿ ಹಾಜೀರಾ ಮತ್ತು ಶ್ರೀದೇವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ಪ್ರೌಢಶಾಲೆಯ ಶಿಕ್ಷಕ ವೃಂದವರು, ನ್ಯಾಯವಾದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಚೇತನಕುಮಾರ್ ಎಸ್.ಹುಕುಮನವರ ಸ್ವಾಗತಿಸಿ, ಉಪನ್ಯಾಸಕಿ ಅನಿತಾ ಕುಮಾರಿ ನಿರೂಪಿಸಿದರು.