ಕನ್ನಡಪ್ರಭ ವಾರ್ತೆ ಗೋಕರ್ಣ

ಗೋಕರ್ಣದಲ್ಲಿ ಸ್ವಚ್ಛತೆ ಕಾಪಾಡಿ, ನೀರಿನ ವ್ಯವಸ್ಥಿತ ಸರಬರಾಜು ಮಾಡುವಂತೆ ಮತ್ತು ಸಮರ್ಪಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಸೂಚಿಸಿದರು.

ಸೋಮವಾರ ಇಲ್ಲಿಗೆ ಭೇಟಿ ನೀಡಿ ಮಹಾಬಲೇಶ್ವರ ಮಂದಿರದ ತೀರ್ಥ ಸೋಮಸೂತ್ರದ ಮೂಲಕ ಸಂಗಮ ಸೇರುವ ಸ್ಥಳ ಹಾಗೂ ರಸ್ತೆಗೆ ಚರಂಡಿ ನೀರು ತುಂಬುವ ಮತ್ತಿತರ ಕಡೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.

ಕಳೆದ ಎರಡು ದಿನಗಳ ಹಿಂದೆ ಸಂಗಮ ನಾಲಾದ ನೀರು ಸಮುದ್ರ ಸೇರದ ಪರಿಣಾಮ ಮಹಾಬಲೇಶ್ವರ ದೇವಾಲಯದ ಸೋಮಸೂತ್ರದ ನೀರು ಮುಂದೆ ಹೋಗದೆ ನಿಂತ ಪರಿಣಾಮ ಗರ್ಭಗುಡಿಯಲ್ಲಿ ನೀರು ತುಂಬಿ ದೇವರ ದರ್ಶನ ಹಾಗೂ ಮಧ್ಯಾಹ್ನ ಮಹಾಪೂಜೆಗೆ ತೊಡಕಾಗಿತ್ತು. ಈ ಬಗ್ಗೆ ಪತ್ರಿಕೆ ಸವಿವರ ಪತ್ರಿಕೆ ವರದಿ ಪ್ರಕಟಿಸಿತ್ತು. ಇದರ ಪರಿಣಾಮ ಖುದ್ದು ಜಿಪಂ ಸಿಇಓ ತಮ್ಮ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದರು.

ಮಂದಿರದ ಸೋಮಸೂತ್ರ ನಾಲಾ ಸಂಗಮ ಸೇರುವಲ್ಲಿ ಹೂಳು ತುಂಬಿರುವುದು ಹಾಗೂ ಸಂಗಮ ನಾಲಾದದ ಈ ಭಾಗದಲ್ಲಿ ಎತ್ತರವಾಗಿರುವುದರಿಂದ ಸೋಮಸೂತ್ರ ನೀರು ಮುಂದೆ ಹೋಗದಿರುವುದರ ಕುರಿತು ಮಾಹಿತಿ ಪಡೆದರು. ಅಲ್ಲದೇ ದೇವಾಲಯದ ಗರ್ಭಗುಡಿಗೆ ಹೊರಗಿನ ಹೊಲಸು ನೀರು ಬರದಂತೆ ದೇವಾಲಯದವರು ಗೇಟ್ ಅಳವಡಿಸಿದ್ದು, ಇದರಿಂದ ನೀರು ತುಂಬಿದಾಗ ಹೊರಗಿನ ನೀರು ಹೊರಗೆ ಹಾಗೂ ದೇವಾಲಯದ ಆವಾರದ ನೀರು ಒಳಗೆ ನಿಲ್ಲುತ್ತದೆ, ಕೊಳಚೆ ನೀರು ಸೇರುವುದಿಲ್ಲ ಎಂಬುದನ್ನ ವಿವರಿಸಲಾಯಿತು.


ಸಂಗಮ ಹೂಳು ತೆಗೆಯುವುದು ಹಾಗೂ ಸೋಮಸೂತ್ರದ ನೀರು ಹೆಚ್ಚಾದಾಗ ನಿಗದಿತ ಸ್ಥಳ ಗುರುತಿಸಿ ಪಂಪ್ ಮೂಲಕ ಖಾಲಿ ಮಾಡುವ ಬಗ್ಗೆ ಮಂದಿರದ ಆಡಳಿತದವರೊಂದಿಗೆ ಚರ್ಚಿಸಿ, ಮುಂದಿನ ದಿನದಲ್ಲಿ ತಜ್ಞರ ಅಭಿಪ್ರಾಯ ಪಡೆದು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯಾದ ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ಸದಸ್ಯರಾದ ಮಹೇಶ ಹಿರೇಗಂಗೆ, ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ, ಜಿಪಂ ವಿವಿಧ ವಿಭಾಗದ ಹಿರಿಯ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ.ಎ. ಪಟಗಾರ, ಕಾರ್ಯದರ್ಶಿ ಮಂಜುನಾಥ, ಪಿ.ಐ. ಶ್ರೀಧರ ಎಸ್.ಆರ್., ಪಂಚಾಯತ ಸಿಬ್ಬಂದಿ, ಮಂದಿರದ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.ಉಳಿದೆಡೆ ಭೇಟಿ:

ಮಹಾಬಲೇಶ್ವರ ದೇವಾಲಯದ ಪಶ್ಚಿಮ ದ್ವಾರದಿಂದ ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ಚರಂಡಿ ಮುಚ್ಚಿದ ಪರಿಣಾಮ ಸಂಪೂರ್ಣ ಜಲಾವೃತಗೊಳುತ್ತಿರುವ ಬಗ್ಗೆ ಪರೀಶಿಲಿಸಿದ ಸಿಇಓ ತಕ್ಷಣ ಸರಿಪಡಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಚ್ಛತಾ ಸಿಬ್ಬಂದಿ ಮೂಲಕ ಚರಂಡಿ ಬಿಡಿಸಿಕೊಡಲಾಯಿತು. ಅಂಗಡಿಯವರು ಚರಂಡಿ ಮುಚ್ಚಿರುವುದನ್ನ ತೆರವುಗೊಳಿಸಲು ಸೂಚಿಸಿ, ದೇವಾಲಯದಿಂದ ಸಂಗಮ ನಾಲಾದವರೆಗೆ ಚರಂಡಿ ಬಿಡಿಸಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದರು.

ಇಲ್ಲಿನ ಮುಖ್ಯ ಕಡಲತೀರದ ಪಾರ್ಕ್‌ ಮುಂಭಾಗದಲ್ಲಿ ಹಾಗೂ ಸಂಗಮ ನಾಲಾದ ರಾಮತೀರ್ಥಕ್ಕೆ ತೆರಳುವ ಬಳಿ ಹಲವು ದಿನಗಳಿಂದ ಕಸದ ರಾಶಿ ಬಿದ್ದು, ಗಬ್ಬು ನಾರುತ್ತಿತ್ತು. ಯಾವಾಗ ದೇವಾಲಯದ ಹತ್ತಿರ ಅಧಿಕಾರಿ ಬಂದರು, ತಕ್ಷಣ ಕಸದ ವಾಹನವನ್ನ ತರಾತುರಿಯಲ್ಲಿ ಗ್ರಾಪಂಯವರು ತಂದು ಕಸ ತುಂಬಿ ಸ್ವಚ್ಛಗೊಳಿಸಿದರು. ಅಲ್ಲದೇ ಸ್ವಚ್ಛತೆ ತಿಳುವಳಿಕೆಯ ಹಾಡು ಹಾಕಿಕೊಂಡು ತಾವು ನಿಗಾ ಇಟ್ಟಿದ್ದೇವೆ ಎಂದು ತೋರಿಸಿದರು. ಆದರೆ ಇಲ್ಲಿನ ತ್ಯಾಜ್ಯದ ರಾಶಿ ಬಗ್ಗೆ ಪೋಟೋ ಸಹಿತ ಸ್ಥಳೀಯರು ಅಧಿಕಾರಿಗೆ ಮೊದಲೇ ಮಾಹಿತಿ ನೀಡಿದ್ದರು.

ಕಸ ಎಸೆಯುವವರ ಬಗ್ಗೆ ನಿಗಾ ಇಡಲು ಕ್ಯಾಮರಾ ಅಳವಡಿಸಬೇಕು. ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ತಿಳಿಸಿ ಮೊದಲ ಹಂತದಲ್ಲಿ ಪೊಲೀಸ್ ಇಲಾಖೆ ನೆರವಿನೊಂದಿಗೆ ಕಾರ್ಯಕೈಗೊಳ್ಳಿ ಎಂದರು.

ಚರಂಡಿ ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನಿರಂತರ ನಿಗಾ ಇಡುವಂತೆ, ರಸ್ತೆ ಆಕ್ರಮಿಸಿದ ಅಂಗಡಿ ಮುಂಗಟ್ಟನ್ನ ತೆರವುಗೊಳಿಸುವಂತೆ ಪಿಡಿಒಗೆ ಸೂಚನೆ ನೀಡಿದರು.