ಕಾಂಗ್ರೆಸ್ ನಡೆ, ಮತ ರಕ್ಷಣೆ ಕಡೆ ಜಾಗೃತಿ ಸಮಾವೇಶಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಹಳಿಯಾಳ

ಕಾಂಗ್ರೆಸಿನ ಸಾಂಪ್ರದಾಯಿಕ ಮತದಾರರಾದ ಬಡವರು, ರೈತರು, ಕೂಲಿ ಕಾರ್ಮಿಕರು ಮತ್ತು ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಚು ನಡೆಯುವ ಸಾಧ್ಯತೆಗಳಿರುವುದರಿಂದ ಬಿ.ಎಲ್.ಎಗಳು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಶಾಸಕ ಹಾಗೂ ಉತ್ತರ ಕನ್ನಡ ಜಿಲ್ಲಾ ಎಸ್.ಐ.ಆರ್ ಅಭಿಯಾನದ ಉಸ್ತುವಾರಿ ಭೀಮಣ್ಣ ನಾಯ್ಕ ಎಚ್ಚರಿಸಿದರು.

ಸೋಮವಾರ ಪಟ್ಟಣದ ಪುರಭವನದಲ್ಲಿ ಹಳಿಯಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಕಾಂಗ್ರೆಸ್ ನಡೆ, ಮತ ರಕ್ಷಣೆ ಕಡೆ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾರೂ ಕೂಡ ಎಸ್.ಐ.ಆರ್‌ನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ನೀವು ಸ್ವಲ್ಪ ಎಚ್ಚರ ತಪ್ಪಿದ್ದರೇ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಮಗೆ ಹಾನಿಯಾಗುವುದು ನಿಶ್ಚಿತ ಎಂಬುವುದನ್ನು ಮರೆಯಬೇಡಿ ಎಂದರು.

ನಮ್ಮ ಪಕ್ಷದ ಬಿಎಲ್‌ಎಗಳು ಮಂಗಳವಾರದಿಂದ ಪ್ರಾರಂಭವಾಗುವ ಎಸ್.ಐ.ಆರ್ ಅಭಿಯಾನದಲ್ಲಿ ತಪ್ಪದೇ ಭಾಗವಹಿಸಬೇಕು. ನಿಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಮನೆಗಳಿಗೂ ಭೇಟಿ ನೀಡಿ, ಪ್ರತಿ ಮತದಾರರು ಅರ್ಜಿ ಸಲ್ಲಿಸುವಾಗ ಸಹಾಯ ಮಾಡಬೇಕು, ಮಾಹಿತಿ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು. ಎಸ್.ಐ.ಆರ್ ದಲ್ಲಿ ಸರಿಯಾಗಿ ಮಾಹಿತಿಯನ್ನು ಒದಗಿಸದಿದ್ದರೇ ಪೌರತ್ವವೇ ರದ್ದಾಗಬಹುದು, ಸರ್ಕಾರಿ ಸೌಲಭ್ಯ ಸಿಗದೇ ಹೋಗಬಹುದು. ಹಾಗಾಗಿ ಪ್ರತಿಯೊಬ್ಬರೂ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ನಮ್ಮ ಪಕ್ಷದ ಬಿಎಲ್‌ಎಗಳು ಮತದಾರರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಆದಷ್ಟು ನಿಮ್ಮ ಸಮಯವನ್ನು ಎಸ್.ಐ.ಆರ್ ಗಾಗಿ ಕಾದಿರಿಸಿರಿ ಎಂದು ಮನವಿ ಮಾಡಿದರು.


ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ದೇಶದಲ್ಲಿನ ಚುನಾವಣಾ ಆಯೋಗವು ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದೂ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿ ಸಹಿ ಅಭಿಯಾನ ನಡೆಸಿತು. ಈ ಹೋರಾಟದ ಎರಡನೇ ಅಭಿಯಾನವೇ ಎಸ್.ಐ.ಆರ್ ಆಗಿದೆ ಎಂದರು. ಚುನಾವಣಾ ಆಯೋಗವು ಯಾವುದೇ ಪಕ್ಷಪಾತವಿಲ್ಲದೇ ಕಾರ್ಯನಿರ್ವಹಿಸಬೇಕು, ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದರು.

ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಎಸ್.ಐ.ಆರ್ ಕುರಿತು ಪಕ್ಷದ ಬಿಎಲ್‌ಎ ಹಾಗೂ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ತರಬೇತಿ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ. ಚೌಗಲೆ, ಕಾಂಗ್ರೆಸ್ ಮುಖಂಡ ಶಂರಕ ಬೆಳಗಾಂವಕರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲಾ ಬೃಗಾಂಜಾ ಇದ್ದರು.

ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭಾ ಉಪಾಧ್ಯಕ್ಷೆ ಸುವರ್ಣ ಮಾದರ, ಪ್ರಮುಖರಾದ ರವಿ ತೋರಣಗಟ್ಟಿ, ವಿಷ್ಣು ಮಿಶಾಳೆ, ಉಮೇಶ ಬೊಳಶೆಟ್ಟಿ, ಸಿಕಂದರ್ ಮುಜಾವರ, ಸುರೇಶ ಮಾನಗೆ, ಅರ್ಜುನ ಭೋವಿ, ರಾಜು ಮೇತ್ರಿ, ಮಾರುತಿ ಕಲಬಾವಿ, ಅಣ್ಣಪ್ಪ ವಡ್ಡರ, ಅನಿಲ್ ಫರ್ನಾಂಡೀಸ್, ರೋಹನ ಬೃಗಾಂಜಾ, ರಿಜ್ವಾನ್ ಕಿಲ್ಲೆದಾರ, ಸರಪರಾಜ್ ಬೇಪಾರಿ ಹಾಗೂ ಇತರರಿದ್ದರು. ಸತ್ಯಜಿತ ಗಿರಿ ಹಾಗೂ ವೆಂಕಟೇಶ್ ಸಾಳುಂಕೆ ಕಾರ್ಯಕ್ರಮ ನಿರ್ವಹಿಸಿದರು.