ಕೊಟ್ಟೂರು: ತಾಲೂಕು ರಚನೆಗೊಂಡು ಎಂಟು ವರ್ಷ ಕಳೆದರೂ ಸರ್ಕಾರ ಕೊಟ್ಟೂರು ಪಟ್ಟಣದಲ್ಲಿ ಇನ್ನು ಹಲವು ಸರ್ಕಾರಿ ಕಚೇರಿಗಳಲ್ಲಿ ತೆರೆಯದೇ ಇರುವುದರಿಂದ ಹಳೆಯ ತಾಲೂಕಿಗೆ ಅಲೆದಾಡುವಂತಾಗಿದೆ. ಇದನ್ನು ತಪ್ಪಿಸಲು ಕೂಡಲೇ ಕೊಟ್ಟೂರಿನಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನು ತೆರೆಯಲು ಸರ್ಕಾರ ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನಿ ಮಹೇಶ ಒತ್ತಾಯಿಸಿದರು.

ಈ ಸಂಬಂಧ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಕಾರ್ಯಕರ್ತರೊಂದಿಗೆ ಸರ್ಕಾರವನ್ನು ಒತ್ತಾಯಪಡಿಸುವ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಾಗ ಅವರ ಬಳಿಗೆ ತೆರಳಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮೆರವಣಿಗೆ ಕೈಗೊಂಡು ಕಚೇರಿಗಳನ್ನು ತೆರೆಯಲು ಒತ್ತಾಯಪಡಿಸಿದ್ದೇವೆ ಎಂದು ಅವರು ಹೇಳಿದರು.

ಈ ಸಲದ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಮಳೆ ಬಾರದೇ ರೈತರ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ಕೊಟ್ಟೂರು ತಾಲೂಕನ್ನು ಬರಪೀಡಿತ ತಾಲೂಕೆಂದು ಸರ್ಕಾರ ಘೋಷಿಸಿ ರೈತರ ಪ್ರತಿ ಎಕರೆರೆಗೆ ₹20 ಸಾವಿರ ಪರಿಹಾರ ಹಣ ಘೋಷಿಸಬೇಕು ಎಂದು ಒತ್ತಾಯಿಸಿದರು. ಇದು ಸೇರಿದಂತೆ ಇತರ ಹತ್ತಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.

ನಂತರ ತಾಲೂಕು ರೈತ ಮತ್ತು ಹಸಿರು ಸೇನೆ ಸಂಘಕ್ಕೆ ನೂತನ ಅಧ್ಯಕ್ಷರನ್ನಾಗಿ ಬಾರೂರ್ ಹನುಮಂತಪ್ಪ ಅವರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು.

ತಾಲೂಕು ಉಪಾಧ್ಯಕ್ಷರಾಗಿ ಗೋಣೇಪ್ಪ ಮಂಗನಹಳ್ಳಿ, ಜಿಲ್ಲಾ ಉಪಾಧ್ಯಕ್ಷರಾಗಿ ಬೂದಿ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕಾಳಾಪುರ ಹುಲುಗಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಮಂಜುನಾಥ, ಕಾನೂನು ಸಲಹೆಗಾರರಾಗಿ ವಕೀಲ ಚೌಡೇಶ ಆಯ್ಕೆ ಮಾಡಲಾಯಿತು.


ರಾಜ್ಯ ಉಪಾಧ್ಯಕ್ಷ ಕೆ.ಪರಶುರಾಮ, ಜಿಲ್ಲಾಧ್ಯಕ್ಷ ಬಣಕಾರ ಬಸವರಾಜ, ಹುಚ್ಚಪ್ಪರ ನಿಂಗಪ್ಪ, ಟಿ.ಎರಿಸ್ವಾಮಿ, ಬನ್ನಿಮರದ ವೀರಪ್, ಚಿತ್ತಪ್ಪ, ನಾಗಪ್ಪ, ಶೇಷಪ್ಪ ಇದ್ದರು.