ಕನ್ನಡಪ್ರಭ ವಾರ್ತೆ ಹೊನ್ನಾವರ
ಯಕ್ಷಗಾನದ ಮೇರು ಕಲಾವಿದರಾಗಿದ್ದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಲು ನಿರ್ಧರಿಸಲಾಗಿದ್ದು, ಈ ಟ್ರಸ್ಟ್ ಮೂಲಕ ಯಕ್ಷಗಾನ ಕಲೆ ಮುಂದಿನ ಜನಾಂಗಕ್ಕೆ ತಲುಪಿಸುವ ಹಾಗೂ ಚಿಟ್ಟಾಣಿಯವರ ಕಲಾ ಸೇವೆಯನ್ನು ಶಾಶ್ವತವಾಗಿ ಗುರುತಿಸುವ ಉದ್ದೇಶ ಹೊಂದಲಾಗಿದೆ ಎಂದು ಸಂಘಟಕ ರಾಜೇಶ ಭಂಡಾರಿ ಹೇಳಿದರು.ಪಟ್ಟಣದ ಮೂಡಗಣಪತಿ ದೇವಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚಿಟ್ಟಾಣಿಯವರು ಯಕ್ಷಗಾನ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಆದರೆ ನಾವು ಚಿಟ್ಟಾಣಿಯವರಿಗೆ ಏನನ್ನೂ ನೀಡಿಲ್ಲ. 74 ವರ್ಷಗಳ ಕಾಲ ನಮ್ಮನ್ನು ಚಿಟ್ಟಾಣಿಯವರು ರಂಜಿಸಿದ್ದರು. ಅವರ ಸ್ಮರಣಾರ್ಥ ರಂಗ ವೇದಿಕೆ, ಪ್ರಶಸ್ತಿ ಪ್ರದಾನ ಹಾಗೂ ಕಂಚಿನ ಪುತ್ಥಳಿಯನ್ನು ಮಾಡುವ ಬಯಕೆಯಿದೆ ಎಲ್ಲಾ ಯಕ್ಷಾಭಿಮಾನಿಗಳು, ಚಿಟ್ಟಾಣಿ ಅಭಿಮಾನಿ ಬಳಗದವರು ಸಹಕರಿಸಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಕೆಡಿಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡುತ್ತಾ ಚಿಟ್ಟಾಣಿ ಯಕ್ಷಗಾನದ ದಂತಕಥೆ ಆಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟದಲ್ಲಿ ಗಮನವನ್ನು ಸೆಳೆದಿದ್ದಾರೆ. ಅವರು ಯಕ್ಷಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಚಿಟ್ಟಾಣಿ ಹೆಸರಲ್ಲಿ ಪ್ರತಿಷ್ಠಾನ ಮಾಡಿ ವ್ಯವಸ್ಥಿತವಾಗಿ ಕೆಲಸವನ್ನು ಮಾಡಲು ನಿರ್ಧರಿಸಿದ್ದೇವೆ ಎಂದರು.ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ, ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ, ಯಕ್ಷಗಾನ ಕಲಾವಿದ ಕೃಷ್ಣಯಾಜಿ ಬಳ್ಕೂರು, ಯಕ್ಷಗಾನ ಕಲಾವಿದ ಮುಗ್ವಾ ಗಣೇಶ್ ನಾಯ್ಕ, ನಿಲ್ಕೋಡು ಶಂಕರ ಹೆಗಡೆ, ಅಶೋಕ್ ನಾಯ್ಕ ಮಾತನಾಡಿದರು.
ಯಕ್ಷಗಾನ ಕಲಾವಿದರಾದ ಪ್ರಭಾಕರ ಚಿಟ್ಟಾಣಿ, ನಾರಾಯಣ ಚಿಟ್ಟಾಣಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪಾ, ಕಾರ್ತಿಕ್ ಚಿಟ್ಟಾಣಿ, ಪರಮೇಶ್ವರ ಬಂಢಾರಿ, ಲಕ್ಷ್ಮಣ ಗೌಡ, ಸುನಿಲ್ ಬಂಢಾರಿ, ಮಂಕಿ ಈಶ್ವರ ನಾಯ್ಕ, ಲಕ್ಷ್ಮೀನಾರಾಯಣ ಹೆಗಡೆ, ಚಂದನ್ ಪ್ರಭು, ಮಂಜುನಾಥ್ ನಾಯ್ಕ ಗೇರುಸೊಪ್ಪಾ ಮೊದಲಾದವರಿದ್ದರು.