ಹೂವಿನಹಡಗಲಿ: ಮನರೇಗಾ ಯೋಜನೆಯ ಲಾಭವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ತಲುಪಿಸುವ ಉದ್ದೇಶದಿಂದ ಕಾಯಕ ಬಂಧುಗಳಿಗೆ ಸಂಭಾವನೆ ನೀಡಬೇಕೆಂಬ ಆದೇಶದಂತೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಬಿ. ಶಬ್ಬೀರ್ ಬಾಷಾ, ಮನರೇಗಾ ಯೋಜನೆಯಲ್ಲಿ ಕಾಯಕ ಬಂಧುಗಳಾಗಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರಿಗೆ ಪ್ರತಿ ಕಾರ್ಮಿಕನಿಗೆ ₹4ಗಳಂತೆ ಸಂಭಾವನೆ ನೀಡಬೇಕಿತ್ತು. ಆದರೆ, ಈ ವರೆಗೂ ಕಾಯಕ ಬಂಧುಗಳಿಗೆ ಸಂಭಾವನೆ ಸರಿಯಾಗಿ ನೀಡಿಲ್ಲ. ಈ ಕೂಡಲೇ ಆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಹಿರೇಹಡಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 62 ಕಾಯಕ ಬಂಧುಗಳಿದ್ದಾರೆ. ಇದರಲ್ಲಿ 15-20 ಜನರಿಗೆ ಮಾತ್ರ ಸಂಭಾವನೆ ಬಂದಿದೆ. ಆದರೆ, ಉಳಿದವರಿಗೆ ಇನ್ನೂ ಹಣ ಬಂದಿಲ್ಲ. ಬಹುತೇಕ ಗ್ರಾಪಂಗಳಲ್ಲಿ ಅರೆಬರೆಯಾಗಿ ಸಂಭಾವನೆ ನೀಡಿದ್ದಾರೆ. ಆದರಿಂದ 26 ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾದಲ್ಲಿ ಕಾಯಕ ಬಂಧುಗಳಾಗಿ ಕೆಲಸ ಮಾಡುತ್ತಿರುವವರಿಗೆ ಕೂಡಲೇ ಸಂಭಾವನೆ ನೀಡಬೇಕು. ಜತೆಗೆ ತಾಲೂಕಿನಲ್ಲಿ ಎಷ್ಟು ಕಾಯಕ ಬಂಧುಗಳಿದ್ದಾರೆ? ಇಲ್ಲಿ ವರೆಗೂ ಅವರಿಗೆ ನೀಡಿರುವ ಸಂಭಾವನೆ ಸೇರಿದಂತೆ ಇತರೆ ಮಾಹಿತಿಯನ್ನು ಕೂಡಲೇ ನೀಡಬೇಕು, ಇದರಲ್ಲಿ ಪಿಡಿಒಗಳು ನಿರ್ಲಕ್ಷ್ಯ ವಹಿಸಿದರೇ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿರೇಹಡಗಲಿ, ನವಲಿ, ಸೋಗಿ, ಕೆ. ಅಯ್ಯನಹಳ್ಳಿ, ಮಹಾಜನದಹಳ್ಳಿ, ಬೀರಬ್ಬಿ ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರಿಗೆ ಎನ್‌ಎಂಆರ್ ನಂತೆ ಕೂಲಿ ಹಣ ತಡವಾಗಿದೆ. ಆದ್ದರಿಂದ ಮನರೇಗಾ-2005ರ ಅಡಿಯಲ್ಲಿ ಕೂಲಿ ಭತ್ಯೆ ಹಾಗೂ ಕೂಲಿ ಹಣ ನೀಡಬೇಕು ಎಂದು ಆಗ್ರಹಿಸಿದರು.ಮಳೆ ಇಲ್ಲದೇ ಸಣ್ಣ, ಅತಿ ಸಣ್ಣ ರೈತರಿಗೆ ಕೂಲಿ ಕೆಲಸ ಇಲ್ಲದಂತಾಗಿದೆ. ಈ ಕೂಡಲೇ ಆಯಾ ಗ್ರಾಪಂಗಳಲ್ಲಿ ಕೆರೆಗಳು, ಹಳ್ಳಗಳು ಸಾಕಷ್ಟು ಒತ್ತುವರಿಯಾಗಿವೆ, ಸಂಪೂರ್ಣ ಸರ್ವೇ ಮಾಡಿಸಿ ಆ ಜಾಗದಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಹೇಳಿದರು. ಮಹಾಬಲೇಶ ಸೋಗಿ, ಎಚ್. ಮಂಜಪ್ಪ, ಬಿ. ವೀರಣ್ಣ, ಗೋಣೆಪ್ಪ, ಎಂ. ನೀಲಪ್ಪ, ಶೈನಾಜ್ ಸೇರಿದಂತೆ ಇತರರು ತಾಪಂ ಇಒ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.