ಹೂವಿನಹಡಗಲಿ: ಮಳೆ ಇಲ್ಲದೇ ಬಿತ್ತಿದ ಬೆಳೆಗಳು ಒಣಗಿ ಹೋಗಿವೆ. ಹೂವಿನಹಡಗಲಿ ತಾಲೂಕನ್ನು ಸರ್ಕಾರ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘವು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಎಚ್‌.ಸಿದ್ದಪ್ಪ, ಈ ವರ್ಷದ ಮುಂಗಾರು ಮಳೆ ಮೇ ತಿಂಗಳ 2 ಮತ್ತು 3ನೇ ವಾರದಲ್ಲಿ ಸ್ವಲ್ಪ ಆಗಿದ್ದು, ಆ ಸಮಯದಲ್ಲಿ ರೈತರು ಬೀಜ ಗೊಬ್ಬರಗಳನ್ನು ಸಾಲಮಾಡಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿ 6 ವಾರಗಳ ಕಳೆದರೂ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿದ್ದು ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಹೂವಿನಹಡಗಲಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ ಮಾತನಾಡಿ, ರಾಜ್ಯದ ವಿಜಯನಗರ ಜಿಲ್ಲೆ ಅಷ್ಟೇ ಅಲ್ಲದೇ ಇಡೀ ರಾಜ್ಯ ವ್ಯಾಪ್ತಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಸಾಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ತಂದು ರೈತರು ಬಿತ್ತನೆ ಮಾಡಿದ್ದಾರೆ. ಮಳೆ ಇಲ್ಲದೇ ಬೆಳೆಗಳು ಒಣಗಿ ಹೋಗಿವೆ. ಜತೆಗೆ ಸಾಕಷ್ಟು ರೈತರು ಬೆಳೆಗಳನ್ನು ನಾಶ ಮಾಡಲು ಮುಂದಾಗಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರೈತರ ನೆರವಿಗೆ ಸರ್ಕಾರ ಬರಬೇಕಿದೆ. ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಬಿತ್ತನೆ ಮಾಡಿರುವ ಪ್ರದೇಶಗಳ ಸಮೀಕ್ಷೆ ಮಾಡಿ, ಆಯಾ ಬೆಳೆಗಳಿಗೆ ತಕ್ಕಂತೆ ಬೆಳೆ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಬೇಕು. ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಮಳೆಯಾಗದೇ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ಮೇವು ಸಂಗ್ರಹಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಮಹಿಳಾ ಜಿಲ್ಲಾಧ್ಯಕ್ಷೆ ಬಿ.ಎಚ್‌.ಎಂ. ವಿಜಯಲಕ್ಷ್ಮಿ, ಉಪಾಧ್ಯಕ್ಷ ಕೆ.ಮಂಜುನಾಥ, ಸಂಘಟನೆ ಕಾರ್ಯದರ್ಶಿ ಡಿ.ಗಿರೀಶ್, ಗೌರವಾಧ್ಯಕ್ಷ ಫಕ್ಕೀರಪ್ಪ, ಕೆಆರ್‌ಎಸ್‌ ಪಕ್ಷದ ರೈತ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ದೊಡ್ಡಮನಿ, ಮುಜ್ಜು ರಹಿಮಾನ್, ವೆಂಕಟೇಶ್, ದುರುಗಪ್ಪ, ದಾವಲಸಾಬ್, ಮಿಯಾಸಾಬ್, ರಮೇಶ, ರವಿ ಕಿರಣ್ ಶಿರಸ್ತೇದಾರರಾದ ಸುಜಾತ ಅವರಿಗೆ ಮನವಿ ಸಲ್ಲಿಸಿದರು.