ಹರಪನಹಳ್ಳಿ: ಪೊಲೀಸ್ ಎಂದರೆ ಭಯ ಬೇಡ ಭರವಸೆ ಇರಲಿ. ಕಾನೂನು, ಸುವ್ಯವಸ್ಥೆ ಕಾಪಾಡುವುದು ಮತ್ತು ಸಾರ್ವಜನಿಕರಿಗೆ ರಕ್ಷಣೆ ನೀಡುವುದು ನಮ್ಮ ಇಲಾಖೆಯ ಮುಖ್ಯ ಉದ್ದೇಶ ಎಂದು ಡಿವೈಎಸ್ಪಿ ಸಂತೋಷ ಚವ್ಹಾಣ್ ತಿಳಿಸಿದರು.ನಗರದ ತೆಕ್ಕದಗರಡಿಕೇರಿಯ ಊರಮ್ಮನ ದೇವಸ್ಥಾನದ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೋಷಕರು ಮಕ್ಕಳನ್ನು ಪ್ರೀತಿಯಿಂದ ಪೋಷಿಸಿ ಬೆಳೆಸುವುದು ಅಷ್ಟೇ ಮುಖ್ಯವಲ್ಲ ಅವರ ಬಗ್ಗೆ ನಿಗಾ ವಹಿಸುವುದು ಕೂಡ ಮುಖ್ಯ. ಇತ್ತೀಚೆಗೆ ಪೋಕ್ಸೊ, ಕಳ್ಳತನ, ವಂಚನೆ, ಮೋಸ ಸೇರಿದಂತೆ ಅನೇಕ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜೊತೆ ನಿಮ್ಮ ಸಹಕಾರ ತುಂಬಾ ಮುಖ್ಯ ಎಂದರು.ಯಾವುದೇ ಅಪರಾಧ ಪ್ರಕರಣಗಳು ನಿಮ್ಮ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ, ನಾವು ನಿಮ್ಮ ಸಹಾಯಕ್ಕೆ ಧಾವಿಸುತ್ತೇವೆ. ಇತ್ತೀಚೆಗೆ ಕೆಲ ವಂಚಕರು ಫೋನ್ ಮೂಲಕ ಒಟಿಪಿ ಕೇಳಿ ಹಣವನ್ನು ದೋಚುವುದು ಸರ್ವೆ ಸಾಮಾನ್ಯವಾಗಿದೆ. ನಿಮ್ಮ ಖಾತೆ ನಂಬರನ್ನು ಯಾರಿಗೂ ನೀಡದೇ ಜೋಪಾನವಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಕುಡಿದ ಮತ್ತಿನಲ್ಲಿ ಯಾರು ವಾಹನ ಚಾಲನೆ ಮಾಡಬಾರದು, ಮದ್ಯ, ಗಾಂಜಾ ಸೇವನೆಯಿಂದ ಮನುಷ್ಯ ನಿಯಂತ್ರಣದಲ್ಲಿರುವುದಿಲ್ಲ. ಕಾನೂನು ಬಾಹಿರ ಕೆಲಸಕ್ಕೆ ಮುಂದಾಗಬೇಡಿ ಎಂದು ಎಚ್ಚರಿಸಿದರು.ಪಿಎಸ್‌ಐ ಶಂಭುಲಿಂಗ ಸಿ.ಹಿರೇಮಠ ಮಾತನಾಡಿ, ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮದಡಿ ಈಗಾಗಲೇ ನಗರದಲ್ಲಿ 13 ಒಂಟಿ ವೃದ್ಧರನ್ನು ಗುರುತಿಸಿ ಅವರಿಗೆ ಪೋಲಿಸ್ ಇಲಾಖೆಯಿಂದ ರಕ್ಷಣೆ ನೀಡಲಾಗಿದೆ. ನಿಮ್ಮ ಭಾಗದಲ್ಲಿ ಹಿರಿಯ ಒಂಟಿ ವೃದ್ಧರಿದ್ದರೆ ನಮ್ಮ ಗಮನಕ್ಕೆ ತನ್ನಿ ಇನ್ನು ಮಹಿಳೆಯರು ಬಸ್ಸಿನಲ್ಲಿ ಸಂಚರಿಸುವಾಗ ಚಿನ್ನ ಆಭರಣಗಳ ಮೇಲೆ ನಿಗಾ ಇರಲಿ ಕುಟುಂಬದ ಸದಸ್ಯರು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮನೆಯ ಲೋಕೇಶನ್ ಮತ್ತು ಸೆಲ್ಫಿ ಫೋಟೋ ತೆಗೆದು ನಮ್ಮ ಇಲಾಖೆ ಗಮನಕ್ಕೆ ತನ್ನಿ ನಿಮ್ಮ ಮನೆಯ ರಕ್ಷಣೆಗೆ ಮುಂದಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ವಕೀಲ ಸಿರಾಜುದ್ದೀನ್, ಸುರೇಶ್ ಮಂಡಕ್ಕಿ, ದ್ಯಾಮಜ್ಜಿ ದಂಡೆಪ್ಪ, ಪಿ.ಪರಶುರಾಮ, ಗಿಡ್ಡಳಿ ನಾಗರಾಜ, ಜಲಾಲಿ ಬುಡೇನಸಾಹೇಬ್, ದಾದಾಪೀರ್, ಇಸ್ಮಾಯಿಲ್, ಆರ್.ಮರಿಯಪ್ಪ ಜಿ.ಬಸವರಾಜ, ಕಮ್ಮಾರ ಅಂಜಿನಪ್ಪ, ಕವಾಸರ ನಿಜಲಿಂಗಪ್ಪ, ದಾಣಿ ನಾಗರಾಜ ಇದ್ದರು.
ಹರಪನಹಳ್ಳಿ ನಗರದ ತೆಕ್ಕದಗರಡಿಕೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಡಿವೈಎಸ್ಪಿ ಸಂತೋಷ ಚವ್ಹಾಣ್ ಮಾತನಾಡಿದರು.