ಕನಕಗಿರಿ: ನನ್ನ ಅವಧಿಯಲ್ಲಿ ₹೧೨೬ ಕೋಟಿ ಅನುದಾನ ತಂದು ಕ್ಷೇತ್ರದ ೯ ಕೆರೆಗಳನ್ನು ತುಂಬಿಸಿದ್ದೇನೆ ಎಂದು ಮಾಜಿ ಶಾಸಕ ಬಸವರಾಜ ದಢೇಸೂಗುರು ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ತಂಗಡಗಿ ೬ ಕೆರೆಗಳಿಗೆ ಮಾತ್ರ ನೀರು ತುಂಬಿಸಿದ್ದು, ನಾನೇ ಎಲ್ಲ ಕೆರೆಗಳನ್ನು ತುಂಬಿಸಿದ್ದೇನೆ ಎಂದು ಹೇಳುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ಎರಡು ವರ್ಷ ಕೊರೋನಾದಿಂದಾಗಿ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಉಳಿದ ಮೂರು ವರ್ಷ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೆ, ತಂಗಡಗಿ ಮೂರು ಬಾರಿ ಶಾಸಕ, ಸಚಿವರಾದರೂ ಕ್ಷೇತ್ರವನ್ನು ಹೇಳಿಕೊಳ್ಳುವ ರೀತಿ ಅಭಿವೃದ್ಧಿಪಡಿಸಿಲ್ಲ. ಕನಕಗಿರಿ-ಕಾರಟಗಿ ತಾಲೂಕಾಗಿ ೯ ವರ್ಷವಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಕಚೇರಿಗಳು ಕಾರ್ಯಾರಂಭವಾಗಿಲ್ಲ ಎಂದು ಕಿಡಿಕಾಡಿದರು.ತಾಲೂಕಿನ ಮಲ್ಲಿಗೆವಾಡ ಹಾಗೂ ಜೀರಾಳ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದ್ದು, ಕೋಟಿಗಟ್ಟಲೇ ಅವ್ಯವಹಾರವಾಗಿರುವುದು ಮೇಲ್ನೊಟಕ್ಕೆ ಕಂಡು ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.
ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಕಾರ್ಯಕರ್ತರು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸ್ಥಳೀಯ ಚುನಾವಣೆಗಳು ಬರುವುದರಿಂದ ಮತಪಟ್ಟಿ ಪರಿಷ್ಕರಣೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ನಾಗರಾಜ ಬಿಲ್ಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ, ಜಿಲ್ಲಾ ಉಪಾಧ್ಯಕ್ಷ ಮೌನೇಶ ದಢೇಸೂಗುರು, ವಿಶೇಷ ಮತಪಟ್ಟಿ ಪರಿಷ್ಕರಣೆಯ ಬಿಜೆಪಿ ಮಂಡಲ ಪ್ರಭಾರಿ ಮನೋಹರಗೌಡ ಹೇರೂರು, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಪ್ರಮುಖರಾದ ರಾಜಾ ಶರತ್ ನಾಯಕ, ಭೀಮನಗೌಡ, ರಂಗಪ್ಪ ಕೊರಗಟಗಿ, ಶಿವಯ್ಯಸ್ವಾಮಿ ನವಲಿ, ಗ್ಯಾನಪ್ಪ ಗಾಣದಾಳ, ನಿಂಗಪ್ಪ ನಾಯಕ ಇತರರಿದ್ದರು.
ಜು. 8ರಂದು ಸಭೆ: ಎಸ್‌ಐಆರ್ ಕುರಿತು ಸಮರ್ಪಕ ಮಾಹಿತಿ ನೀಡಲು ಮರಳಿ ಗ್ರಾಮದ ಪದ್ಮಾ ಹಾಲ್‌ನಲ್ಲಿ ಕನಕಗಿರಿ-ಕಾರಟಗಿ ಕಾರ್ಯಕರ್ತರ ಸಭೆಯನ್ನು ಜು. ೮ರಂದು ಹಮ್ಮಿಕೊಂಡಿದ್ದು, ಕ್ಷೇತ್ರದ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ಬಸವರಾಜ ದಢೇಸೂಗುರು ಹೇಳಿದರು.