ಕುಕನೂರು: ಕಾರಹುಣ್ಣಿಮೆ ನಮ್ಮ ನಾಡಿನ ಕೃಷಿ ಸಂಸ್ಕೃತಿಯ ಪ್ರತೀಕ. ರೈತನ ಜೀವನಾಡಿಯಾದ ಎತ್ತುಗಳನ್ನು ಪೂಜಿಸುವ ಮೂಲಕ ಕೃತಜ್ಞತೆ ಸಲ್ಲಿಸುವುದು ನಮ್ಮ ಪರಂಪರೆ. ಬಸವಣ್ಣನ ಸೇವೆ ಲೋಕಕಲ್ಯಾಣಕ್ಕಾಗಿ ಎಂದು ಕುಕನೂರು-ತಳಕಲ್ಲಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಹೇಳಿದರು.
ತಾಲೂಕಿನ ತಳಕಲ್ ಗ್ರಾಮದ ಅನ್ನದಾನೀಶ್ವರ ಶಾಖಾಮಠದಲ್ಲಿ ಕಾರಹುಣ್ಣಿಮೆ ಹಬ್ಬದ ನಿಮಿತ್ತ ಸೋಮವಾರ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬು ಎಂದರೆ, ಆ ರೈತನ ಬೆನ್ನೆಲುಬು ಎತ್ತುಗಳು. ಹೊಲದಲ್ಲಿ ಬೆವರು ಸುರಿಸುವ ರೈತನಿಗೆ, ನೇಗಿಲು ಹೊರುವ ಎತ್ತು ದೇವರ ಸಮಾನ. ಕಾರಹುಣ್ಣಿಮೆ ಕೇವಲ ಹಬ್ಬವಲ್ಲ, ಇದು ರೈತ ತನ್ನ ಜತೆಗಾರನಿಗೆ ಸಲ್ಲಿಸುವ ಕೃತಜ್ಞತಾ ಸಮರ್ಪಣೆ ಎಂದು ಹೇಳಿದರು.ರೈತ ಮುಖಂಡ ಪಕ್ಕಪ್ಪ ಅಳವಂಡಿ ಮಾತನಾಡಿ, ಹಿರಿಯರು ಕಷ್ಟಪಟ್ಟು ಉಳಿಸಿ ತಂದ ಕೃಷಿ ಪದ್ಧತಿಯನ್ನು ನಾವು ಮುಂದುವರಿಸಬೇಕು. ಮಳೆ, ಬೆಳೆ, ಎತ್ತು, ನೇಗಿಲು ಇವೆಲ್ಲವೂ ನಮ್ಮ ಬದುಕಿನ ಭಾಗ. ಮಠದ ಸ್ವಾಮೀಜಿಯವರು ರೈತರ ಪರವಾಗಿ ನಿಂತಿರುವುದು ನಮಗೆಲ್ಲ ಧೈರ್ಯ ತಂದಿದೆ ಎಂದರು.ಇಂದಿನ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮಣ್ಣಿನ ಋಣ ಮರೆಯಬಾರದು. ಈ ಮಠವು ಮುಂದಿನ ದಿನಗಳಲ್ಲಿ ರೈತರಿಗೆ ಮಾರ್ಗದರ್ಶನ ಕೇಂದ್ರವಾಗಲಿ ಎಂದರು.
ಮುಖಂಡ ಬಸವರಾಜ ಬ್ಯಾಳಿ ಮಾತನಾಡಿ, ಒಂದು ಕಾಲದಲ್ಲಿ ಪ್ರತಿ ಮನೆಯಲ್ಲೂ ಎತ್ತುಗಳಿದ್ದವು. ಈಗ ಯಾಂತ್ರೀಕರಣ ಬಂದರೂ ಬಸವಣ್ಣನ ಮೇಲಿನ ಭಕ್ತಿ ಕಡಿಮೆಯಾಗಿಲ್ಲ. ತಳಕಲ್ ಗ್ರಾಮದ ರೈತರು ಇಂದಿಗೂ ಒಗ್ಗಟ್ಟಾಗಿದ್ದಾರೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಮಳೆಯಾಶ್ರಿತ ಬೇಸಾಯ ಮಾಡುವ ನಮಗೆ ಇಂತಹ ಆಚರಣೆಗಳು ಮನೋಸ್ಥೈರ್ಯ ನೀಡುತ್ತವೆ ಎಂದು ಹೇಳಿದರು.ಪ್ರಮುಖರಾದ ಸಂಗಮೇಶ ಕಲ್ಮಠ, ನಾಗರಾಜ ಚರಂತಿಮಠ, ಮಲ್ಲಯ್ಯ ಲಕಮಾಪುರಮಠ, ಪಕ್ಕಪ್ಪ ಮುರಿಗಿ, ಮುದಿಯಪ್ಪ ಯೋಗೆಮ್ಮನವರ, ಪ್ರವೀಣ ಕರ್ಜಗಿ, ಶಿವಪ್ಪ ಬ್ಯಾಳಿ, ಸುನಿಲ ಗೋರಿ, ಗವಿಸಿದ್ದಪ್ಪ ದೊಡ್ಡಮನಿ, ಬಾವರಾಜ ಚಿಲವಾಡಿಗಿ, ರವಿ ತಳವಾರ, ಶರಣಪ್ಪ ಬ್ಯಾಳಿ, ವಿರೂಪಾಕ್ಷಿ ನಿಟ್ಟಾಲಿ, ರುದ್ರಪ್ಪ ಚಿಲವಾಡಿಗಿ, ಮುತ್ತಪ್ಪ ಗೋರಿ, ಅಬ್ಬಾಸಾಲಿ, ಕಲ್ಲಯ್ಯ ಮುಂಡರಗಿ ಇದ್ದರು.