ಹೊಸಪೇಟೆ: ಕಾರ್ಯಾಗಾರದಲ್ಲಿಸಂಪನ್ಮೂಲ ವ್ಯಕ್ತಿಗಳು ಓದು, ಅಧ್ಯಯನದ ಅನುಭವದೊಂದಿಗೆ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹಂಚಿಕೊಂಡಿದ್ದಾರೆ. ಕಾರ್ಯಾಗಾರದಲ್ಲಿ ಸ್ಮಾರ್ಟ್‌ಬೋರ್ಡ್ ಬಳಕೆಯಿಂದ ವಿಷಯಗಳನ್ನು ದೃಶ್ಯಾತ್ಮಕವಾಗಿ, ಪರಿಣಾಮಕಾರಿಯಾಗಿ ನಿರೂಪಿಸಲು ಸಾಧ್ಯವಾಗಿದೆ. ತರಗತಿಗಳು ಹೆಚ್ಚು ಅರ್ಥಪೂರ್ಣವಾಗಿ ಸಾಗಲು ಸಹಕಾರಿಯಾಯಿತು ಎಂದು ಡಾ.ಭೀಮೇಶ ಯರಡೋಣಿ ತಿಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 14 ದಿನಗಳ ಯುಜಿಸಿ-ನೆಟ್ ಜೆಆರ್‌ಎಫ್ ಮತ್ತು ಕೆ-ಸೆಟ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮಾತ್ರ ಕಣ್ಣೆದುರಿಗೆ ಇಟ್ಟುಕೊಂಡು ಮುನ್ನಡೆಯಬೇಕು. ಗುರಿ ಸಾಧನೆಯ ಹಾದಿಯಲ್ಲಿ ಉಳಿದೆಲ್ಲವೂ ತೊಂದರೆಗಳು ಶೂನ್ಯವಾಗಿ ಕಾಣಬೇಕು. ಏಕಾಗ್ರತೆ ಮತ್ತು ದೃಢ ಸಂಕಲ್ಪವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಕಲಬುರಗಿಯ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಡಾ.ಮಹಾಲಿಂಗ ಪೋಳ ಮಾತನಾಡಿ, ಪ್ರಾಧ್ಯಾಪಕರಲ್ಲಿ ದೂರದೃಷ್ಟಿಯ ಕನಸು ಮತ್ತು ಬದ್ಧತೆ ಇದ್ದಾಗ ಮಾತ್ರ ಇಂತಹ ಅರ್ಥಪೂರ್ಣ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ಸಂಯೋಜನಾಧಿಕಾರಿ ಡಾ.ಗೀತಮ್ಮ, ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಗೋವಿಂದ ಸಭೆಯಲ್ಲಿ ಉಪಸ್ಥಿತರಿದ್ದರು. ಶಬರಿನ್ ಬಾನು ನಿರೂಪಿಸಿದರು.ಕಲಬುರಗಿಯ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಡಾ.ಮಹಾಲಿಂಗ ಪೋಳ ಮಾತನಾಡಿದರು.