ಬಡವರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸದ ಬಜೆಟ್

KannadaprabhaNewsNetwork | Published : Mar 15, 2025 1:06 AM

ಸಾರಾಂಶ

ಗ್ಯಾರಂಟಿ ಯೋಜನೆಗಳಿಂದ ಶ್ರೀಮಂತರನ್ನು ಹೊರಗಿಟ್ಟರೆ ಖಂಡಿತ ತಪ್ಪಲ್ಲ. ಈ ಬಗ್ಗೆ ಸಿಎಂ ಚರ್ಚಿಸಲು ಸಿದ್ಧವಿಲ್ಲದಿರುವುದು ನಿರ್ಲಕ್ಷ್ಯದ ಪರಮಾವಧಿ.

ಕನ್ನಡಪ್ರಭ ವಾರ್ತೆ ರಾಮನಗರಉದ್ಯೋಗ ಸೃಷ್ಟಿ, ಅಗತ್ಯ ವಸ್ತುಗಳ ಬೆಲೆ ಇಳಿಕೆ, ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ ಹಾಗೂ ಎಲ್ಲಾ ವರ್ಗದ ಬಡವರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸದ ಯಾವುದೇ ಬಜೆಟ್ ಗಾತ್ರ ಎಷ್ಟೇ ದೊಡ್ಡದಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಟೀಕಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡ ಗಾತ್ರದ ಬಜೆಟ್ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ವರ್ಷ ಒಂದು ಲಕ್ಷದ ಹದಿನೇಳು ಸಾವಿರ ಕೋಟಿ ರುಪಾಯಿಗಳ ಸಾಲದ ಹೊರೆಯನ್ನು ನಾಡಿನ ಜನರ ಮೇಲೆ ಹೇರುತ್ತಿದ್ದಾರೆ ಎಂದು ದೂರಿದರು.ಕಾಂಗ್ರೆಸ್ ಸರ್ಕಾರದ ಪ್ರತಿಷ್ಠಿತ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಶ್ರೀಮಂತರನ್ನು ಹೊರಗಿಟ್ಟರೆ ಖಂಡಿತ ತಪ್ಪಲ್ಲ. ಈ ಬಗ್ಗೆ ಸಿಎಂ ಚರ್ಚಿಸಲು ಸಿದ್ಧವಿಲ್ಲದಿರುವುದು ನಿರ್ಲಕ್ಷ್ಯದ ಪರಮಾವಧಿ ಎಂದರು.ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಗೆ ಈ ಬಾರಿ 42 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ತಮಟೆ ಬಾರಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಈ ಕಾಯ್ದೆಯ ನಿಯಮ 7 (6) ಅನ್ವಯ ಸುಮಾರು 21 ಸಾವಿರ ಕೋಟೆ ಅಭಿವೃದ್ಧಿ ಕಾರ್ಯಗಳಿಗೆ ಎಂದು ವರ್ಗಾಯಿಸಿ ದ್ರೋಹ ಎಸಗಲಾಗುತ್ತಿದೆ. ಇದರ ಜೊತೆಗೆ 13 ಸಾವಿರ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಉಳಿದ 6 -7 ಸಾವಿರ ಕೋಟಿಗಳನ್ನು ಎಸ್ಸಿ, ಎಸ್ಟಿಗಳ ಉದ್ಯೋಗ ಸೃಷ್ಟಿಗೆ, ಸ್ವಾವಲಂಬಿ ಬದುಕಿನ ನಿರ್ಮಾಣಕ್ಕೆ ಬಳಸದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಎಸ್ಸಿ, ಎಸ್ಟಿಗಳ 8 ಅಭಿವೃದ್ಧಿ ನಿಗಮಗಳಿಗೆ ಕೇವಲ 488 ಕೋಟಿಗಳನ್ನು ಮಾತ್ರ ನೀಡಿರುವುದು. ಹೀಗಾಗಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯನ್ನು ಎಸ್ಸಿ ಎಸ್ಟಿಗಳ ಅಭಿವೃದ್ಧಿಗೆ ತರಲಾಗಿದೆಯೋ ಅಥವಾ ಈ ಕಾಯ್ದೆ ಹೆಸರಿನಲ್ಲಿ ಮತ ಪಡೆದು ವಂಚಿಸಲು ತರಲಾಗಿದೆಯೋ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ 2.70 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಹೇಳಿರುವ ಮುಖ್ಯಮಂತ್ರಿಗಳು, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೀಡಿದ್ದ ಭರವಸೆಯನ್ನೇ ಮರೆತಿದ್ದಾರೆ. ಇದು ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಡುತ್ತಿರುವ ದ್ರೋಹ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ರಾಜ್ ಮೌರ್ಯ, ಮುಖಂಡರಾದ ವಿನಯ್ ಕುಮಾರ್ , ಸ್ವಾಮಿ, ಗೋಪಿ, ಗಣೇಶ್ ಇದ್ದರು.

ಬಾಕ್ಸ್‌-----ಮೇಕೆದಾಟು ಹಣ ಹೊಡೆವ ಸ್ಕೀಂರಾಮನಗರ:ಮೇಕೆದಾಟು ಯೋಜನೆ ರಾಜಕಾರಣಿಗಳು ಕಮಿಷನ್ ಹೊಡೆಯುವ ಸ್ಕೀಂ ಆಗಿದೆ. ಆ ಯೋಜನೆಗೆ ಸಾವಿರಾರು ಕೋಟಿ ಖರ್ಚು ಮಾಡುವ ಬದಲು ಲಕ್ಷಾಂತರ ಕೆರೆಗಳನ್ನು ಹೂಳು ತೆಗೆದು ಪುನಶ್ಚೇತನಗೊಳಿಸಬಹುದು ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.ಮೇಕೆದಾಟು ಯೋಜನೆಗೆ ಸಾವಿರಾರು ಕೋಟಿ ಖರ್ಚು ತಗಲುತ್ತದೆ. ಆಳುವ ಸರ್ಕಾರಗಳ ಇಂತಹ ಬೃಹತ್ ಯೋಜನೆಗಳೆಲ್ಲವೂ ಕಮಿಷನ್ ಹೊಡೆಯುವ ಯೋಜನೆಗಳಾಗಿವೆ. ಅದೇ ಹಣದಲ್ಲಿ ಕೆರೆಗಳನ್ನು ಪುನಶ್ಚೇತನಗೊಳಿಸಿ ನೀರು ಒದಗಿಸುವ ಕೆಲಸ ಮಾಡಬಹುದು ಎಂದರು.

--------

...ಕೋಟ್ ...ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಎಸ್ಸಿ ಎಸ್ಟಿ ಮತ್ತು ಮುಸಲ್ಮಾನರನ್ನು ಓಲೈಸುವ ಬಜೆಟ್ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ ವಾಸ್ತವವಾಗಿ ಮುಖ್ಯಮಂತ್ರಿಗಳು ಎರಡು ವರ್ಗಗಳ ಜನರ ಮೂಗಿಗೆ ತುಪ್ಪ, ಬೆನ್ನಿಗೆ ಚೂರಿ ಎಂಬ ನೀತಿಯನ್ನು ಬಜೆಟ್‌ನಲ್ಲಿ ಅನುಸರಿಸಿದ್ದಾರೆ.- ಎಂ.ಕೃಷ್ಣಮೂರ್ತಿ, ರಾಜ್ಯಾಧ್ಯಕ್ಷ, ಬಿಎಸ್ಪಿ----------14ಕೆಆರ್ ಎಂಎನ್ 1.ಜೆಪಿಜಿಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article