ಕಾಮನೊಂದಿಗೆ ಮಾಡರ್ನ್‌ ರತಿ

KannadaprabhaNewsNetwork | Published : Mar 15, 2025 1:06 AM

ಸಾರಾಂಶ

ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಹೋಳಿ ಹುಣ್ಣಿಮೆಯ ಅಂಗವಾಗಿ ಕಾಮಣ್ಣ ಸಮಿತಿಯಿಂದ ವಿದೇಶಿ ಮಾದರಿ ಸ್ತ್ರಿ ವೇಷಧಾರಿ ರತಿಯೊಂದಿಗೆ ಪೌರಾಣಿಕ ದೇಶಿಯ ವೇಷಧಾರಿ ಕಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಅಲಂಕರಿಸಿದ್ದು, ನೋಡುಗರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಹೋಳಿ ಹುಣ್ಣಿಮೆಯ ಅಂಗವಾಗಿ ಕಾಮಣ್ಣ ಸಮಿತಿಯಿಂದ ವಿದೇಶಿ ಮಾದರಿ ಸ್ತ್ರಿ ವೇಷಧಾರಿ ರತಿಯೊಂದಿಗೆ ಪೌರಾಣಿಕ ದೇಶಿಯ ವೇಷಧಾರಿ ಕಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಅಲಂಕರಿಸಿದ್ದು, ನೋಡುಗರ ಗಮನ ಸೆಳೆಯಿತು.

ನೀಲಕಂಠೇಶ್ವರ ಕಾಮಣ್ಣ ಸೇವಾ ಸಮಿತಿಯ ಸದಸ್ಯ ಜಿ.ಎಚ್. ಶಶಿಧರಗೌಡ ಮಾತನಾಡಿ, ಹೋಳಿ ಹಬ್ಬದ ಅಂಗವಾಗಿ ಪ್ರತಿ ವರ್ಷವೂ ಕಾಮನ ಹಾಗೂ ರತಿಯ ಬೊಂಬೆ ಮೂರ್ತಿ ಪ್ರತಿಷ್ಠಾಪಿಸಿ ಅಲಂಕರಿಸುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೆವು. ಅದರಲ್ಲೂ ಈ ಬಾರಿ ವಿಶೇಷತೆ ಇರಲೆಂದು ಕಾಮಣ್ಣನ ಮೂರ್ತಿಯೊಂದಿಗೆ ಬೆಂಗಳೂರಿನಿಂದ ಮಾರ್ಡನ್ ಲೇಡಿ ಗೊಂಬೆ, ಡ್ರೆಸ್ ಖರೀದಿಸಿ ಹೊಸ ರೀತಿಯಲ್ಲಿ ರತಿಯನ್ನು ಅಲಂಕರಿಸಿ ಪ್ರತಿಷ್ಠಾಪಿಸಲಾಗಿದೆ. ಶುಕ್ರವಾರ ರತಿಗೆ ಸಂಪ್ರದಾಯದ ಗುಳೇದಗುಡ್ಡ ಸೀರೆ ಉಡಿಸಲಾಗಿದೆ. ವಿದೇಶಿಯರು ಭಾರತೀಯ ಸಂಪ್ರದಾಯದವನ್ನು ಮೆಚ್ಚಿ ಭಾರತೀಯತೆಯನ್ನು ಅಳವಡಿಸಿಕೊಳ್ಳುವ ಪ್ರತೀಕವಾಗಿ, ಮಾರ್ಡನ್ ಲೇಡಿಯನ್ನು ದೇಶಿಯ ರತಿಯಾಗಿ ಪರಿವರ್ತನೆಯಾಗುವ ಸಂದೇಶ ಸಾರುತ್ತದೆ ಎಂದರು. ಇನ್ನು ಶುಕ್ರವಾರ ರಾತ್ರಿ ಕಾಮನ ಪಟವನ್ನು ಬೆಂಕಿಯಲ್ಲಿ ದಹಿಸಿ ಹೋಳಿ ಎರೆಚಿ ಸಂಭ್ರಮಿಸಲಾಯಿತು.

ಅಕ್ಕಸಾಲಿ ಗಿರಿರಾಜಾಚಾರ್, ಬೂದಗುಂಪಿ ಶಿವರಾಜ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ್, ಕೆ.ವಿ.ಸಂದೀಪ್ ಇತರರಿದ್ದರು.

ವಿವಿಧಡೆ ಪ್ರತಿಷ್ಠಾಪನೆ:

ಪಟ್ಟಣದ ದೇವಾಂಗಪೇಟೆಯ ಮಡ್ಡಿಕಟ್ಟೆ, ವೀರತ್‌ಪೇಟೆ ಬಸವೇಶ್ವರ ಗುಡಿ, ಮೇಲ್ಗಡೆ ಪೇಟೆ ಬನಶಂಕರಿ ಗುಡಿ, ಪೇಟೆ ಬಸವೇಶ್ವರ ತೇರಿನ ಮನೆ, ಕೋಟೆ ವೀರಭದ್ರೇಶ್ವರ ಗುಡಿ, ಅಮೃತಶಿಲಾ ರಾಮಚಂದ್ರ ಗುಡಿ, ಆದೋನಿ ಮಸೀದಿ ಬಳಿಯ ಗುಗ್ರಿಕಟ್ಟೆ ಬಸವೇಶ್ವರ ದೇವಸ್ಥಾನ, ಸಕ್ಕರೆ ಕಾರ್ಖಾನೆ ಪ್ರದೇಶಗಳಲ್ಲಿ, ಕಾಮ, ರತಿದೇವಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಹೋಳಿ ಹುಣ್ಣಿಮೆಯ ದಿನವಾದ ಶುಕ್ರವಾರ ಸಂಜೆ ಕಾಮನ ಹಾಡನ್ನು ಹಾಡುತ್ತ ಕಾಮನಪಟ ಮೆರವಣಿಗೆ ನಡೆಸಲಾಯಿತು. ನಂತರ ಮಧ್ಯರಾತ್ರಿ ಕಾಮ ಮತ್ತು ರತಿಯರ ಚಿತ್ರಪಟವನ್ನು ದಹಿಸಲಾಯಿತು.

Share this article