ಉದ್ಯಮಿಗಳಾಗಿ ಆರ್ಥಿಕ ಸ್ವಾವಲಂಬಿಯಾಗಲು ಮಹಿಳೆಯರಿಗೆ ಕರೆ: ಯಶೋದಾ ದ್ವಾವಪ್ಪನವರ

KannadaprabhaNewsNetwork |  
Published : Nov 25, 2026, 02:15 AM IST
ತಿಳವಳ್ಳಿಯಲ್ಲಿ ಮಹಿಳಾ ಕೌಶಲ್ಯ ಅಭಿವೃದ್ಧಿ ಕುರಿತ ಕಾರ್ಯಾಗಾರ ಉದ್ಘಾಟಿಸುತ್ತಿರುವ ಕೃಷಿ ಇಲಾಖೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯಶೋಧಾ  ದ್ಯಾವಪ್ಪನವರ, ಮಾರುತಿ ಶಿಡ್ಲಾಪೂರ, ವಿನ್ಸಂಟ್ ಜೇಸನ್, ವೀಣಾ ಕೋರಿಶೆಟ್ಟರ ಮೊದಲಾದವರು ಇದ್ದರು. | Kannada Prabha

ಸಾರಾಂಶ

ಎಲ್ಲರಿಗೂ ಪ್ರತಿಭೆ ಇದೆ. ಅದನ್ನು ಸಕಾಲಿಕವಾಗಿ ಸದುಪಯೋಗ ಮಾಡಿಕೊಳ್ಳುವ ಇಚ್ಛಾಶಕ್ತಿ ಇದ್ದರೆ ಮಾತ್ರ ಉದ್ಯಮ ವ್ಯವಹಾರಗಳಲ್ಲಿ ಯಶಸ್ಸು ಸಾಧ್ಯ ಎಂದು ಕೃಷಿ ಇಲಾಖೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯಶೋದಾ ದ್ಯಾವಪ್ಪನವರ ತಿಳಿಸಿದರು.

ಹಾನಗಲ್ಲ: ಎಲ್ಲರಿಗೂ ಪ್ರತಿಭೆ ಇದೆ. ಅದನ್ನು ಸಕಾಲಿಕವಾಗಿ ಸದುಪಯೋಗ ಮಾಡಿಕೊಳ್ಳುವ ಇಚ್ಛಾಶಕ್ತಿ ಇದ್ದರೆ ಮಾತ್ರ ಉದ್ಯಮ ವ್ಯವಹಾರಗಳಲ್ಲಿ ಯಶಸ್ಸು ಸಾಧ್ಯ ಎಂದು ಕೃಷಿ ಇಲಾಖೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯಶೋದಾ ದ್ಯಾವಪ್ಪನವರ ತಿಳಿಸಿದರು.

ಹಾನಗಲ್ಲ ತಾಲೂಕಿನ ತಿಳವಳ್ಳಿಯಲ್ಲಿ ಲೋಯಲಾ ವಿಕಾಸ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ಮಹಿಳಾ ಕೌಶಲ್ಯ ಅಭಿವೃದ್ಧಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾಹಿತಿ ಮಾರ್ಗದರ್ಶನ ಮಾಡಿದರು. ನಮ್ಮ ನಮ್ಮ ಕೆಲಸದಲ್ಲಿ ಹೆಮ್ಮೆ ಇರಬೇಕು. ಪ್ರಾಮಾಣಿಕತೆ ಅದು ಪ್ರಮುಖ ಸಂಗತಿ. ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನಮ್ಮದಾಗಲಿ. ಕಲಿಕೆ ಗಳಿಕೆ ಉಳಿಕೆಗಳು ನಮ್ಮ ಕೌಟುಂಬಿಕ ಆರ್ಥಿಕ ವ್ಯವಸ್ಥೆಯನ್ನು ಸುಗಮಗೊಳಿಸಬಲ್ಲವು. ಎಲ್ಲರೂ ಸ್ವಾವಲಂಬಿಗಳಾಗಲು ಸಾಧ್ಯ. ನಮ್ಮನ್ನು ನಾವು ಉದ್ಯಮ ಕ್ಷೇತ್ರದಲ್ಲಿ ಬೆಳೆಸಿಕೊಳ್ಳಲು ಸಮಯ ಪ್ರಜ್ಞೆ ಬಲು ಮುಖ್ಯವಾದುದು, ಕಾಲವನ್ನು ದುಡಿಸಿಕೊಳ್ಳುವವರು ಸಬಲ ಉದ್ಯಮಿಗಳಾಗಲು ಸಾಧ್ಯ. ಇಂದು ಅಲಂಕಾರಿಕ ವಸ್ತುಗಳಿಗೆ ಹೆಚ್ಚು ಬೆಲೆ ಬರುತ್ತಿದೆ. ಕಡಿಮೆ ಶ್ರಮದಲ್ಲಿ ಹೆಚ್ಚು ಆದಾಯ ಪಡೆಯಬಹುದಾದ ಉದ್ಯಮ ಇದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುಡಿ ಕೈಗಾರಿಕೆ ಹಾಗೂ ಉದ್ಯಮಕ್ಕೆ ಪ್ರೋತ್ಸಾಹ ಧನದೊಂದಿಗೆ ಬೆಂಬಲಿಸುತ್ತಿವೆ. ಇದರ ಸರಿಯಾದ ಪ್ರಯೋಜನ ಪಡೆಯುವುದು ಮಾತ್ರ ಪ್ರತಿಭಾವಂತರಿಗೆ ಸಾಧ್ಯ ಎಂಧರು.

ಅಧ್ಯಕ್ಷತೆವಹಿಸಿ ಮಾತನಾಡಿದ ಲೋಯಲಾ ವಿಕಾಸ ಕೇಂಧ್ರದ ನಿರ್ದೇಶಕ ವಿನ್ಸಂಟ ಜೇಸನ್, ಬದುಕಿನ ಹಿತ ಚಿಂತನೆಗೆ ನಮ್ಮ ಆಲೋಚನೆಗಳು ಫಲಪ್ರದವಾಗಿ ಕಾರ್ಯರೂಪಕ್ಕೆ ಬರಬೇಕು. ಜಗತ್ತು ಮುಷ್ಟಿಯಲ್ಲಿ ಸಿಗುವ ಕಾಲದಲ್ಲಿದ್ದೇವೆ. ಇಂದು ಉದ್ಯಮ ಕ್ಷೇತ್ರದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬಷ್ಟು ಬೆಳವಣಿಗೆ ಹಾಗೂ ಮಾಹಿತಿ ಲಭ್ಯವಿದೆ. ಆದರೆ ಅದನ್ನು ಸಕಾಲಿಕವಾಗಿ ಬಳಸಿಕೊಂಡು ಬೆಳೆಯುವವರಿಗೆ ಮಾತ್ರ ಇಲ್ಲಿ ಅವಕಾಶಗಳಿವೆ. ಇಂದು ಹಳ್ಳಿ ಪಟ್ಟಣಗಳೆಂಬ ಬೇಧವಿಲ್ಲ. ಎಲ್ಲೆಡೆ ಎಲ್ಲವೂ ಸುಲಭವಾಗಿ ಸಿಗುವ ಕಾಲದಲ್ಲಿ ನಾವಿರುವಾಗ ಅದನ್ನು ಬಳಸಿಕೊಳ್ಳದೇ ವಿಫಲವಾದರೆ ಅದು ನಮ್ಮ ಲೋಪ. ಕಾಲ ಕಾಲಕ್ಕೆ ನಮ್ಮ ಯೋಜನೆ ಯೋಚನೆಗಳು ಬೆಳೆಯುತ್ತ ಹೋಗಬೇಕು. ಆಗ ನಮಗೆ ಎಲ್ಲವೂ ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಉದ್ಯಮ ಕ್ಷೇತ್ರದಲ್ಲಿ ಈಗ ಒಳ್ಳೆಯ ಅವಕಾಶಗಳು ತೆರೆದುಕೊಂಡಿವೆ. ಇಲ್ಲಿಯ ವಸ್ತು ಆಹಾರ ಪದಾರ್ಥಗಳು ವಿದೇಶದಲ್ಲಿ ಬೇಡಿಕೆ ಪಡೆದಿವೆ. ಅದನ್ನು ಕೇಳುತ್ತ ನೋಡುತ್ತ ಕುಳಿತರೆ ಸಾಲದು. ಇದು ನನ್ನಿಂದಲೂ ಸಾಧ್ಯ ಎಂಬ ವಿಶ್ವಾಸದಲ್ಲಿ ಕ್ರಿಯಾಶೀಲಗೊಂಡು ಸಮಯ, ಪರಿಶ್ರಮ ನೀಡಿದರೆ ಮಾತ್ರ ಅದು ಫಲ ನೀಡಬಲ್ಲದು. ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಪ್ರತಿಭೆಗಳಿವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಆದರೆ ಪ್ರತಿಭಗಳೇ ಕೀಳರಿಮೆಗೆ ಒಳಗಾದರೆ ಅದು ಅವರ ವೈಫಲ್ಯ. ನೋಡಿ ಕೇಳಿ ತಿಳಿದು ಮುಂದೇ ಸಾಗೋಣ ಎಂದರು.

ಮಾರ್ಗದರ್ಶಕ ಶಿಕ್ಷಕಿ ವೀಣಾ ಕೋರಿಶೆಟ್ಟರ, ಲೋಯಲಾ ವಿಕಾಸ ಕೇಂದ್ರದ ಸಾಮಾಜಿಕ ಕಾರ್ಯಕರ್ತೆ ಹೊನ್ನಮ್ಮ ಶೆಡ್ಡೆಣ್ಣನವರ, ಸಾವಿತ್ರಾ ಜಾಧವ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ
ಅಂತೂ ಸುಂಕಸಾಳದ 34 ಮಕ್ಕಳಿಗೆ ಸಿಕ್ಕಿತು ಸುರಕ್ಷಿತ ನೆಲೆ!