ಸುಂಕಸಾಳ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 75 ವರ್ಷಗಳ ಇತಿಹಾಸ ಹೊಂದಿರುವ ಹಳೆಯ ಕಟ್ಟಡದ ನಾಲ್ಕು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದವು.
ರಾಘು ಕಾಕರಮಠ
ಅಂಕೋಲಾ: ಕುಸಿಯುವ ಹಂತದಲ್ಲಿರುವ ಶಾಲಾ ಕಟ್ಟಡದಡಿ ಜೀವಭಯದಲ್ಲೇ ಪಾಠ ಕಲಿಯುತ್ತಿದ್ದ 34 ವಿದ್ಯಾರ್ಥಿಗಳ ಆತಂಕಕ್ಕೆ ಕೊನೆಗೂ ಶಿಕ್ಷಣ ಇಲಾಖೆ ಸ್ಪಂದಿಸಿದೆ. ತಾಲೂಕಿನ ಸುಂಕಸಾಳ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆಯ ಕಟ್ಟಡದಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಇದೀಗ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುವ ಮೂಲಕ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ.ಸುಂಕಸಾಳ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 75 ವರ್ಷಗಳ ಇತಿಹಾಸ ಹೊಂದಿರುವ ಹಳೆಯ ಕಟ್ಟಡದ ನಾಲ್ಕು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದವು. ಕಟ್ಟಡದ ಅಡಿಪಾಯ ಕುಸಿದಿದ್ದು, ಗೋಡೆಗಳ ಆಸರೆಯಲ್ಲಿಯೇ ಕಟ್ಟಡ ನಿಂತಿದೆ ಎನ್ನುವ ಆತಂಕಕಾರಿ ಸಂಗತಿಯನ್ನು ಒಳಗೊಂಡಂತೆ, ಮಕ್ಕಳ ಸುರಕ್ಷತೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕನ್ನಡಪ್ರಭ ನ. 19ರಂದು "ನಿತ್ಯ ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವ ಸುಂಕಸಾಳ ಶಾಲೆ ವಿದ್ಯಾರ್ಥಿಗಳು'''' ಎಂಬ ಶೀರ್ಷಿಕೆಯಡಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು.
ವರದಿಗೆ ಸ್ಪಂದಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯತ್ತ ಗಮನಹರಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಟಿ. ನಾಯಕ ಅವರು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಈ ವೇಳೆ ಶಿಥಿಲ ಕಟ್ಟಡದಲ್ಲಿ ಮಕ್ಕಳನ್ನು ಮುಂದುವರಿಸಿ ಅಭ್ಯಾಸ ಮಾಡಿಸುವುದು ಸುರಕ್ಷಿತವಲ್ಲ ಎಂಬ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪರ್ಯಾಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.ಅಲ್ಲದೆ, ಅಪಾಯಕಾರಿಯಾಗಿರುವ ಹಳೆಯ ಕಟ್ಟಡವನ್ನು ನೆಲಸಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿಆರ್ಪಿ ರಾಮನಾಥ ನಾಯ್ಕ, ದೈಹಿಕ ಪರಿವೀಕ್ಷಕ ಮಂಜುನಾಥ ನಾಯಕ ಪರಿಶೀಲನಾ ತಂಡದಲ್ಲಿದ್ದರು. ಮುಖ್ಯಾಧ್ಯಾಪಕಿ ವೀಣಾ ನಾಯ್ಕ, ಶೈಲಾ ನಾಯ್ಕ ಸೇರಿದಂತೆ ಎಸ್ಡಿಎಂಸಿ ಪ್ರತಿನಿಧಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ನೂತನ ಕಟ್ಟಡದ ನಿರೀಕ್ಷೆ: ಹಳೆಯ ಕಟ್ಟಡದಿಂದ ಮಕ್ಕಳನ್ನು ಸ್ಥಳಾಂತರಿಸಿರುವುದು ಪಾಲಕರ ಆತಂಕವನ್ನು ಕೊಂಚ ಮಟ್ಟಿಗೆ ದೂರಮಾಡಿದೆ. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೇ. ಹಲವು ತಲೆಮಾರುಗಳಿಗೆ ವಿದ್ಯಾದಾನ ಮಾಡಿದ 75 ವರ್ಷಗಳ ಶಾಲೆಗೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಹೀಗಾಗಿ ಹಳೆಯ ಕಟ್ಟಡ ತೆರವುಗೊಳಿಸುವುದರ ಜತೆಗೆ, ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಸೌಲಭ್ಯಗಳಿರುವ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೂ ಸರ್ಕಾರ ತ್ವರಿತವಾಗಿ ಅನುದಾನ ಒದಗಿಸಬೇಕಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಸಂದೀಪ ಅಶೋಕ ನಾಯ್ಕ ತಿಳಿಸಿದರು.