ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಕುಟುಂಬದ ಸದಸ್ಯರು ಮತ್ತು ಅವರ ನೆರೆಹೊರೆಯವರು ಹಮ್ಮಿಕೊಂಡ ಅಭಿಯಾನದ ಪರಿಣಾಮ ಬಹುತೇಕ ಮನೆಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಆಹಾರ ನೀಡುವ ವ್ಯವಸ್ಥೆ ತಾಲೂಕಿನಾದ್ಯಂತ ಈಡೇರಿದೆ.
ಉರಿ ಬಿಸಿಲಿಗೆ ಪ್ರಾಣಿ- ಪಕ್ಷಿಗಳು ಕುಡಿಯಲು ನೀರು ಸಿಗದೆ ಪರದಾಡುತ್ತಿರುವುದನ್ನು ನೋಡಿ, ಮೂಕ ಪ್ರಾಣಿಗಳ ಬಾಯಾರಿಕೆ ನೀಗಿಸಲು ಮನೆಯ ಮುಂದುಗಡೆ ಸ್ವಲ್ಪ ನೀರು ಇಟ್ಟರೆ ಅದು ಪುಣ್ಯ ಪ್ರಧಾನ ಕಾರ್ಯವೆಂದು ರೋಟರಿಯ ಕೋಶಾಧ್ಯಕ್ಷ ಸಂದೀಪ ನಾಯಕ ಅಭಿಪ್ರಾಯಪಟ್ಟರು.
ಮನೆಯ ಹೊರಗಡೆ ಸಾರ್ವಜನಿಕ ರಸ್ತೆ ಅಂಚಿಗೆ ಪಕ್ಷಿಗಳಿಗಷ್ಟೇ ಅಲ್ಲದೇ ಜಾನುವಾರುಗಳ ದಾಹ ನಿವಾರಿಸಲು ಅರ್ಧ ಶತಮಾನಕ್ಕಿಂತ ಹೆಚ್ಚು ಸಮಯದಿಂದ ಪ್ರತಿದಿನ ತಪ್ಪದೇ ತಾವು ನಡೆಸಿಕೊಂಡು ಬಂದ ವ್ಯವಸ್ಥೆಯನ್ನು ಪ್ರದರ್ಶಿಸುತ್ತಾ, ತಮ್ಮ ಮನೆಯ ಉದ್ಯಾನವನದಲ್ಲಿ ಅನೇಕ ಜಲಸಸ್ಯಗಳ ಪಾಲನೆ ಮಾಡುತ್ತಿದ್ದುದಾಗಿಯೂ, ಸೊಳ್ಳೆಗಳು ಮೊಟ್ಟೆ ಇಡದಂತೆ ಅವುಗಳಲ್ಲಿ ಚಿಕ್ಕ ಮೀನುಗಳನ್ನು ಸಾಕಿರುವುದಾಗಿಯೂ ಆ ಮೂಲಕ ಜಲಸಸ್ಯಗಳ ಆರೈಕೆಯನ್ನು ಮಾಡುತ್ತಿರುವ ಪ್ರಾತ್ಯಕ್ಷಿಕೆಯನ್ನು ರೋಟರಿಯ ನಿಯೋಜಿತ ಅಧ್ಯಕ್ಷ ಅತುಲ್ ಕಾಮತ ವಿವರಿಸಿದರು.ಮನೆಯ ಸುತ್ತಮುತ್ತ, ಟೆರೇಸಿನ ಮೇಲೆ, ತೆರೆದ ಮಡಿಕೆ, ಹೂಜಿಯಲ್ಲಿ ನೀರಿಟ್ಟು ಚಿಕ್ಕಪುಟ್ಟ ಸ್ಥಳದಲ್ಲಿಯೇ ವ್ಯವಸ್ಥೆಗೆ ಅನುವು ಮಾಡಿಕೊಟ್ಟ ಹಲವರಿದ್ದಾರೆ. ಅಂತೆಯೇ ಕಚೇರಿಯಲ್ಲಿ ಬಳಸಿ, ವ್ಯರ್ಥವಾಗಿ ಉಳಿದಿದ್ದ ಪ್ಲಾಸ್ಟಿಕ್ ಕ್ಯಾನ್, ಮಿನರಲ್ ವಾಟರ್ ಬಾಟಲುಗಳಿಂದ ಈ ಪರಿಕರವನ್ನು ತಯಾರಿಸಿದ್ದು ಗಮನಾರ್ಹವಾಗಿದೆ.