ಆರೋಗ್ಯ ಸೇವೆಗೂ ಕುತ್ತು ತಂದ ಕಾರ್ಡ್‌

KannadaprabhaNewsNetwork |  
Published : Nov 22, 2024, 01:19 AM IST
564 | Kannada Prabha

ಸಾರಾಂಶ

ಬಿಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವೊಂದಿಷ್ಟು ಶಸ್ತ್ರಚಿಕಿತ್ಸೆಗಳಿಗೆ ಶೇ.70ರಷ್ಟು, ಕೆಲವೊಂದಿಷ್ಟಕ್ಕೆ ಶೇ.50ರಷ್ಟು ರಿಯಾಯಿತಿ ಇತ್ತು. ಕಾರ್ಡ್‌ ರದ್ದಾದರೆ ಅದು ಸಿಗುವುದಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ

ಬಿಪಿಎಲ್‌ ಕಾರ್ಡ್‌ ರದ್ದಾಗಿಲ್ಲ ಅಂದರೂ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಕೆಲವೊಂದಿಷ್ಟು ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಆದರೆ ಇದರಿಂದ ಪಡಿತರ ಪಡೆಯಲು ಅಷ್ಟೇ ತೊಂದರೆಯಾಗುತ್ತಿಲ್ಲ. ಬದಲಿಗೆ ಆರೋಗ್ಯಕ್ಕೂ ಕುತ್ತು ಎದುರಾಗಿದೆ; ಗೃಹಲಕ್ಷ್ಮಿಗೂ ಕಂಟಕ ಬಂದಂತಾಗಿದೆ. ಹೀಗಾದರೆ ಬಡವರು ಹೇಗೆ ಬದುಕಬೇಕು..!ಇದು ಬಿಪಿಎಲ್‌ ಕಾರ್ಡ್‌ಗಳನ್ನು ಮಾನ್ಯತೆ ಕಳೆದುಕೊಂಡಿರುವ ಫಲಾನುಭವಿಗಳ ಪ್ರಶ್ನೆ.

ಕಳೆದ ನಾಲ್ಕೈದು ದಿನಗಳಿಂದ ಬಿಪಿಎಲ್‌ ಗೊಂದಲ ಶುರುವಾಗಿದೆ. ಕಳೆದ ತಿಂಗಳಷ್ಟೇ ಪಡಿತರ ಪಡೆದಿದ್ದ ಸಾವಿರಾರು ಕುಟುಂಬಗಳಿಗೆ ಈ ತಿಂಗಳು ನೀವೀಗ ಬಿಪಿಎಲ್‌ ಕಾರ್ಡ್‌ದಾರರಲ್ಲ. ನಿಮಗೆ ಪಡಿತರ ಕೊಡಲ್ಲ ಎಂಬ ಮಾತು ನ್ಯಾಯಬೆಲೆ ಅಂಗಡಿಕಾರರಿಂದ ಬರುತ್ತಿದೆ. ಇದು ಒಂದೆಡೆ ಇಷ್ಟು ದಿನ ತುಂಬಿಸಿಕೊಳ್ಳುತ್ತಿದ್ದ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದರೆ, ಇನ್ನೊಂದಡೆ ಆರೋಗ್ಯದ ವಿಷಯಕ್ಕೂ ಬಿಪಿಎಲ್‌ ಕಾರ್ಡ್‌ದಾರರಿಗೆ ಸಾಕಷ್ಟು ಸೌಲಭ್ಯಗಳಿದ್ದವು. ಅವುಗಳಿಂದ ವಂಚಿತರಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಬಿಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವೊಂದಿಷ್ಟು ಶಸ್ತ್ರಚಿಕಿತ್ಸೆಗಳಿಗೆ ಶೇ.70ರಷ್ಟು, ಕೆಲವೊಂದಿಷ್ಟಕ್ಕೆ ಶೇ.50ರಷ್ಟು ರಿಯಾಯಿತಿ ಇತ್ತು. ಕೆಎಂಸಿಆರ್‌ಐನಂತಹ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ, ಎಕ್ಸರೇ, ಸ್ಕ್ಯಾನಿಂಗ್‌ ಸೇರಿದಂತೆ ಎಲ್ಲ ಪರೀಕ್ಷೆಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ಶೇ.50ರಷ್ಟು ಮಾತ್ರ ಶುಲ್ಕ ವಿಧಿಸಲಾಗುತ್ತಿದೆ. ಇದೀಗ ಅವುಗಳಿಂದ ವಂಚಿತವಾಗಬೇಕಾಗುತ್ತಿದೆ.

ರದ್ದಾಗಿಲ್ಲ:

ಯಾವ ಕಾರ್ಡ್‌ ರದ್ದುಪಡಿಸಿಲ್ಲ. ಆದರೆ, ಕೆಲ ತಿಂಗಳಿಂದ ಪಡಿತರ ಪಡೆಯದ ಜಿಲ್ಲೆಯಲ್ಲಿನ 2000ಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಅಮಾನತುಗೊಂಡಿರುವ ಕಾರ್ಡ್‌ಗಳನ್ನು ಪುನಃ ಸಕ್ರಿಯಗೊಳಿಸಿಕೊಳ್ಳಬೇಕೆಂದರೆ ಇಲಾಖೆ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಆಹಾರ ಇಲಾಖೆ ನಿರೀಕ್ಷಕರು ಆ ಮನೆಗೆ ಭೇಟಿ ನೀಡಿ ಮತ್ತೆ ಪರಿಶೀಲಿಸಿ ಬಳಿಕ ಕಾರ್ಡ್‌ನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಅಲ್ಲಿವರೆಗೂ ಆ ಕಾರ್ಡ್‌ ಇದ್ದು ಇಲ್ಲದಂತಾಗಿರುತ್ತದೆ. ಆದರೆ ಇದು ಅಷ್ಟು ಸುಲಭವಾಗಿ ಇಲಾಖೆ ಅಧಿಕಾರಿಗಳು ಮಾಡಲ್ಲ.

ಇನ್ನು ಕೆಲವೊಂದಿಷ್ಟು ಅರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಅನರ್ಹ ಎಂದು ಪರಿಗಣಿಸಿ ಎಪಿಎಲ್‌ ಕಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಇವರಂತೂ ಮುಂದೆ ಬಿಪಿಎಲ್‌ ಕಾರ್ಡ್‌ ಪಡೆಯಲು ಹರಸಾಹಸವೇ ಪಡಬೇಕಾಗುತ್ತದೆ. ಅದು ಕೂಡ ಮತ್ತೆ ಬಿಪಿಎಲ್‌ ಕಾರ್ಡ್‌ದಾರರಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲದಂತಾಗಿದೆ. ಬಿಪಿಎಲ್‌ ಸೌಲಭ್ಯಗಳಿಂದ ವಂಚಿತವೇ ಆಗಬೇಕಾಗುತ್ತದೆ ಎಂಬ ಗೋಳಾಟ ಫಲಾನುಭವಿಗಳದ್ದು.

ಗೃಹಲಕ್ಷ್ಮಿಗೂ ಕುತ್ತು:

ಇನ್ನು ಕಾರ್ಡ್‌ ರದ್ದಾಗಿದ್ದರೂ ಗೃಹಲಕ್ಷ್ಮಿ ಹಣಕ್ಕೆ ಮಾತ್ರ ಯಾವುದೇ ಕುತ್ತಿಲ್ಲ. ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ ಆಗಿ ಬದಲಾಗಿದ್ದರೂ, ತೆರಿಗೆ ಕಟ್ಟದಿದ್ದರೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟಪಡಿಸಿದ್ದಾರೆ. ಆದರೆ ಅಮಾನತಾಗಿರುವ ಕಾರ್ಡ್‌ಗಳ ಫಲಾನುಭವಿಗಳಿಗೆ ಅದ್ಹೇಗೆ ದುಡ್ಡು ಹಾಕಲು ಬರುತ್ತದೆ. ಅವರ ಕಾರ್ಡ್‌ ಮತ್ತೆ ಆ್ಯಕ್ಟಿವ್‌ ಆಗುವವರೆಗೂ ದುಡ್ಡು ಬರುವುದಿಲ್ಲ. ಅಮಾನತು ಆಗಿರುವ ಕಾರ್ಡ್‌ಗಳನ್ನು ಆ್ಯಕ್ಟಿವ್‌ ಮಾಡುತ್ತಾರೋ ಇಲ್ಲವೋ ಅದು ಗೊತ್ತಿಲ್ಲ ಎಂಬ ಪ್ರಶ್ನೆ ಮಹಿಳೆಯರದು.

ಒಟ್ಟಿನಲ್ಲಿ ಬಿಪಿಎಲ್‌ ಕಾರ್ಡ್‌ನ ಗೊಂದಲ ಮಾತ್ರ ಯಥಾಸ್ಥಿತಿಯಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದಷ್ಟು ಬೇಗನೆ ಈ ಗೊಂದಲ ನಿವಾರಿಸಲು ಅಧಿಕಾರಿ ವರ್ಗ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒಕ್ಕೊರಲಿನ ಆಗ್ರಹ.ಅನರ್ಹರಿದ್ದರೆ ಅಂಥವರ ಕಾರ್ಡ್‌ ಎಪಿಎಲ್‌ ಮಾಡಲಿ. ಅದು ಬಿಟ್ಟು ಅರ್ಹರ ಕಾರ್ಡ್‌ ಸಹ ಎಪಿಎಲ್‌ ಮಾಡಲಾಗುತ್ತಿದೆ. ನಾವು ತೆರಿಗೆ ಪಾವತಿಸುವಷ್ಟು ದುಡಿಮೆಯನ್ನೇ ಮಾಡಲ್ಲ. ಆದರೂ ನಮ್ಮ ಕಾರ್ಡ್‌ಗಳು ಅನರ್ಹರ ಪಟ್ಟಿಯಲ್ಲಿ ಸೇರಿಸಲಾಗಿದೆ ಅದ್ಹೇಗೆ? ಎಂದು ನಾಗರಿಕ ಶ್ರೀಧರ ಹೇಳಿದರು.

ಬಿಪಿಎಲ್‌ ಕಾರ್ಡ್‌ ವಿಷಯವಾಗಿ ಬಡವರ ಹೊಟ್ಟೆ ಮೇಲಷ್ಟೇ ಅಲ್ಲ. ಅವರ ಆರೋಗ್ಯದ ಮೇಲೂ ಸರ್ಕಾರ ಹೊಡೆತ ಕೊಡುತ್ತಿದೆ. ತಾತ್ಕಾಲಿಕ ಅಮಾನತು ಮಾಡಿರುವ ಕಾರ್ಡ್‌ಗಳ ಸಸ್ಪೆಂಡ್‌ನ್ನು ರಿವೋಕ್‌ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಪಿಎಲ್‌ ಕಾರ್ಡ್‌ದಾರ ಮಂಜುನಾಥ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾರ್ಥನೆ ಮಾತಿನ ಬೆನ್ನಲ್ಲೇ ಡಿಕೆಶಿ ಇಂದು ದಿಲ್ಲಿ ಭೇಟಿ ಕುತೂಹಲ
ಧಮ್ಕಿ ರಾಜೀವ್‌ಗೌಡ ವಿರುದ್ಧ 2 ಕೇಸ್‌, ಬೆನ್ನಲ್ಲೇ ನಾಪತ್ತೆ